ಕಾಣಿಯೂರು: ಭಾರತೀಯ ಜನತಾ ಪಾರ್ಟಿಯ ಕರ್ನಾಟಕ ರಾಜ್ಯಾಧ್ಯಕ್ಷ, ದ.ಕ.ಸಂಸದ ನಳಿನ್ ಕುಮಾರ್ ಕಟೀಲ್ ಅವರ ಕುಂಜಾಡಿ ಮನೆಯಲ್ಲಿ ವಿಶೇಷ ಪೂಜೆ, ಹೋಮ ಹವನಗಳು ನಡೆಯುತ್ತಿದೆ. ಜೂ.11ರಂದು ಕಾರ್ಯಕ್ರಮ ಆರಂಭಗೊಂಡಿದ್ದು, ಜೂ.18ರವರೆಗೆ ನಡೆಯಲಿದೆ. ಈ ಹೋಮದ ಜವಾಬ್ದಾರಿಯನ್ನು ವಿದ್ವಾನ್ ಬಾಲಕೃಷ್ಣ ಕಾರಂತ್ ವಹಿಸಿದ್ದಾರೆ. ನಳಿನ್ ಕುಮಾರ್ ಕಟೀಲ್ ಅವರ ಕುಟುಂಬಕ್ಕೆ ಸಂಬಂಧಪಟ್ಟು ವರ್ಷಂಪ್ರತಿ ನಡೆಯುವ ಹೋಮ ಇದಾಗಿದೆ ಮತ್ತು ಅವರ ಅರೋಗ್ಯದ ದೃಷ್ಟಿಯಿಂದ ಈ ವಿಶೇಷ ಪೂಜೆ, ಹೋಮ ಹವನಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಆದರೆ,ತಾನು ಮೂಲೆಗುಂಪಾಗುವ ಭಯದಿಂದ ಉನ್ನತ ಸ್ಥಾನಮಾನ ಪ್ರಾಪ್ತಿಗಾಗಿ ಗೌಪ್ಯವಾಗಿ ಹೋಮ, ಹವನ ನಡೆಸಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಪೇಜಾವರ ಶ್ರೀ ಭಾಗಿ?: ಜೂ.15ರಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. ರಾಮಕುಂಜೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪೇಜಾವರ ಶ್ರೀಗಳು ನಳಿನ್ ಕುಮಾರ್ ಕಟೀಲ್ ಅವರ ಮನೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೂ ಭೇಟಿ ನೀಡಿದ್ದರು ಎಂದು ಹೇಳಲಾಗುತ್ತಿದೆ. ಆದರೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ಜೂ.11ರಿಂದ 18ರ ತನಕ ವಿಶೇಷ ಹೋಮ, ಹವನಾದಿ ಕಾರ್ಯಕ್ರಮಗಳು ನಳಿನ್ ಕುಮಾರ್ ಕಟೀಲ್ ಅವರ ಮನೆಯಲ್ಲಿ ನಡೆಯುತ್ತಿದ್ದು ಜಮೀನಿನ ಮುಖ್ಯದ್ವಾರವನ್ನು ಸಂಪೂರ್ಣ ಮುಚ್ಚಿ ಗೌಪ್ಯವಾಗಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲಿನ ಬಳಿಕ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಯನ್ನು ತ್ಯಜಿಸುವ ಅನಿವಾರ್ಯತೆಯೊಂದಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪುವ ಸಾಧ್ಯತೆಯೂ ಇರುವ ಹಿನ್ನಲೆಯಲ್ಲಿ, ತಾನು ಮೂಲೆಗುಂಪಾಗುವ ಭಯ ಕಟೀಲ್ ಅವರನ್ನು ಕಾಡುತ್ತಿದ್ದು, ಇವೆಲ್ಲದಕ್ಕೂ ಪರಿಹಾರಕ್ಕಾಗಿ ಮತ್ತು ತನಗೆ ಉನ್ನತ ಸ್ಥಾನಮಾನ ಸಿಗಬೇಕು ಎಂಬ ನಿಟ್ಟಿನಲ್ಲಿ ಈ ವಿಶೇಷ ಪೂಜಾ ಹವನ ಕೈಗೊಳ್ಳಲಾಗಿದೆ ಎಂಬಿತ್ಯಾದಿ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ ಅವರ ಆಪ್ತ ವಲಯ ಇದನ್ನು ನಿರಾಕರಿಸಿದ್ದು, ನಳಿನ್ ಕುಮಾರ್ ಕಟೀಲ್ ಅವರ ಮನೆಯಲ್ಲಿ ನಡೆಯುತ್ತಿರುವ ಪೂಜೆ, ಹೋಮ ಹವನಾದಿ ಕಾರ್ಯಕ್ರಮದಲ್ಲಿ ಪಕ್ಷದ ಪ್ರಮುಖರು ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದಾರೆ. ಜಮೀನಿನ ಯಾವುದೇ ಮುಖ್ಯದ್ವಾರವನ್ನು ಮುಚ್ಚಲಿಲ್ಲ ಮತ್ತು ಗೌಪ್ಯವಾಗಿ ಈ ಕಾರ್ಯಕ್ರಮ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.