ಉಪ್ಪಿನಂಗಡಿ: ಸಂಚಾರಿ ಸುವ್ಯವಸ್ಥೆ ಕುರಿತು ಸಭೆ

0

ಉಪ್ಪಿನಂಗಡಿ: ಇಲ್ಲಿನ ಸಂಚಾರಿ ಅವ್ಯವಸ್ಥೆಯನ್ನು ಸರಿಪಡಿಸುವ ಸಲುವಾಗಿ ಉಪ್ಪಿನಂಗಡಿ ಪೊಲೀಸ್ ಠಾಣಾ ನೇತೃತ್ವದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಅಟೋ ರಿಕ್ಷಾ ಚಾಲಕ ಮಾಲಕರ ಸಂಘ ಸೇರಿದಂತೆ ಗ್ರಾ.ಪಂ. ಸದಸ್ಯರ ಸಭೆ ಜೂ.21ರಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ನಡೆಯಿತು.


ಉಪ್ಪಿನಂಗಡಿ ಠಾಣಾ ಉಪನಿರೀಕ್ಷಕ ರಾಜೇಶ್ ಕೆ.ವಿ. ಪ್ರಾಸ್ತಾವಿಕವಾಗಿ ಮಾತನಾಡಿ, ಕಾಲಘಟ್ಟಕ್ಕೆ ಅನುಗುಣವಾಗಿ ಜನಸಂಖ್ಯೆ, ವಾಹನಗಳ ಪ್ರಮಾಣ ಹೆಚ್ಚಳವಾಗಿದೆ. ಆದರೆ ಉಪ್ಪಿನಂಗಡಿ ಪೇಟೆಯೊಳಗಿನ ರಸ್ತೆಗಳು ಬದಲಾಗದೇ, ಮೊದಲಿನಂತೆಯೇ ಕಿರಿದಾಗಿದೆ. ಹೆಚ್ಚಿನ ವಾಣಿಜ್ಯ ಮಳಿಗೆಗಳಲ್ಲೂ ಕೂಡಾ ಪಾರ್ಕಿಂಗ್ ಸೌಲಭ್ಯಗಳಿಲ್ಲ. ಪೇ ಪಾರ್ಕಿಂಗ್ ವ್ಯವಸ್ಥೆ ಇಲ್ಲಿಲ್ಲ. ಹಾಗಾಗಿ ರಸ್ತೆ ಬದಿ ವಾಹನ ನಿಲ್ಲಿಸಿದ್ದಾರೆಂದು ನಾವು ಕಾನೂನು ಕ್ರಮ ಕೈಗೊಳ್ಳಲು ತೆರಳಿದರೆ, ಇಲ್ಲಿ ನೋ ಪಾರ್ಕಿಂಗ್ ಬೋರ್ಡ್ ಇದೆಯಾ? ಬೇರೆ ಕಡೆ ಪಾರ್ಕಿಂಗ್ ವ್ಯವಸ್ಥೆ ಇದೆಯಾ ಎಂದು ಅವರು ನಮ್ಮನ್ನೇ ಪ್ರಶ್ನೆ ಮಾಡುತ್ತಾರೆ. ಮತ್ತೆ ಅಂಗಡಿಗಳಲ್ಲಿ ಲೋಡ್- ಅನ್‌ಲೋಡಿಂಗ್‌ಗೆ ನಿಗದಿತ ಸಮಯವಿಲ್ಲ ಇದೆಲ್ಲಾ ಕಾರಣಗಳಿಂದಾಗಿ ಉಪ್ಪಿನಂಗಡಿಯಲ್ಲಿ ಸಂಚಾರಿ ವ್ಯವಸ್ಥೆ ಅಸ್ಥವ್ಯಸ್ಥಗೊಂಡಿದೆ. ಇದಕ್ಕೆ ಏನು ಪರಿಹಾರ ಕಂಡುಕೊಳ್ಳಬಹುದು ಎಲ್ಲರೂ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವ ಎಂದರು.


