ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಅವ್ಯವಸ್ಥೆ-ನೆಲ್ಯಾಡಿಯ ನಿಯೋಗದಿಂದ ಸಂಸದರ ಭೇಟಿ

0

ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ.ರೋಡ್-ಅಡ್ಡಹೊಳೆ ನಡುವೆ ಚತುಷ್ಪಥ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಯಿಂದಾಗಿ ನೆಲ್ಯಾಡಿ ಪೇಟೆಯಲ್ಲಿ ಆಗಿರುವ ಸಮಸ್ಯೆಗಳ ಕುರಿತಂತೆ ನೆಲ್ಯಾಡಿಯ ವರ್ತಕರ ಹಾಗೂ ಕಟ್ಟಡ ಮಾಲಕರ ನಿಯೋಗ ಮತ್ತು ಗೋಳಿತ್ತೊಟ್ಟಿನ ನಿಯೋಗವೊಂದು ಜೂ.21ರಂದು ಮಂಗಳೂರಿನ ಸಂಸದರ ಕಚೇರಿಯಲ್ಲಿ ಸಂಸದ ನಳಿನ್‌ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದೆ. ಈ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಲಾಖೆಯ ಅಧಿಕಾರಿಗಳೂ ಉಪಸ್ಥಿತರಿದ್ದರು.


ಅಸಮರ್ಪಕ ಕಾಮಗಾರಿಯಿಂದಾಗಿ ನೆಲ್ಯಾಡಿ ಪೇಟೆಯಲ್ಲಿ ಆಗಿರುವ ಸಮಸ್ಯೆಯ ಬಗ್ಗೆ ವರ್ತಕರ ಹಾಗೂ ಕಟ್ಟಡ ಮಾಲಕರ ನಿಯೋಗ ಸಂಸದರ ಗಮನಕ್ಕೆ ತಂದಿತು. ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ಗಮನಹರಿಸಿ ಸ್ಥಳೀಯರೊಂದಿಗೆ ಮಾತುಕತೆ ನಡೆಸಿ ಬಗೆಹರಿಸುವಂತೆ ಸಂಸದರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಗೋಳಿತ್ತೊಟ್ಟಿನಲ್ಲಿ ಉಂಟಾಗಿರುವ ಸಮಸ್ಯೆ ಬಗ್ಗೆಯೂ ಸಂಸದರ ಗಮನಕ್ಕೆ ತರಲಾಯಿತು.


ಜಿ.ಪಂ.ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲು, ನೆಲ್ಯಾಡಿ ಕೌಕ್ರಾಡಿ ಕಟ್ಟಡ ಮಾಲಕರ ಸಂಘದ ಗೌರವಾಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಉಪಾಧ್ಯಕ್ಷ ಗಣೇಶ್ ಕೆ ರಶ್ಮಿ, ಪ್ರಧಾನ ಕಾರ್ಯದರ್ಶಿ ರವಿಚಂದ್ರ ಹೊಸವಕ್ಲು, ಸದಸ್ಯ ಮಹಮ್ಮದ್ ಪುತ್ತು, ಗೋಳಿತೊಟ್ಟು ಗ್ರಾ.ಪಂ. ಅಧ್ಯಕ್ಷ ಜನಾರ್ದನ ಪಟೇರಿ, ಸದಸ್ಯ ಬಾಲಕೃಷ್ಣ ಅಲೆಕ್ಕಿ, ನೆಲ್ಯಾಡಿ ಗ್ರಾ.ಪಂ. ಸದಸ್ಯ ರವಿಪ್ರಸಾದ್ ಶೆಟ್ಟಿ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಕಮಲಾಕ್ಷ ಪಂಡಿತ್, ಗೋಳಿತ್ತೊಟ್ಟು ಶ್ರೀ ಸಿದ್ದಿವಿನಾಯಕ ಕಲಾಮಂದಿರದ ಅಧ್ಯಕ್ಷ ವೆಂಕಪ್ಪ ಗೌಡ ಡೆಬ್ಬೇಲಿ, ಅಣ್ಣಿ ಎಲ್ತಿಮಾರ್, ಚರಣ್ ಪೂವಾಜೆ ಉಪಸ್ಥಿತರಿದ್ದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು, ಕಾಮಗಾರಿ ಗುತ್ತಿಗೆದಾರರಾದ ಕೆಎನ್‌ಆರ್‌ಸಿ ಕಂಪನಿಯ ಇಂಜಿನಿಯರ್‌ಗಳು ಉಪಸ್ಥಿತರಿದ್ದರು.

ಜೂ.26ರಂದು ಸ್ಥಳ ಭೇಟಿ:
ಬಿ.ಸಿ.ರೋಡ್-ಅಡ್ಡಹೊಳೆ ನಡುವೆ ನಡೆಯುತ್ತಿರುವ ಚತುಷ್ಪಥ ಹೆದ್ದಾರಿ ಕಾಮಗಾರಿಯಿಂದಾಗಿ ಆಗಿರುವ ಸಮಸ್ಯೆಗಳ ಬಗ್ಗೆ ಪರಿಶೀಲನೆಗಾಗಿ ಜೂ.26ರಂದು ನೆಲ್ಯಾಡಿ, ಗೋಳಿತ್ತೊಟ್ಟು ಭಾಗಕ್ಕೆ ಭೇಟಿ ನೀಡುವುದಾಗಿ ಸಂಸದ ನಳಿನ್‌ಕುಮಾರ್ ಕಟೀಲ್‌ರವರು ಈ ವೇಳೆ ತಿಳಿಸಿದ್ದಾರೆ. ಇದಕ್ಕೂ ಮುನ್ನ ಜೂ.22ರಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here