ಸ್ವಾಗತ್ ಸ್ವೀಟ್ಸ್ ಮಾಲಕ ಜಯರಾಮ ಶೆಟ್ಟಿಯವರ ಶ್ರದ್ಧಾಂಜಲಿ ಸಭೆ

0

ಪುತ್ತೂರು: ಇತ್ತೀಚೆಗೆ ಅಗಲಿದ ಸಾಮೆತ್ತಡ್ಕ ನಿವಾಸಿ, ಸ್ವಾಗತ್ ಸ್ವೀಟ್ಸ್ ಮಾಲಕ ಉಳ್ಳಾಲ ಬಾರಿಕೆಗುತ್ತು ಜಯರಾಮ ಶೆಟ್ಟಿಯವರ ಶ್ರದ್ಧಾಂಜಲಿ ಸಭೆಯು ಜೂ.21 ರಂದು ತೆಂಕಿಲ-ಬೈಪಾಸ್ ರಸ್ತೆಯ ಸ್ವಾಮಿ ಕಲಾ ಮಂದಿರದಲ್ಲಿ ನೆರವೇರಿತು.


ಜಯರಾಮ ಶೆಟ್ಟಿಯವರ ಕುಟುಂಬ ಮಾದರಿ ಕುಟುಂಬವಾಗಿದೆ-ವಿನಯಕುಮಾರ್ ಸೊರಕೆ:
ಉಡುಪಿ ಮಾಜಿ ಸಂಸದ, ಮಾಜಿ ಸಚಿವರೂ ಆಗಿರುವ ವಿನಯಕುಮಾರ್ ಸೊರಕೆಯವರು ಮಾತನಾಡಿ, ಅಗಲಿದ ಜಯರಾಮ ಶೆಟ್ಟಿಯವರು ನಿಜಕ್ಕೂ ಓರ್ವ ಅಜಾತಶತ್ರು, ಅಪತ್ಬಾಂಧವರಾಗಿದ್ದರು. ಅವರ ವ್ಯಕ್ತಿತ್ವವನ್ನು ನಿಜಕ್ಕೂ ಮೆಚ್ಚುವಂತಹುದು. ಪುತ್ತೂರಿನಲ್ಲಿನ ಸುಜಾತಾ ಕುಟುಂಬ ಎಲ್ಲರಿಗೂ ಮಾದರಿ ಕುಟುಂಬವಾಗಿ ಪ್ರಸಿದ್ಧಿ ಪಡೆದಿದೆ ಎಂದರೆ ಸುಳ್ಳಲ್ಲ. ಸುಜಾತಾ ಕುಟುಂಬದ ಸಹೋದರರು, ಸಹೋದರಿಯರು ಪರಿಶ್ರಮ ಪಟ್ಟಿದ್ದರಿಂದ ಇಂದು ಸುಜಾತ ಕುಟುಂಬಕ್ಕೆ ಒಳ್ಳೆಯ ಹೆಸರು ಬಂದಿದೆ. ಜಯರಾಮ ಶೆಟ್ಟಿಯವರು ಮಿತಭಾಷಿಯದಾರೂ ಎಲ್ಲರನ್ನು ಬಹಳ ಆಧರದಿಂದ ನೋಡುವ ಸಂಸ್ಕಾರಯುತ ವ್ಯಕ್ತಿತ್ವವಾಗಿದೆ. ನನ್ನನ್ನು ಅವರ ಕುಟುಂಬದ ವ್ಯಕ್ತಿಯಂತೆ ಕಾಣುತ್ತಿದ್ದ ಸುಜಾತ ಕುಟುಂಬದಲ್ಲಿ ಬಹಳ ಆತ್ಮೀಯ ಸ್ನೇಹಭಾವವನ್ನು ಹೊಂದಿರುವ ಜಯರಾಮ ಶೆಟ್ಟಿಯವರು ಎಲ್ಲರಿಗೂ ಬಹಳ ಪ್ರೀತಿ ಪಾತ್ರರಾಗಿದ್ದವರು ಇಂದು ನಮ್ಮನ್ನು ಅವರು ಅಗಲಿದ್ದಾರೆ. ಅವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ಎಂಬುದೇ ನಮ್ಮ ಪ್ರಾರ್ಥನೆಯಾಗಿದೆ ಎಂದು ಹೇಳಿ ನುಡಿನಮನ ಸಲ್ಲಿಸಿದರು