ಈ ಹಿಂದೆ ಗ್ರಾ.ಪಂ. ವತಿಯಿಂದ ಪಾರ್ಕಿಂಗ್‌ಗೆ ರೂಪುರೇಷೆಗಳನ್ನು ಸಿದ್ಧಪಡಿಸಿ, ಅನುಷ್ಠಾನಕ್ಕೆ ತರಲಾಗಿತ್ತು. ಅದು ಭಾಗಶಃ ಉತ್ತಮ ಪರಿಣಾಮ ಬೀರಿತ್ತು. ಪೇಟೆಯೊಳಗೆ ಪಾರ್ಕಿಂಗ್‌ಗೆ ಸ್ಥಳ ನಿಗದಿ, ಅಂಗಡಿಗಳ ಮುಂದೆ ಸಾಮಗ್ರಿಗಳ ಲೋಡ್ – ಅನ್‌ಲೋಡಿಂಗ್‌ಗೆ ಸಮಯ ನಿಗದಿ, ಪೇ ಪಾರ್ಕಿಂಗ್ ವ್ಯವಸ್ಥೆ, ಜೀಪು ನಿಲ್ದಾಣದಲ್ಲಿಯೂ ಎರಡೇ ಜೀಪುಗಳು ನಿಲ್ಲುವಂತದ್ದು. ಅಲ್ಲಿನ ಜೀಪು ಅಲ್ಲಿಂದ ತೆರಳಿದ ಮೇಲೆ ಮತ್ತೊಂದು ಜೀಪು ಬರುವಂತಹ ವ್ಯವಸ್ಥೆ ಹೀಗೆ ಹತ್ತಾರು ಕ್ರಮಗಳನ್ನು ಮಾಡಲಾಗಿತ್ತು ಎಂದು ಗ್ರಾ.ಪಂ. ಸದಸ್ಯ ಮುಹಮ್ಮದ್ ತೌಸೀಫ್ ಯು.ಟಿ. ತಿಳಿಸಿದರು.


ವರ್ತಕ ಸಂಘದ ಶಬೀರ್ ಕೆಂಪಿ ಮಾತನಾಡಿ, ಇಲ್ಲಿ ಪೇಟೆಯೊಳಗಡೆ ಹೆಚ್ಚಾಗಿ ವಿದ್ಯಾರ್ಥಿಗಳು, ಮಂಗಳೂರು ಸೇರಿದಂತೆ ಬೇರೆ ಊರಿಗೆ ತೆರಳುವವರು ವಾಹನಗಳನ್ನು ನಿಲುಗಡೆಗೊಳಿಸಿ ಹೋಗುತ್ತಾರೆ. ಅವರು ಬೆಳಗ್ಗೆ ವಾಹನಗಳನ್ನು ನಿಲ್ಲಿಸಿ ಹೋದರೆ ಬರುವುದು ಸಂಜೆಯೇ. ಆದ್ದರಿಂದ ತುಂಬಾ ಸಮಸ್ಯೆಯಾಗಿದೆ ಎಂದರು.


ಪುತ್ತೂರು ಗ್ರಾಮಾಂತರ ಠಾಣಾ ವೃತ್ತ ನಿರೀಕ್ಷಕ ರವಿ ಬಿ.ಎಸ್. ಅವರು ಮಾತನಾಡಿ, ಯಾರಾದರೂ ಪೇಟೆಯೊಳಗಡೆ ಖಾಲಿ ಜಾಗವಿದ್ದರೆ, ಅದನ್ನು ಗ್ರಾ.ಪಂ.ಗೆ ಬಾಡಿಗೆಗೆ ನೀಡಿ ಗ್ರಾ.ಪಂ. ಮೂಲಕ ಅಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಬಹುದು. ಇಲ್ಲಿ ಹೆಚ್ಚಿನ ಕಡೆ ರಸ್ತೆ ಹಾಗೂ ಅದರ ಬದಿಗಳು ಸಮನಾಂತರ ಮಟ್ಟದಲ್ಲಿಲ್ಲ. ಗ್ರಾ.ಪಂ.ನವರು ಅಲ್ಲಿ ಜಲ್ಲಿ ಹುಡಿ ಹಾಕಿಸಿ, ವಾಹನಗಳು ನಿಲ್ಲಲು ವ್ಯವಸ್ಥೆ ಮಾಡಿಕೊಡಬಹುದು. ಆಮೇಲೆ ಮೊದಲಿನ ಹಾಗೆ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಸರಕಾರಿ ಮಾದರಿ ಶಾಲೆ ಬಳಿ ಪೇ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಬಹುದು. ಎಲ್ಲರ ಸಹಕಾರವಿದ್ದಾಗ ಮಾತ್ರ ವ್ಯವಸ್ಥಿತವಾಗಿ ಇದು ಮಾಡಲು ಸಾಧ್ಯ ಎಂದರು.


