ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸಚಿವ ಮಧು ಬಂಗಾರಪ್ಪ
ಪುತ್ತೂರು ಸ ಮಹಿಳಾ ಪ.ಪೂ ಕಾಲೇಜು ಕಟ್ಟಡಕ್ಕೆ 55 ಲಕ್ಷ ರೂ.ಅನುದಾನ
ಶಾಸಕ ಅಶೋಕ್ ಕುಮಾರ್ ರೈಯವರಿಂದ ಸಚಿವರಿಗೆ ಸನ್ಮಾನ
ಪುತ್ತೂರು:ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನರು ಹೆಚ್ಚಿನ ವಿಶ್ವಾಸದಿಂದ ಶಕ್ತಿ ಕೊಟ್ಟಿದ್ದಾರೆ.ಬದಲಾವಣೆ ಆಗಿದೆ.ಇವತ್ತು ಕಾಂಗ್ರೆಸ್ನ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿ, ಡಿ.ಕೆ.ಶಿವಕುಮಾರ್ ಅವರು ಉಪಮುಖ್ಯಮಂತ್ರಿಗಳಾಗಿ ಎಲ್ಲರಿಗೂ ಮಾದರಿಯಾಗಿದ್ದಾರೆ.ನನಗೆ ಬಹಳ ದೊಡ್ಡ ಖಾತೆ ನೀಡಿದ್ದಾರೆ.ಇಂತಹ ಸಂದರ್ಭದಲ್ಲಿ ಪುತ್ತೂರು ಸ.ಪ.ಪೂ ಮಹಿಳಾ ಕಾಲೇಜು ಕಟ್ಟಡ ನಿರ್ಮಾಣಕ್ಕೆ ರೂ.55 ಲಕ್ಷ ಮಂಜೂರು ಮಾಡಿದ್ದೇನೆ.ಇದರ ಜೊತೆಗೆ ಎಲ್ಲಾ ಶಾಲಾ ಕಟ್ಟಡಗಳ ದುರಸ್ತಿಗೂ ಅನುದಾನ ನೀಡಲಿದ್ದೇನೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಸಚಿವ ಮಧು ಬಂಗಾರಪ್ಪ ಅವರು ಹೇಳಿದರು.
ಜು.22ರಂದು ಮಂಗಳೂರಿನಿಂದ ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ತೆರಳುವ ಸಂದರ್ಭ ದರ್ಬೆಯಲ್ಲಿರುವ ಪುತ್ತೂರು ಕಾಂಗ್ರೆಸ್ ಚುನಾವಣಾ ಕಚೇರಿಗೆ ತೆರಳಿದ ಅವರು ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಆರಂಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರಿಂದ ಸನ್ಮಾನ ಸ್ವೀಕರಿಸಿ ಬಳಿಕ ಅವರು ಮಾತನಾಡಿದರು.ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ನನಗೆ ಖಾತೆ ಸಿಕ್ಕಿದ ಬಳಿಕ ಅದರ ಕಾರ್ಯವ್ಯಾಪ್ತಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದಲೇ ಇವತ್ತು ಆರಂಭಿಸಿದ್ದೇನೆ.ಈಗಾಗಲೇ ಪುತ್ತೂರು ಸ.ಪ.ಪೂ ಮಹಿಳಾ ಕಾಲೇಜಿಗೆ ರೂ.55 ಲಕ್ಷ ಅನುದಾನ ಮಂಜೂರು ಮಾಡಲಾಗಿದೆ.ಮತ್ತೊಂದು ಕಡೆ ಗ್ಯಾರೆಂಟಿಯನ್ನೂ ಕೊಡಬೇಕಾಗಿದೆ.