4 ದಿನಗಳಲ್ಲಿ 102 ಶಿಬಿರ-10,160 ಪಿಂಚಣಿದಾರರಿಗೆ ಪ್ರಯೋಜನ
ಪುತ್ತೂರು:ಕರ್ನಾಟಕ ರಾಜ್ಯ ಸರ್ಕಾರವು ಸಾಮಾಜಿಕ ಭದ್ರತೆ ಪಿಂಚಣಿಯನ್ನು ಕೇವಲ ಆಧಾರ್ ಸೀಡಿಂಗ್ ಆದ ಖಾತೆಗಳಿಗೆ ಈ ತಿಂಗಳಿಂದ ವರ್ಗಾಯಿಸಲು ನಿರ್ಧರಿಸಿರುವುದರಿಂದ ಪುತ್ತೂರು ಅಂಚೆ ವಿಭಾಗ ಎಲ್ಲಾ ಗ್ರಾಮೀಣ ಜನರಿಗೆ ಸರ್ಕಾರದಿಂದ ಬರುವ ಸಾಮಾಜಿಕ ಭದ್ರತೆ ಪಿಂಚಣಿ ರದ್ದು ಆಗದಂತೆ ಅವರ ಅಂಚೆ ಎಸ್.ಬಿ ಖಾತೆಗಳಿಗೆ ಆಧಾರ್ ಸೀಡ್ ಮಾಡುವಂತೆ ವಿವಿಧ ಕಡೆಗಳಲ್ಲಿ ಶಿಬಿರಗಳನ್ನು ಆಯೋಜಿಸುತ್ತಿದೆ.ಜು.10ರಿಂದ ನಡೆದ ವಿಶೆಷ ಅಭಿಯಾನದಲ್ಲಿ ಈವರೆಗೆ ಒಟ್ಟು 102 ಶಿಬಿರ ನಡೆಸಿದ್ದು, ಒಟ್ಟು 10,160 ಮಂದಿ ಪಿಂಚಣಿದಾರರು ಪ್ರಯೋಜನ ಪಡೆದಿದ್ದಾರೆ.ಅಭಿಯಾನದ ಹೊರತಾಗಿ ಜು.13ರ ತನಕ 18,585 ಮಂದಿಗೆ ಆಧಾರ್ ಸೀಡಿಂಗ್ ನಡೆಸಲಾಗಿದೆ.
ಗ್ರಾಮೀಣ ಜನರಿಗೆ ಆಧಾರ್ ಸೀಡಿಂಗ್ ಬಗ್ಗೆ ಮಾಹಿತಿಯ ಕೊರತೆ ಇರುತ್ತದೆ ಮತ್ತು ಯಾವ ಅಕೌಂಟಿಗೆ ಪಿಂಚಣಿ ವರ್ಗಾವಣೆಗೊಳ್ಳುತ್ತಿದೆ ಎಂಬುದರ ಬಗ್ಗೆ ಖಚಿತ ಮಾಹಿತಿ ಇರುವುದಿಲ್ಲ.ಈ ನಿಟ್ಟಿನಲ್ಲಿ ಅಂಚೆ ಇಲಾಖೆಯಿಂದ ಗ್ರಾಮಗಳಿಗೆ ತೆರೆಳಿ ಅಲ್ಲಿ ಅಭಿಯಾನ ನಡೆಸಲಾಗುತ್ತಿದೆ.ಜು.10ರಂದು 12, ಜು.11ರಂದು 29, ಜು.12ರಂದು 48, ಜು.13ರಂದು 20 ಶಿಬಿರಗಳನ್ನು ನಡೆಸಲಾಗಿದೆ. ಸರಕಾರದಿಂದ ವೃದ್ಧಾಪ್ಯ, ಸಂಧ್ಯಾ ಸುರಕ್ಷಾ, ವಿಧವಾ, ಅಂಗವಿಕಲ, ಮೈತ್ರಿ, ಮನಸ್ವಿನಿ, ಇತರ ಮಾಸಿಕ ಪಿಂಚಣಿ, ಕಿಸಾನ್ ಸಮ್ಮಾನ್ ಹಾಗೂ ಸರಕಾರದ ಯೋಜನೆಗಳ ನೇರ ನಗದು ವರ್ಗಾವಣೆಗಾಗಿ ಡಿ ಕ್ಯೂಬ್ ಆಧಾರ್ ಸೀಡಿಂಗ್ ಅಭಿಯಾನ ಈಗಾಗಲೇ ಅಂಚೆ ಕಚೇರಿಗಳಲ್ಲಿ ನಡೆಯುತ್ತಿದೆ.
ಎಸ್.ಬಿ ಖಾತೆಗಳಿಗೆ ಆಧಾರ್ ಸೀಡಿಂಗ್ ಕಡ್ಡಾಯ
ಆಧಾರ್ ಸೀಡಿಂಗ್ ಆಗದ ಖಾತೆಗಳಿಗೆ ಪಿಂಚಣಿ ಸ್ಥಗಿತಗೊಳ್ಳಲಿದೆ.ಲಿಂಕ್ ಆಗದೇ ಇರುವ ಫಲಾನುಭವಿಗಳ ಪಟ್ಟಿಯು ಪಿಂಚಣಿ ಜಮಾ ಆಗುವ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನಲ್ಲಿ ಸಿಗುತ್ತದೆ.ಇದರ ಜೊತೆಗೆ ಗ್ರಾಮ ಆಡಳಿತ ಅಧಿಕಾರಿಗಳ ಕಚೇರಿಯಲ್ಲೂ ಸಿಗುತ್ತದೆ.ಅಧಾರ್ ನಂಬರ್ ಲಿಂಕ್ ಮಾಡಿಸದಿದ್ದರೆ ಸರಕಾರದಿಂದ ಬರುವ ಪಿಂಚಣಿಯು ಸ್ಥಗಿತಗೊಳ್ಳಲಿದೆ.ಈ ನಿಟ್ಟಿನಲ್ಲಿ ಸ್ಥಳೀಯ ಅಂಚೆ ಕಚೇರಿಗೆ ತೆರಳಿ ಆಧಾರ್ ಲಿಂಕ್ ಮಾಡಿಸುವುದು ಅಗತ್ಯ.