ಜಯರಾಮ ಶೆಟ್ಟಿಯವರು ಕುಟುಂಬವನ್ನು ಪ್ರೀತಿಸುವವರಾಗಿದ್ದರು-ಸುರೇಶ್ ಶೆಟ್ಟಿ:

ಅಗಲಿದ ಜಯರಾಮ ಶೆಟ್ಟಿಯವರ ಸಹೋದರರಾಗಿರುವ ನಿವೃತ್ತ ಶಿಕ್ಷಕ ಸುರೇಶ್ ಶೆಟ್ಟಿ ಮಾತನಾಡಿ, ಜಯರಾಮ ಶೆಟ್ಟಿಯವರು ಓರ್ವ ಸತ್ಯಸಂಧ, ನಿಷ್ಕಳಂಕ, ಅನಘ ವ್ಯಕ್ತಿಯಾಗಿದ್ದು, ಕುಟುಂಬವನ್ನು ಬಹಳ ಪ್ರೀತಿಸುವವರಾಗಿದ್ದರು. ನನಗೆ ಅವರು ಬಹಳ ಆತ್ಮೀಯರಾಗಿದ್ದು, ನನ್ನ ದೇಹದ ಒಂದು ಭಾಗವೇ ಹೋದಂತಹ ಅನುಭವವಾಗುತ್ತಿದೆ. ಯಾಕೆಂದರೆ ಅವರು ನನ್ನೊಂದಿಗೆ ಬಹಳ ವರ್ಷ ಇದ್ದವರು. ಈಗ ಅವರ ಆತ್ಮ ಶಿವನ ಪಾದಕ್ಕೆ ಸೇರಿದ್ದು ಅವರ ಪವಿತ್ರಾತ್ಮಕ್ಕೆ ದೇವರು ಚಿರಶಾಂತಿಯನ್ನು ಕರುಣಿಸಲಿ ಎಂಬುದಾಗಿ ಪ್ರಾರ್ಥಿಸುತ್ತಾ ಶ್ರದ್ಧಾಂಜಲಿ ಅರ್ಪಿಸಿದರು.

