ನೆಲ್ಯಾಡಿ: 2018-19ನೇ ಸಾಲಿನಲ್ಲಿ ಆರಂಭಗೊಂಡಿರುವ ಮಂಗಳೂರು ವಿಶ್ವ ವಿದ್ಯಾನಿಲಯದ ನೆಲ್ಯಾಡಿ ಘಟಕ ಕಾಲೇಜಿಗೆ ಸರಕಾರಿ ಅನುಮತಿ ಹಾಗೂ ಮೂಲಭೂತ ಸೌಕರ್ಯ ಒದಗಿಸಿಕೊಡುವಂತೆ ಕಾಲೇಜು ಅನುಷ್ಠಾನ ಸಮಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದೆ.
ನೆಲ್ಯಾಡಿಯಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದ ಕೇಂದ್ರ ಸ್ಥಾಪಿಸುವ ಉದ್ದೇಶಕ್ಕೆ ಸೂಕ್ತ ಜಮೀನು ಕೋರಿ ಮಂಗಳೂರು ವಿವಿ ಕುಲಸಚಿವರ ಕೋರಿಕೆ ಮೇರೆಗೆ 2017ರಲ್ಲಿ ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು 24.40 ಎಕ್ರೆ ಜಮೀನು ಮಂಜೂರಾತಿ ಮಾಡಿದ್ದರು. ಅದರಂತೆ ನೆಲ್ಯಾಡಿ ಗ್ರಾಮದ ಸರ್ವೆ ನಂ.186/1ರಲ್ಲಿ 24.40 ಎಕ್ರೆ ಜಮೀನನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕೇಂದ್ರ ಸ್ಥಾಪಿಸುವ ಉದ್ದೇಶಕ್ಕೆ ಕಾಯ್ದಿರಿಸುವಂತೆ ಪುತ್ತೂರು ತಹಶೀಲ್ದಾರ್ ಅವರು ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿದ್ದರು.
ಬಳಿಕ ಈ ಜಮೀನನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕೇಂದ್ರ ಸ್ಥಾಪಿಸುವ ಉದ್ದೇಶಕ್ಕೆ ಕಾಯ್ದಿರಿಸಿ ನಿಯಮಾನುಸಾರ ಆದೇಶಿಸಲಾಗಿದೆ. ನಂತರ ಸಿಂಡಿಕೇಟ್ ಸಭೆಯಲ್ಲಿ ಘಟಕ ಕಾಲೇಜು ಸ್ಥಾಪನೆಗೂ ಪ್ರಸ್ತಾಪಿಸಲಾಗಿದೆ. 2018-19ನೇ ಶೈಕ್ಷಣಿಕ ವರ್ಷದಲ್ಲಿ ನೆಲ್ಯಾಡಿಯಲ್ಲಿ ವಿಶ್ವವಿದ್ಯಾನಿಲಯದ ಘಟಕ ಕಾಲೇಜು ಆರಂಭಿಸಿ ಬಿಎ ಮತ್ತು ಬಿ.ಕಾಂ.ಕೋರ್ಸ್‌ಗಳನ್ನು ಪ್ರಾರಂಭಿಸಲು ಮಂಗಳೂರು ವಿಶ್ವ ವಿದ್ಯಾನಿಲಯ ಅನುಮತಿ ನೀಡಿ ಆದೇಶ ಹೊರಡಿಸಿತ್ತು. ಪ್ರಸ್ತುತ ಕಾಲೇಜಿಗೆ ವಿದ್ಯಾರ್ಥಿಗಳ ಸೇರ್ಪಡೆಯು ಉತ್ತಮವಾಗಿದೆ. ಆದರೆ ಕಾಲೇಜು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸರಕಾರದಿಂದ ಯಾವುದೇ ನೆರವು ದೊರಕದೇ ಇರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಬೇಕಾದ ಕ್ರೀಡಾಂಗಣ, ಸಭಾಂಗಣ, ಹಾಸ್ಟೆಲ್ ವ್ಯವಸ್ಥೆಯನ್ನು ನೀಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಸರಕಾರ ನಿಗದಿಪಡಿಸಿದ ಭೂಮಿಯಲ್ಲಿ ವಿಶ್ವ ವಿದ್ಯಾನಿಲಯವು ಕಟ್ಟಡ ಮತ್ತು ಮೂಲಭೂತ ಸೌಕರ್ಯವನ್ನು ಮಾಡಬೇಕಾದಲ್ಲಿ ಕಾಲೇಜಿಗೆ ಸರಕಾರದ ಅನುಮತಿ ತೀರಾ ಅವಶ್ಯವಾಗಿರುತ್ತದೆ. ಆದ್ದರಿಂದ ಗ್ರಾಮೀಣ ಪ್ರದೇಶದ ಬಡ ಕೂಲಿ ಕಾರ್ಮಿಕರ ಮತ್ತು ಪರಿಶಿಷ್ಠ ಜಾತಿ/ಪಂಗಡದ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ವಿದ್ಯಾರ್ಜನೆಯನ್ನು ನೀಡಲು ಅನುಕೂಲವಾಗುವಂತೆ ಕಾಲೇಜಿಗೆ ಸರಕಾರದ ಅನುಮತಿ ಹಾಗೂ ಮೂಲಭೂತ ಸೌಕರ್ಯ ಒದಗಿಸಿಕೊಡುವಂತೆ ಮನವಿ ಮಾಡಲಾಗಿದೆ. ಕಾಲೇಜು ಅನುಷ್ಠಾನ ಸಮಿತಿ ಅಧ್ಯಕ್ಷೆ ಉಷಾ ಅಂಚನ್, ಉಪನ್ಯಾಸಕರು, ವಿದ್ಯಾರ್ಥಿಗಳು ಮನವಿ ಸಲ್ಲಿಕೆ ವೇಳೆ ಉಪಸ್ಥಿತರಿದ್ದರು.