ಅದರಲ್ಲಿ ಈಗಾಗಲೇ 4 ಗ್ಯಾರೆಂಟಿಯನ್ನು ಕೊಡಲು ಆರಂಭಿಸಿದ್ದೇವೆ.ಇನ್ನು ಯುವ ನಿಧಿ ಒಂದು ಗ್ಯಾರೆಂಟಿ ಬಾಕಿ ಆಗಿದೆ.ಪ್ರಣಾಳಿಕೆ ಉಪಾಧ್ಯಕ್ಷನಾಗಿ ಎಲ್ಲಾ ಗ್ಯಾರೆಂಟಿಯನ್ನು ಹಂತ ಹಂತವಾಗಿ ಅನುಷ್ಠಾನ ಮಾಡಿಯೇ ಮಾಡುತ್ತೇವೆ ಎಂದರು.ನಾನು ಪಕ್ಷಕ್ಕೆ ಉಪಾಧ್ಯಕ್ಷನಾಗಿ, ಉಸ್ತುವಾರಿ ಹೊಂದಿದ್ದೇನೆ. ಹಾಗಾಗಿ ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ನೀಡಲಿದ್ದೇನೆ.ನಾನು ಬೆಂಗಳೂರಿನಿಂದ ಬಂದ ತಕ್ಷಣ ಪಕ್ಷದ ಕಚೇರಿಗೆ ಪ್ರಥಮ ಭೇಟಿ ನೀಡಿದ್ದೇನೆ.ಯಾಕೆಂದರೆ ಅಶೋಕ್ ಕುಮಾರ್ ಸಹಿತ ನಾವೇನಾದರೂ ಅಧಿಕಾರ ತೆಗೆದುಕೊಂಡಿದ್ದೇವೆ ಎಂದಾದರೆ ಪಕ್ಷ ಕಾರಣ.ಆ ನಿಟ್ಟಿನಲ್ಲಿ ನಾನು ಪಾರದರ್ಶಕವಾಗಿ ಕೆಲಸ ಮಾಡಲಿದ್ದೇನೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಈ ಭಾಗದ ಅಭಿವೃದ್ಧಿ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲಿದ್ದೇನೆ:
ನಮ್ಮ ಸ್ಪೀಕರ್ ಯು.ಟಿ.ಖಾದರ್ ಮತ್ತು ಈ ಭಾಗದ ಶಾಸಕ ಅಶೋಕ್ ಕುಮಾರ್ ರೈ ಇವರಿಬ್ಬರೂ ದಕ್ಷಿಣ ಕನ್ನಡ ಜಿಲ್ಲೆಯವರು.ಹಾಗಾಗಿ ಅವರ ಜೊತೆಗೆ ಈ ಭಾಗದ ಅಭಿವೃದ್ಧಿ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲಿದ್ದೇನೆ ಎಂದು ಮಧು ಬಂಗಾರಪ್ಪ ಹೇಳಿದರು.
ಬಿಜೆಪಿಯವರು ಮತ ವಿಭಜನೆ ಮಾಡಿ ದ್ವೇಷ ಹುಟ್ಟಿಸುವ ಕೆಲಸ ಮಾಡುವವರು:
ಕಾಂಗ್ರೆಸ್ ಬಡವರ ಪರ ಕಾರ್ಯಕ್ರಮ ನೀಡುತ್ತದೆ, ಬಿಜೆಪಿಯವರು ಭಾವನಾತ್ಮಕ ಪ್ರಚಾರ ಮುಂದಿಟ್ಟುಕೊಂಡು ಯಾವ ರೀತಿ ಮತವನ್ನು ವಿಭಜನೆ ಮಾಡಿ ದ್ವೇಷವನ್ನು ಹುಟ್ಟಿಸುವ ಕೆಲಸ ಮಾಡಿ ಯಾವ ರೀತಿ ಅಧಿಕಾರಕ್ಕೆ ಬರಬಹುದು ಎಂದು ಚಿಂತನೆ ಮಾಡುವರು ಹೊರತು ಅವರ ಸ್ವಂತ ಶಕ್ತಿಯಲ್ಲಿ ಅವರು ಕರ್ನಾಟಕದ ಇತಿಹಾಸದಲ್ಲಿ ಬರಲಿಲ್ಲ.ಇಷ್ಟರ ತನಕ ಗ್ಯಾರೆಂಟಿ ಬಗ್ಗೆ ಇದು ವಾರಂಟಿ ಇಲ್ಲ ಎಂದು ಹೇಳುತ್ತಿದ್ದರು.ಈಗ ಒಂದು ವರ್ಷ ವಾರಂಟಿ ಇದೆ ಎಂದು ಹೇಳುತ್ತಿದ್ದಾರೆ.ಆದರೆ ನಮ್ಮ ಗ್ಯಾರಂಟಿಗೆ ಸಂಪೂರ್ಣ 5 ವರ್ಷ ಕೂಡಾ ವಾರಂಟಿ ಇರುತ್ತದೆ.