ಜಯರಾಮ ಶೆಟ್ಟಿಯವರು ಸ್ನೇಹಪರತೆ, ಬಾಂಧವ್ಯ, ಸಂಬಂಧಕ್ಕೆ ಬೆಲೆ ಕೊಡುವವರಾಗಿದ್ದರು-ಪ್ರಕಾಶ್ ಶೆಟ್ಟಿ:
ಅಗಲಿದ ಜಯರಾಮ ಶೆಟ್ಟಿಯವರ ಸಹೋದರ, ಪ್ರಸ್ತುತ ಮೈಸೂರಿನಲ್ಲಿ ಉದ್ಯಮ ನಡೆಸುತ್ತಿರುವ ಪ್ರಕಾಶ್ ಶೆಟ್ಟಿ ಸ್ವಾಗತಿಸಿ ಮಾತನಾಡಿ, ಜಯರಾಮ ಶೆಟ್ಟಿ ಸಹೋದರರು ಅದಾಗಲೇ ಪ್ರಾರಂಭಿಸಿದಂತಹ ಸುಜಾತ ಹಾಗೂ ಸ್ವಾಗತ್ ಹೋಟೆಲ್ ಗ್ರೂಪ್‌ನೊಂದಿಗೆ ಸ್ವಾಗತ್ ಸ್ವೀಟ್ಸ್ ಎಂಬ ಉದ್ಯಮವನ್ನು ಪ್ರಾರಂಭಿಸಿದರು. ಕಾಲೇಜು ಜೀವನದ ಸಂದರ್ಭದಲ್ಲಿ ಜಯರಾಮ ಶೆಟ್ಟಿಯವರು ಶಿಕ್ಷಣದ ಕಡೆಗೆ ಅಷ್ಟೊಂದು ಒಲವು ಇಲ್ಲದಿದ್ದರೂ ಕಬಡ್ಡಿ, ಶಾಟ್‌ಫುಟ್, ಹಗ್ಗ-ಜಗ್ಗಾಟ, ಛದ್ಮವೇಶ ಸ್ಪರ್ಧೆಯಲ್ಲಿ ಭಾಗವಹಿಸಿ ಲವಲವಿಕೆಯ ಜೀವನ ನಡೆಸುತ್ತಿದ್ದರು. ಜಯರಾಮ ಶೆಟ್ಟಿಯವರು ಕೂಡು ಕುಟುಂಬದಲ್ಲಿ ಬದುಕಿದ್ದವರು. ಹೆಚ್ಚು ಕಡಿಮೆ 105 ಮಂದಿ ಜನರು ಈ ಕೂಡು ಕುಟುಂಬದಲ್ಲಿ ಜೀವನ ನಡೆಸುತ್ತಿದ್ದ ಕಾಲಘಟ್ಟದಲ್ಲಿ ಜಯರಾಮ ಶೆಟ್ಟಿಯವರು ಎಲ್ಲರಿಗೂ ಬಹಳ ಪ್ರೀತಿ ಪಾತ್ರರಾಗಿದ್ದವರು. ಯಾಕೆಂದರೆ ಅವರ ಸ್ನೇಹಪರತೆ, ಬಾಂಧವ್ಯ ಹಾಗೂ ಸಂಬಂಧಕ್ಕೆ ಬೆಲೆ ಕೊಡುತ್ತಿದ್ದ ರೀತಿ ಅಂತಹುದಾಗಿತ್ತು ಎಂದ ಅವರು ಹುಟ್ಟು ಆಕಸ್ಮಿಕ ಆದರೆ ಸಾವು ನಿಶ್ಚಿತವಾದರೂ ಹುಟ್ಟು-ಸಾವಿನ ನಡುವೆ ನಾವು ಹೇಗೆ ಜೀವಿಸುತ್ತಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಜಯರಾಮ ಶೆಟ್ಟಿಯವರ ಬದುಕು ಎಲ್ಲರಿಗೂ ಮಾದರಿಯಾಗಿತ್ತು ಎನ್ನಬಹುದು ಎಂದು ಹೇಳಿ ಶ್ರದ್ಧಾಂಜಲಿ ಅರ್ಪಿಸಿದರು.
ಮಂಗಳೂರು ಶಾಸಕ ಡಾ.ಭರತ್ ಶೆಟ್ಟಿ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಸಂತ ಫಿಲೋಮಿನಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ವಂ..ಎಫ್.ಎಕ್ಸ್ ಗೋಮ್ಸ್, ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸಹಕಾರಿ ರತ್ನ ಪುರಸ್ಕೃತ ಕೆ.ಸೀತಾರಾಮ ರೈ ಸವಣೂರು, ಮಂಗಳೂರಿನ ಎ.ಜೆ ಸಮೂಹ ಸಂಸ್ಥೆಗಳ ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ , ಸೋಜಾ ಉದ್ಯಮ ಸಂಸ್ಥೆಗಳ ವಿಲ್ಫ್ರೆಡ್ ಡಿ’ಸೋಜ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಕೋಟಿ-ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಹಿರಿಯರಾದ ಅರಿಯಡ್ಕ ಚಿಕ್ಕಪ್ಪ ನಾಯ್ಕ್, ಬಿಂದು ಸಮೂಹ ಸಂಸ್ಥೆಗಳ ಸತ್ಯಶಂಕರ್, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ನಮ್ಮ ಟಿ.ವಿಯ ಶಿವಶರಣ್ ಶೆಟ್ಟಿ, ಹಿರಿಯರಾದ ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಬಿಜೆಪಿ ಗ್ರಾಮಾಂತರ ಮಂಡಳಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯ ವಿಜಯಕುಮಾರ್ ಸೊರಕೆ, ಉದ್ಯಮಿ ಉಮೇಶ್ ನಾಡಾಜೆ ಮಂಗಳೂರು, ಉದ್ಯಮಿ ಶಿವರಾಂ ಆಳ್ವ, ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋ, ಕಬಡ್ಡಿ ಕೋಚ್ ಹಬೀಬ್ ಮಾಣಿ, ಮಕ್ಕಳ ತಜ್ಞರಾದ ಡಾ.ಎಂ.ಎಸ್ ಶೆಣೈ, ಡಾ.ಶ್ರೀಕಾಂತ್ ರಾವ್ ಸಹಿತ ಹಲವರು ಆಗಮಿಸಿ ಶ್ರದ್ಧಾಂಜಲಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಅಗಲಿದ ಜಯರಾಮ ಶೆಟ್ಟಿಯವರ ಪತ್ನಿ ಇಂದ್ರಾಳಿಮನೆ ಉಮಾ ಜೆ.ಶೆಟ್ಟಿ, ಪುತ್ರ ಡಾ.ಶರಣ್ ಶೆಟ್ಟಿ, ಪುತ್ರಿ ಡಾ.ಶ್ರೇಯ ಶೆಟ್ಟಿ, ಸೊಸೆ ಕೀರ್ತಿ, ಅಳಿಯ ಪ್ರತೀನ್ ಶೆಟ್ಟಿ, ಸಹೋದರ ಪ್ರಭಾಕರ ಶೆಟ್ಟಿ, ಸಹೋದರಿ ಸುಲೋಚನಾ ಶೆಟ್ಟಿ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.

