ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2020ರಿಂದ 2023ರವರೆಗೆ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಯುವ ಟೆಂಡರ್ನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲು ತೀರ್ಮಾನಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ವಿಧಾನ ಪರಿಷತ್ನ ಪ್ರಶ್ನೋತ್ತರ ವೇಳೆ ಸದಸ್ಯ ಕೆ.ಹರೀಶ್ ಕುಮಾರ್ ಬೆಳ್ತಂಗಡಿ ಅವರ ಪ್ರಶ್ನೆಗೆ ಸಚಿವ ಮಹದೇವಪ್ಪ ಪರವಾಗಿ ಉತ್ತರಿಸಿದ ಪ್ರಿಯಾಂಕ್ ಖರ್ಗೆ ಅವರು ಮೂರು ವರ್ಷಗಳ ಅವಧಿಯಲ್ಲಿ 117 ಕೊಳವೆ ಬಾವಿಗಳನ್ನು ಕೊರೆಯಲು ಟೆಂಡರ್ ಕರೆಯಲಾಗಿದೆ. ಈ ಪೈಕಿ 30 ಕೊಳವೆಬಾವಿಗಳನ್ನು ಕೊರೆಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಕೊಳವೆಬಾವಿಗಳನ್ನು ಗುತ್ತಿಗೆದಾರರ ವಿರುದ್ಧ ಸದ್ಯಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೈಕೋರ್ಟ್ ಸೂಚನೆಯಂತೆ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಪ್ರಕರಣದಲ್ಲಿ ಶಾಮೀಲಾದ ಅಧಿಕಾರಿಗಳ ವಿರುದ್ಧ ಎರಡು-ಮೂರು ಎಫ್ಐಆರ್ ದಾಖಲಿಸಲಾಗಿದೆ. ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ಒಳಾಡಳಿತ ಇಲಾಖೆಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಯೋಜನೆಯಡಿ 2021-22ನೇ ಸಾಲಿನಲ್ಲಿ ಕೊಳವೆ ಬಾವಿಗಳನ್ನು ಕೊರೆಯಲು ಕರೆದ ಟೆಂಡರ್ಗಳಲ್ಲಿ 21 ಗುತ್ತಿಗೆದಾರರು ಆಯ್ಕೆಯಾಗಿದ್ದರು. ಆ ಪೈಕಿ ಕೆಲವು ದೂರುಗಳು ಬಂದಿದ್ದ ಆಧಾರದಲ್ಲಿ ಟೆಂಡರ್ ಮೇಲ್ಮನವಿ ಪ್ರಾಧಿಕಾರ ವಿಚಾರಣೆ ನಡೆಸಿ ಆರು ಜನ ಗುತ್ತಿಗೆದಾರರು ಬಿಡ್ನ ಗರಿಷ್ಠ ಮಿತಿ ಮೀರಿ ಕಾರ್ಯಾದೇಶ ಪಡೆದಿದ್ದಾರೆ ಎನ್ನುವುದು ಕಂಡು ಬಂದಿದೆ. ಆ ಹಿನ್ನೆಲೆಯಲ್ಲಿ 11 ಪ್ಯಾಕೇಜ್ಗಳನ್ನು ರದ್ದುಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಉದ್ದೇಶಿತ ಹಗರಣವನ್ನು ನಾನೇ ಬಯಲಿಗೆಳೆದಿದ್ದೇನೆ. ವಿಚಿತ್ರವೆಂದರೆ ಹಿ೦ದಿನ ಸರಕಾರದ ಸಚಿವರು ಈ ವಿಷಯದಲ್ಲಿ ಹಗರಣವೇ ನಡೆದಿಲ್ಲ ಎ೦ದು ಹೇಳಿದ್ದರು. 431 ಕೋಟಿ ರೂ. ಮೊತ್ತದ ಈ ಟೆಂಡರ್ನಲ್ಲಿ ಅವ್ಯವಹಾರ ಆಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಟೆಂಡರ್ ಮೇಲ್ಮನವಿ ಪ್ರಾಧಿಕಾರದ ತೀರ್ಮಾನ ಪ್ರಶ್ನಿಸಿ ಗುತ್ತಿಗೆದಾರರು ಹೈಕೋರ್ಟ್ ಮೊರೆ ಹೋಗಿದ್ದು, ಯಥಾಸ್ಥಿತಿ ಕಾಯ್ದುಕೊಳ್ಳಲು ಕೋರ್ಟ್ ಸೂಚಿಸಿದೆ ಎಂದು ಸಚಿವರು ವಿವರಿಸಿದರು.