ವಾರಂಟಿ ಕಳೆದುಕೊಂಡವರು ರಾಜ್ಯದಲ್ಲಿ ಇರುವವರನ್ನು ಖರೀದಿಸಿ ಅಧಿಕಾರ ಇಟ್ಟುಕೊಂಡು ರಾಜ್ಯದಲಿ ಎಲ್ಲಾ ಭ್ರಷ್ಟಾಚಾರ ಮಾಡಿ ಇವತ್ತು ಅವರು 120ರಿಂದ 67ಕ್ಕೆ ಬಂದು ಕೂತಿದ್ದಾರೆ. ಅವರು ಇದೇ ರೀತಿ ಮಾಡಿದರೆ ರಾಜ್ಯದ ಜನರು ಅವರನ್ನು 27ಕ್ಕೆ ತಂದು ಕುಳ್ಳಿರಿಸಲಿದ್ದಾರೆ.ಇವತ್ತು ವಿಧಾನಸಭೆಯಲ್ಲಿ ಸಂವಿಧಾನ ವಿರೋಧವಾದ ನೀತಿಯನ್ನು ತಂದಿದ್ದಾರೆ.ಸಭಾಪತಿಗಳ ಸ್ಥಾನವನ್ನು ಹಿಂದುಳಿದ ವರ್ಗಕ್ಕೆ ನೀಡಿರುವುದಕ್ಕೆ ಬಿಜೆಪಿಯವರಿಗೆ ಹೊಟ್ಟೆಕಿಚ್ಚಾಗಿದೆ.ಅವರ ವಿಕೃತ ಮನಸ್ಸು ಜನರಿಗೆ ತಿಳಿದಿದೆ.ಒಳ್ಳೆಯ ಕೆಲಸ ಮಾಡಿ ಎಂದು ಹೇಳಿದಾಗ ಬೇಡದ ಕೆಲಸ ಮಾಡಿ ಪ್ರಚಾರದಲ್ಲಿ ಮತ ಪಡೆದ ಸ್ವಾರ್ಥದ ರಾಜಕಾರಣ ಮಾಡುತ್ತಿದ್ದಾರೆ.ಇದು ಖಂಡನೀಯ ಎಂದು ಮಧು ಬಂಗಾರಪ್ಪ ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಜಿ.ಪಂ ಮಾಜಿ ಉಪಾಧ್ಯಕ್ಷ ಎಂ.ಎಸ್ ಮೊಹಮ್ಮದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ರವೀಂದ್ರ ರೈ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.ಕೃಷ್ಣಪ್ರಸಾದ್ ಆಳ್ವ ವಂದಿಸಿದರು. ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವೀಲ್ ಚಯರ್ ವಿತರಣೆ:
ರೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬಡವರಿಗೆ ನೀಡುವ ಸಹಾಯ ಹಸ್ತ ಕಾರ್ಯಕ್ರಮಕ್ಕೆ ಸಂಬಂಧಿಸಿ, ನಡೆಯಲು ಅಶಕ್ತರಾಗಿರುವ ಒಳಮೊಗ್ರು ಗ್ರಾಮದ ದರ್ಬೆತ್ತಡ್ಕದ ಕಮಲ ಎಂಬವರ ತಾಯಿಗೆ ವೀಲ್ ಚಯರ್ ನೀಡಲಾಯಿತು.ಸಚಿವ ಮಧು ಬಂಗಾರಪ್ಪ ಅವರು ವೀಲ್ ಚಯರ್ ಅನ್ನು ಕಮಲ ಅವರಿಗೆ ಹಸ್ತಾಂತರಿಸಿದರು.
ಕ್ಷೇತ್ರದ ಮಹಿಮೆಯಿಂದ ವಿಮಾನ ಹೊರಡುವುದು ತಡವಾಯಿತು…
ನಾನೇ ಅಶೋಕ್ ಕುಮಾರ್ ರೈ ಅವರಿಗೆ ಕರೆ ಮಾಡಿ ಗೆಜ್ಜೆಗಿರಿಗೆ ಹೋಗಲು ತೀರ್ಮಾನ ಮಾಡಿದ್ದೆ.ಯಾಕೆಂದರೆ ಗೆಜ್ಜೆಗಿರಿ ಕ್ಷೇತ್ರ ನಿರ್ಮಾಣ ಆಗುವಾಗ ನಾನು ಶಾಸಕನಾಗಿದ್ದೆ.ಆ ಸಂದರ್ಭ ದೇವಳದ ಶಿಲಾನ್ಯಾಸಕ್ಕೆ ನಾನು ಕೂಡಾ ಒಂದು ಕಲ್ಲು ಹಾಕಿದ್ದೆ.ಇವತ್ತು ಬೆಳಿಗ್ಗೆ ಅಲ್ಲಿ ಹೋಗುವ ತೀರ್ಮಾನ ಕೈಗೊಂಡೆ.ಆದರೆ ಜೊತೆಗೆ ಹಿಂದಿರುಗಲು ರಾತ್ರಿ 9.55ಕ್ಕೆ ವಿಮಾನಕ್ಕೆ ಹೋಗಬೇಕು.ಈ ನಡುವೆ ಕೋಟಿಚೆನ್ನಯರ ಕ್ಷೇತ್ರದ ಮಹಿಮೆಯೋ ಏನೋ ಹವಾಮಾನ ವೈಪರೀತ್ಯದಿಂದಾಗಿ ವಿಮಾನ ಸ್ವಲ್ಪ ತಡವಾಗಿ ಹೋಗಲಿದೆ.ಆದ್ದರಿಂದ ನಾನು ಅಂದುಕೊಂಡಂತೆ ಕ್ಷೇತ್ರಕ್ಕೆ ಹೋಗಲು, ನಿಮ್ಮೆಲ್ಲರಲ್ಲಿ ಮಾತನಾಡಲು ಅವಕಾಶ ಲಭಿಸಿದೆ ಎಂದು ಸಚಿವ ಮಧು ಬಂಗಾರಪ್ಪ ಅವರು ಹೇಳಿದರು.