ಪುತ್ತೂರು: ಎಪಿಎಂಸಿ ರೈಲ್ವೇ ಅಂಡರ್ ಪಾಸ್ ಯೋಜನೆ ಪೂರ್ಣಗೊಂಡಿದ್ದರೂ ಒಂದು ಭಾಗದ ರಸ್ತೆಗೆ ಖಾಸಗಿ ಜಮೀನು ಸ್ವಾಧೀನ ಪಡಿಸಿಕೊಳ್ಳುವುದು ವಿಳಂಬವಾಗಿರುವುದರಿಂದ ಅಗಲೀಕರಣ ಕೆಲಸಕ್ಕೆ ತಡೆಯಾಗಿದೆ. ಈ ಕುರಿತು ನಗರಸಭೆ ಮತ್ತು ಎಪಿಎಂಸಿ ಜಂಟಿಯಾಗಿ ನಿರ್ಧಾರ ಕೈಗೊಳ್ಳುವ ಮೂಲಕ ಕಾಮಗಾರಿ ಪೂರ್ಣಗೊಳಿಸಬೇಕು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಸ್ಥಳದ ವೀಕ್ಷಣೆಗಾಗಿ ಬಂದಿದ್ದೇನೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಸಂಸದರು, ಅಂಡರ್ ಪಾಸ್ ಯೋಜನೆ ಪೂರ್ಣಗೊಂಡ ಬಳಿಕ ಚತುಷ್ಪಥ ರಸ್ತೆಗೂ ಯೋಜನೆ ರೂಪಿಸಲಾಗಿತ್ತು. ಆದರೆ ದ್ವಿಪಥ ರಸ್ತೆ ಪೂರ್ಣಗೊಳಿಸಲಾಗಿದೆ. ಇನ್ನೊಂದು ಭಾಗದ ದ್ವಿಪಥ ರಸ್ತೆಗೆ ಖಾಸಗಿ ಜಮೀನು ಸ್ವಾಧೀನ ಮಾಡಬೇಕಾಗಿದೆ. ಅದಕ್ಕಾಗಿ ಜಮೀನು ಮೌಲ್ಯವನ್ನು ನಿಗದಿ ಪಡಿಸುವ ಸಲುವಾಗಿ ನಗರಸಭೆ ಮತ್ತು ಎಪಿಎಂಸಿ ನಿರ್ಧಾರ ಕೈಗೊಳ್ಳಬೇಕು. ಅದರ ವರದಿಯನ್ನು ಸಹಾಯಕ ಕಮೀಷನರ್ ನೀಡುತ್ತಾರೆ ಎಂದು ತಿಳಿಸಿದರು.
ಈ ಸಂದರ್ಭ ಮಾಜಿ ಶಾಸಕ ಸಂಜೀವ ಮಠಂದೂರು, ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಜಿ.ಪಂ ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಆಶಾ ತಿಮ್ಮಪ್ಪ, ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ.ಜೀವಂಧರ್ ಜೈನ್, ಸಹಾಯಕ ಕಮೀಷನರ್ ಗಿರೀಶ್ ನಂದನ್, ಪೌರಾಯುಕ್ತ ಮಧು ಎಸ್ ಮನೋಹರ್, ತಹಸೀಲ್ದಾರ್ ಶಿವಶಂಕರ್, ಎಪಿಎಂಸಿ ಕಾರ್ಯದರ್ಶಿ ಸಹಿತ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮತ್ತಿತರರು ಉಪಸ್ಥಿತರಿದ್ದರು.