ಜೀಪು ವಶಪಡಿಸಿಕೊಳ್ಳಲು ಪೊಲೀಸರು ಆರೋಪಿ ಮನೆಗೆ ಹೋದಾಗ ನಡೆಯಿತು ಹೈಡ್ರಾಮ
ಕಡಬ: ಕಡಬದಲ್ಲಿ ಅಟೋಮೊಬೈಲ್ ಬಿಡಿ ಭಾಗಗಳ ಅಂಗಡಿ ಮಾಲಿಕ ವರ್ಗೀಸ್ (ಶಾಜನ್) ಎಂಬವರ ಮನೆಗೆ ನುಗ್ಗಿ ಚಿನ್ನಾಭರಣ ಕಳವು ಮಾಡಿದ ಆರೋಪಿಗಳನ್ನು ಸುಮಾರು ಒಂದೂವರೆ ವರ್ಷಗಳ ಬಳಿಕ ಕಡಬ ಪೊಲೀಸರು ಬಂಧಿಸಿದ್ದಾರೆ.
ಪೇರಡ್ಕ ಪೆಲತ್ರಾಣೆ ನಿವಾಸಿ ಸದ್ದಾಂ ಮತ್ತು ಮೀನಾಡಿ ನಿವಾಸಿ ತಾಜುದ್ದೀನ್ ಬಂಧಿತ ಆರೋಪಿಗಳು. ಇವರಲ್ಲಿ ಸದ್ದಾಂ ಎಂಬಾತನು ಈ ಹಿಂದೆ ನಡೆದ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳ ಆರೋಪಿಯಾಗಿದ್ದಾನೆ. ಈತನ ಮೊಬೈಲ್ ಸಿಡಿಆರ್ ಆಧಾರದಲ್ಲಿ ಕಳ್ಳತನ ಪ್ರಕರಣ ಪತ್ತೆ ಹಚ್ಚಲಾಗಿದೆ.
ಘಟನೆಯ ಸಾರಾಂಶ
2021 ರ ಡಿಸೆಂಬರ್ 13ರಂದು ಬೆಳಿಗ್ಗೆ ಮನೆಗೆ ಬೀಗ ಹಾಕಿ ಮಕ್ಕಳನ್ನು ಶಾಲೆಗೆ ಕಳುಹಿಸಿ ಶಾಜನ್ ಹಾಗೂ ಪತ್ನಿ ತಮ್ಮ ಕೆಲಸಕ್ಕೆ ಹೊರಟಿದ್ದ ಸಮಯದಲ್ಲಿ ಮನೆಯಲ್ಲಿ ಕಳ್ಳತನ ನಡೆದಿತು. ಸಂಜೆ ವೇಳೆಗೆ ಮನೆಗೆ ಬಂದು ಮನೆಯ ಎದುರಿನ ಬೀಗವನ್ನು ತೆರೆದು ಮನೆಯೊಳಗೆ ನೋಡುವಾಗ ಮನೆಯ ಹಿಂಭಾಗದ ಬಾಗಿಲನ್ನು ಒಡೆದಿರುವುದು ಮತ್ತು ಮನೆಯೋಳಗಡೆಯಿಂದ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿತ್ತು. ಸುಮಾರು 24 ಗ್ರಾಂ ತೂಕದ ಚಿನ್ನದ ಸರ,8 ಗ್ರಾಂ ತೂಕದ ಚಿನ್ನದ ಸರ,6 ಗ್ರಾಂ ತೂಕದ ಚಿನ್ನದ ಬೆಂಡೋಲೆ, ಮಕ್ಕಳ ಬೆಂಡೋಲೆಗಳು ಸೇರಿದಂತೆ ಅಂದಾಜು ರೂಪಾಯಿ 1.50 ಲಕ್ಷ ಮೌಲ್ಯದ ಸುಮಾರು 41ಗ್ರಾಂ ಚಿನ್ನಾಭರಣ ಕಳವು ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿ ಕಡಬ ಪೊಲೀಸ್ ಠಾಣೆಯಲ್ಲಿ ಅ.ಸಂ 0150/2021 ರಂತೆ ಪ್ರಕರಣ ದಾಖಲಾಗಿತ್ತು. ಪ್ರಸ್ತುತ ಕಳ್ಳತನವಾದ 41ಗ್ರಾಂ ಚಿನ್ನದಲ್ಲಿ 17ಗ್ರಾಂ ಚಿನ್ನವನ್ನು ಪೊಲೀಸರು ಆರೋಪಿಗಳಿಂದ ವಶಪಡಿಸಿ ಮನೆಯವರಿಗೆ ಹಸ್ತಾಂತರ ಮಾಡಿದ್ದಾರೆ.ಉಳಿದ ಚಿನ್ನಾಭರಣ ಪತ್ತೆಯಾಗಬೇಕಿದೆ.
ಆರೋಪಿ ಮನೆಯಲ್ಲಿ ಹೈಡ್ರಾಮ
ಆರೋಪಿ ಸದ್ದಾಂ ಹೇಳಿಕೆ ನೀಡಿದಂತೇ ಕಳ್ಳತನಕ್ಕೆ ಆರೋಪಿಗಳು ಬಳಸಿದ್ದ ಜೀಪನ್ನು ವಶಕ್ಕೆ ಪಡೆಯಲು ಕಡಬ ಪೊಲೀಸರು ಆರೋಪಿ ಸದ್ದಾಂನ ಮನೆಗೆ ಹೋದಾಗ ಮನೆಯಲ್ಲಿನ ಮಹಿಳೆಯರು ಮಕ್ಕಳೊಂದಿಗೆ ಪೊಲೀಸರನ್ನು ಅಡ್ಡಗಟ್ಟಿದ್ದು,ಮನೆಗೆ ಮಹಿಳಾ ಪೊಲೀಸರೊಂದಿಗೆ ಬರುವಂತೇ ಗಲಾಟೆ ಮಾಡಿ,ಜೀಪನ್ನು ಬಿಟ್ಚುಕೊಡದ ಘಟನೆಯೂ ನಡೆದಿದೆ ಎನ್ನಲಾಗಿದೆ.