ಸರಕಾರದ ಯೋಜನೆಗಳನ್ನು ಪ್ರತೀ ಮನೆಗೂ ತಿಳಿಸುವ ಕೆಲಸ ಮಾಡಬೇಕು: ಶಾಸಕ ಅಶೋಕ್ ಕುಮಾರ್ ರೈ
ಪುತ್ತೂರು: ಸಿದ್ದರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರಕಾರ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಇವುಗಳ ಪೈಕಿ ಮೂರು ಕೆಲವೇ ದಿನಗಳಲ್ಲಿ ಚಾಲ್ತಿಗೆ ಬರಲಿದೆ, ಮುಂದಿನ ದಿನಗಳಲ್ಲಿ 5 ಗ್ಯಾರಂಟಿಗಳನ್ನೂ ಈಡೇರಿಸಲಿದೆ ಈ ಎಲ್ಲಾ ಯೋಜನೆಗಳನ್ನು ಪ್ರತೀ ಮನೆಗೆ ತಲುಪಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ಮಾಣಿಲ ಗ್ರಾಪಂ ಸಮುದಾಯ ಭವನದಲ್ಲಿ ನಡೆದ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಮುಂದಿನ ಐದು ವರ್ಷ ಉತ್ತಮ ಆಡಳಿತ ಬರಲಿದೆ. ಬಿಜೆಪಿ ಆಡಳಿತದಿಂದ ರೋಸಿ ಹೋದ ಜನರಿಗೆ ಈ ಬಾರಿ ನೆಮ್ಮದಿಯ ದಿನಗಳು ಬರಲಿದೆ. ಮಹಿಳೆಯರಿಗೆ ಉಚಿತ ಬಸ್ ಯೋಜನೆಯನ್ನು ಜಾರಿ ಮಾಡಿ ಲಕ್ಷಾಂತರ ಮಹಿಳೆಯರ ಪಾಲಿಗೆ ವರದಾನವಾಗಿದೆ. ಸರಕಾರದ ಯೋಜನೆಗಳು ಕಾಂಗ್ರೆಸ್ನ ಯೋಜನೆಗಳು ಎಂಬುದನ್ನು ನಾವು ಜನತೆಗೆ ತಿಳಿಸಬೇಕು, ಬೇರೆಯವರು ಬಂದು ಅದರ ಲಾಭವನ್ನು ಪಡೆಯುವ ಸಾಧ್ಯತೆ ಇದ್ದು ಕಾರ್ಯಕರ್ತರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು. ನಮ್ಮ ಸರಕಾರ ನುಡಿದಂತೆ ನಡೆಯುತ್ತದೆ. ಜಾತಿ, ಧರ್ಮ ಬೇದವಿಲ್ಲದೆ ಎಲ್ಲರಿಗೂ ಸರಕಾರದ ಸೌಲಭ್ಯಗಳು ದೊರೆಯಲಿದೆ ಎಂದು ಶಾಸಕರು ಹೇಳಿದರು. ಮುಂದಿನ ತಾಪಂ ಹಾಗೂ ಜಿಪಂ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಅಭೂತಪೂರ್ವ ಜಯಗಳಿಸುವಲ್ಲಿ ನಾವೆಲ್ಲರೂ ಕಾರ್ಯಪೃವೃತ್ತರಾಗಬೇಕಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮಾಜಿ ಜಿಪಂ ಸದಸ್ಯ ಎಂ ಎಸ್ ಮಹಮ್ಮದ್, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ. ರಾಜಾರಾಂ ಕೆ ಬಿ, ಮಾಣಿಲ ಗ್ರಾಪಂ ಅಧ್ಯಕ್ಷೆ ವನಿತಾ, ಶ್ರೀಧರ್ ಬಾಳಕಲ್ಲು, ಗ್ರಾಪಂ ಸದಸ್ಯರುಗಳಾದ ವಿಷ್ಣುಕುಮಾರ್ ಕೊಮ್ಮುಂಜೆ, ಮಾಳತಿ ಎನ್ ಕೆ, ಶೋಭಾ, ಉಪ್ಪಿನಂಗಡಿ ವಿಟ್ಲ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರುಗಳಾದ ಪ್ರವೀಣ್ಚಂದ್ರ ಆಳ್ವ, ಮುರಳೀಧರ್ ರೈ ಮಠಂತಬೆಟ್ಟು, ಉಮಾನಾತ, ರಮಾನಾಥ ವಿಟ್ಲ ಮೊದಲಾದವರು ಉಪಸ್ತಿತರಿದ್ದರು.