ಪುತ್ತೂರು: ಬೊಳುವಾರು ಮುಖ್ಯರಸ್ತೆಗೆ ಅಳವಡಿಸಿರುವ ಮೋರಿಯೊಂದು ರಸ್ತೆಯ ಇಕ್ಕೆಲಗಳಲ್ಲಿ ಕುಸಿತಗೊಂಡು ಅಪಾಯ ಎದುರು ನೋಡುತ್ತಿದೆ. ಪುತ್ತೂರು ಮಂಗಳೂರು ರಸ್ತೆಯ ಬೊಳುವಾರು ವಿದ್ಯಾಗಣಪತಿ ಅಂಗಡಿಯ ಬಳಿ ಮಳೆ ನೀರು ಹರಿಯುವ ನಿಟ್ಟಿನಲ್ಲಿ ರಸ್ತೆಗೆ ಮೋರಿ ಅಳವಡಿಸಲಾಗಿತ್ತು.ಆದರೆ ಮೋರಿಯ ಇಕ್ಕೆಲಗಳಲ್ಲಿ ಪೈಪ್, ಕೇಬಲ್ ಕಾಮಗಾರಿ ನಡೆಸಿ ಬಳಿಕ ಸರಿಯಾಗಿ ಅದನ್ನು ಗಟ್ಟಿಗೊಳಿಸದ ಹಿನ್ನೆಲೆಯಲ್ಲಿ ಎರಡು ಬದಿಯಲ್ಲಿ ಮೋರಿ ಕುಸಿಯುತ್ತಿದೆ.
ದಿನವೊಂದಕ್ಕೆ ಸಾವಿರಾರು ವಾಹನಗಳು ಸಂಚರಿಸುವ ಮುಖ್ಯರಸ್ತೆಯಲ್ಲಿ ಈ ಮೋರಿ ಕುಸಿತದಿಂದಾಗಿ ಅಪಾಯ ಆಗುವ ಸಾಧ್ಯತೆ ಹೆಚ್ಚಿರುವುದರಿಂದ ಸಂಬಂಧಿಸಿದವರು ತಕ್ಷಣ ಮೋರಿಯನ್ನು ದುರಸ್ತಿಗೊಳಿಸುವಂತೆ ಸಾರ್ವಜನಿಕರಿಂದ ಆಗ್ರಹ ವ್ಯಕ್ತವಾಗಿದೆ. ನಗರಸಭಾ ಸ್ಥಳೀಯ ಸದಸ್ಯ ಸಂತೋಷ್ ಕುಮಾರ್ ಅವರು ಮೋರಿ ದುರಸ್ತಿಗಾಗಿ ನಗರಸಭೆ ಪೌರಾಯುಕ್ತರಿಗೆ ಮನವಿ ಮಾಡಿದ್ದಾರೆ.