ಉಪ್ಪಿನಂಗಡಿಯಲ್ಲಿ ಕೆಲವು ಅಂಗಡಿಗಳ ಮುಂದೆ ಘನ ವಾಹನಗಳು ನಿಂತು ಅದರಿಂದ ಸಾಮಗ್ರಿಗಳನ್ನು ಲೋಡ್- ಅನ್‌ಲೋಡಿಂಗ್ ಮಾಡಲಾಗುತ್ತಿದೆ. ಅದರಿಂದ ತುಂಬಾ ಸಮಸ್ಯೆಯಾಗಿದೆ. ಆದ್ದರಿಂದ ಅಂತಹ ಅಂಗಡಿಗಳವರನ್ನು ಕರೆದು ಪ್ರತ್ಯೇಕ ಸಭೆ ನಡೆಸಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ಕೇಳಿ ಬಂತು. ಹೀಗೆ ಹತ್ತು ಹಲವು ಅಭಿಪ್ರಾಯಗಳ ನಡುವೆ ಈ ಹಿಂದೆ ಗ್ರಾ.ಪಂ. ಮಾಡಿದ್ದ ನಿಯಮಗಳನ್ನು ಈಗ ಅನುಷ್ಠಾನಕ್ಕೆ ತರೋಣ. ಅದು ಯಶಸ್ವಿಯಾದರೆ, ಅದನ್ನು ಜಿಲ್ಲಾಧಿಕಾರಿಯವರಿಗೆ ಗಜೆಟ್ ನೊಟೀಫಿಕೇಶನ್‌ಗೆ ಕಳುಹಿಸೋಣ. ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷರು ಹಾಗೂ ಪಿಡಿಒ ಇಲ್ಲ. ಮುಖ್ಯವಾಗಿ ಅವರು ಸಭೆಯಲ್ಲಿ ಇರಬೇಕು. ಆದ್ದರಿಂದ ಎಲ್ಲರನ್ನು ಸೇರಿಸಿ ಮತ್ತೊಮ್ಮೆ ಸಭೆ ಕರೆಯೋಣ ಎಂಬ ಅಭಿಪ್ರಾಯ ಕೇಳಿಬಂತು. ಇದಕ್ಕೆ ಎಲ್ಲರೂ ಒಮ್ಮತ ವ್ಯಕ್ತಪಡಿಸಿದರು.


ವೇದಿಕೆಯಲ್ಲಿ ಪುತ್ತೂರು ಸಂಚಾರ ಠಾಣಾ ಉಪನಿರೀಕ್ಷಕ ಉದಯರವಿ ಉಪಸ್ಥಿತರಿದ್ದರು. ಸಭೆಯಲ್ಲಿ ಉಪ್ಪಿನಂಗಡಿ ಗ್ರಾ.ಪಂ. ಸದಸ್ಯರಾದ ವಿದ್ಯಾಲಕ್ಷ್ಮೀ ಪ್ರಭು, ಅಬ್ದುರ್ರಶೀದ್, ಉಪ್ಪಿನಂಗಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ತ, ಕಾರ್ಯದರ್ಶಿ ಅಬ್ದುರ್ರಹ್ಮಾನ್ ಯುನಿಕ್, ಸಂಘದ ರಾಜಗೋಪಾಲ ಭಟ್ ಕೈಲಾರ್, ಜಗದೀಶ್ ಶೆಟ್ಟಿ, ಜಯಂತ ಪೋರೋಳಿ, ಹಾರೂನ್ ರಶೀದ್ ಅಗ್ನಾಡಿ, ಝಕಾರಿಯಾ ಕೊಡಿಪ್ಪಾಡಿ, ಸಿದ್ದೀಕ್ ಕೆಂಪಿ, ರಮೇಶ್, ಅಟೋ ರಿಕ್ಷಾ ಚಾಲಕ- ಮಾಲಕರ ಸಂಘದ ನರಸಿಂಹ ಶೆಟ್ಟಿ, ಫಾರೂಕ್ ಉಪಸ್ಥಿತರಿದ್ದರು.
ಉಪ್ಪಿನಂಗಡಿ ಠಾಣಾ ಪಿಎಸ್‌ಐ ಓಮನ ಸ್ವಾಗತಿಸಿ, ವಂದಿಸಿದರು. ಪಿಸಿ ರುದ್ರಪ್ಪ ಸಹಕರಿಸಿದರು.

LEAVE A REPLY

Please enter your comment!
Please enter your name here