ಭಾರತೀಯ ಸಂಸ್ಕೃತಿಯ ಹುಟ್ಟುಹಬ್ಬ ಮಾದರಿಯಾಗಲಿ – ಶ್ರೀಮತಿ ಶಂಕರಿ ಟೀಚರ್
ಬೆಟ್ಟಂಪಾಡಿ: ಪ್ರಿಯದರ್ಶಿನಿ ವಿದ್ಯಾಸಂಸ್ಥೆ ಬೆಟ್ಟಂಪಾಡಿಯಲ್ಲಿ ಜು.21 ರಂದು ಸಾಮೂಹಿಕ ಹುಟ್ಟುಹಬ್ಬ ಆಚರಣೆ ಹಾಗೂ ಪ್ರೇರಣದಾಯಕ ಗುರು ಶ್ರೇಷ್ಠತೆಗೊಂದು ಸನ್ಮಾನ ಸಮಾರಂಭ ನಡೆಯಿತು. ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಗುರು ಹಿರಿಯರ ಆಶೀರ್ವಾದ ಪಡೆದು ಅಖಂಡ ಭಾರತಕ್ಕೆ ದೀಪ ಬೆಳಗಿ ನಮಸ್ಕರಿಸಿದರು.
ಮುಖ್ಯ ಅತಿಥಿಗಳಾಗಿ ಪಟ್ಟೆ ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯಗುರು ಶಂಕರಿ ಟೀಚರ್, ವಿವೇಕಾನಂದ ವಿದ್ಯಾವರ್ಧಕ ಸಂಘದ ನೈತಿಕ ಶಿಕ್ಷಣ ಪರಿವೀಕ್ಷಕಿ ಮೀನಾಕ್ಷಿ ಮಾತಾಜಿ, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ರಂಗನಾಥ ರೈ ಗುತ್ತು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ವತಿಯಿಂದ ನಡೆಸಲಾಗುತ್ತಿರುವ ಬಡಗನ್ನೂರು ವಲಯದ ಪಡುಮಲೆ ಬಾಲ ಗೋಕುಲದಲ್ಲಿ ಕೆಲವಾರು ತಿಂಗಳಿಂದೀಚೆಗೆ ಮಕ್ಕಳಿಗೆ ನೈತಿಕ ಕಥೆಗಳು, ನೈಮಿತ್ತಿಕ ಶ್ಲೋಕಗಳು, ಪ್ರೇರಣದಾಯಕ ಆಟಗಳನ್ನು ಆಡಿಸುತ್ತಾ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಬಾಲಗೋಕುಲದ ಯಶಸ್ಸಿಗೆ ಕಾರಣಕರ್ತರಾದ ಶಂಕರಿ ಟೀಚರ್ ಇವರಿಗೆ ಆಡಳಿತ ಮಂಡಳಿ ಅಧ್ಯಕ್ಷರು, ಶಾಲೆಯ ಮುಖ್ಯ ಗುರುಗಳು, ವಿದ್ಯಾವರ್ಧಕ ಸಂಘದ ನೈತಿಕ ಪರಿವೀಕ್ಷಕರು ಹಾಗೂ ಸಂಸ್ಥೆಯ ವತಿಯಿಂದ ಗೌರವಾರ್ಪಣೆ ಮಾಡಲಾಯಿತು.
ಸನ್ಮಾನ ಸ್ವೀಕರಿಸಿ ಶಂಕರಿ ಟೀಚರ್ ರವರು ಮಾತನಾಡುತ್ತಾ ಈ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಸಿಗುವ ಸಂಸ್ಕಾರ ಪ್ರಶಂಸಾರ್ಹ. ಭಾರತೀಯ ಸಂಸ್ಕೃತಿಯ ಹುಟ್ಟುಹಬ್ಬ ಭಾರತೀಯರೆಲ್ಲರಿಗೂ ಮಾದರಿಯಾಗಲಿ. ನಿಮ್ಮ ಶಾಲೆಯ ಪ್ರತಿಯೊಂದು ಕೆಲಸಗಳನ್ನು ನನ್ನಿಂದಾದ ಸಹಾಯ ನೀಡಲು ಸಿದ್ದಳಿದ್ದೇನೆ ಎಂಬ ಭರವಸೆಯ ಮಾತುಗಳೊಂದಿಗೆ ಸರ್ವರಿಗೂ ಶುಭ ಹಾರೈಸಿದರು. ಮುಖ್ಯಗುರು ರಾಜೇಶ್ ಎನ್. ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸ್ವಾಗತಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಹ ಶಿಕ್ಷಕಿ ಗೌತಮಿ ವಂದಿಸಿದರು. ಸಹಶಿಕ್ಷಕಿ ಭವ್ಯ ಕಾರ್ಯಕ್ರಮ ನಿರೂಪಿಸಿದರು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.