ಮೌನ ಪ್ರಾರ್ಥನೆ – ಪುಷ್ಪಾರ್ಚನೆ
ಶ್ರದ್ಧಾಂಜಲಿ ಸಭೆಯಲ್ಲಿ ಸಾವಿರಕ್ಕೂ ಮಿಕ್ಕಿ ಸ್ವಾಗತ್ ಸ್ವೀಟ್ಸ್ ಮಾಲಕ ಜಯರಾಮ ಶೆಟ್ಟಿಯವರ ಕುಟುಂಬಿಕರು, ಹಿತೈಷಿಗಳು, ಆತ್ಮೀಯರು ಭಾಗವಹಿಸಿದ್ದು, ಎಲ್ಲರೂ ಸೇರಿ ಜಯರಾಮ ಶೆಟ್ಟಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯ್ದು ಶ್ರದ್ಧಾಂಜಲಿ ಅರ್ಪಿಸಿದರು. ಈ ಸಂದರ್ಭದಲ್ಲಿ ಸಭೆಯಲ್ಲಿ ಹಾಜರಿದ್ದವರು ಎದ್ದು ನಿಂತು ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಿ ಜಯರಾಮ ಶೆಟ್ಟಿಯವರ ಆತ್ಮಕ್ಕೆ ಭಗವಂತನಲ್ಲಿ ಚಿರಶಾಂತಿಯನ್ನು ಕೋರಲಾಯಿತು. ಅಲ್ಲದೆ ಅಗಲಿದ ಜಯರಾಮ ಶೆಟ್ಟಿಯವರ ಬಾಲ್ಯದಿಂದ ಅಗಲುವಿಕೆಯವರೆಗಿನ ಕುಟುಂಬದಲ್ಲಿನ ಒಡನಾಟದ ಭಾವಚಿತ್ರಗಳನ್ನು ಎಲ್‌ಇಡಿ ಸ್ಕ್ರೀನ್ ಮೂಲಕ ಪ್ರಸ್ತುತಪಡಿಸಲಾಯಿತು.

LEAVE A REPLY

Please enter your comment!
Please enter your name here