ಭಕ್ತಿ ಮಾರ್ಗದ ಶಕ್ತಿಯಿಂದ ನಮ್ಮ ಮಕ್ಕಳನ್ನು ಕಾಪಾಡಲು ಸಾಧ್ಯ: ಮಾಣಿಲ ಶ್ರೀ
ವಿಟ್ಲ: ಧಾರ್ಮಿಕ ಶಿಕ್ಷಣದ ಕೊರತೆ ಯುವಪೀಳಿಗೆಯನ್ನು ದಾರಿ ತಪ್ಪಿಸುತ್ತಿದೆ. ಬಡವರನ್ನು ಮೇಲೆತ್ತುವ ಕೆಲಸ ಎಲ್ಲರಿಂದಲೂ ಆಗಬೇಕಿದೆ. ಡ್ರಗ್ಸ್ ಮಾಫಿಯಾದ ಕಬಂದ ಬಾಹು ಯುವ ಪೀಳಿಗೆಯನ್ನು ಆವರಿಸುತ್ತಿದೆ. ಭಕ್ತಿ ಮಾರ್ಗದ ಶಕ್ತಿಯಿಂದ ನಮ್ಮ ಮಕ್ಕಳನ್ನು ಕಾಪಾಡಲು ಸಾಧ್ಯ ಎಂದು ಮಾಣಿಲ ಶ್ರೀಧಾಮ ಶ್ರೀದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ಜು.೨೩ರಂದು ಮಾಣಿಲ ಶ್ರೀಧಾಮ ಶ್ರೀದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ವರಮಾಲಕ್ಷ್ಮೀ ವ್ರತಾಚರಣೆ ಬೆಳ್ಳಿಹಬ್ಬ ಮಹೋತ್ಸವದ ಅಂಗವಾಗಿ 48 ದಿನಗಳ ಕಾಲ ನಡೆಯುವ ಸಾಮೂಹಿಕ ಶ್ರೀಲಕ್ಷ್ಮೀ ಪೂಜೆಗೆ ಚಾಲನೆಯನ್ನು ನೀಡಿ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ನಮ್ಮಲ್ಲಿ ಬಾಲಭೋಜನದಲ್ಲಿ ಪಾಲ್ಗೊಂಡ ಮಕ್ಕಳು ಸುಸಂಸ್ಕೃತರಾಗಿ ಉನ್ನತ ಹುದ್ದೆಗಳಲ್ಲಿದ್ದಾರೆ. ಭಾಲಭೋಜನ ಕಾರ್ಯಕ್ರಮ ಮನೆಮನೆಗಳಲ್ಲಿ ನಿತ್ಯ ನಿರಂತರವಾಗಿ ನಡೆಯಬೇಕಿದೆ. ದೇಶಪ್ರೇಮ ರಾಷ್ಟ್ರ ಪ್ರೇಮ ನಮ್ಮಲ್ಲಿ ಮೂಡಬೇಕು. ಕೆಟ್ಟದರಲ್ಲಿಯೂ ಒಳ್ಳೆಯದನ್ನು ನೋಡುವ ಮನಸ್ಸು ನಿಮ್ಮದಾಗಲಿ. ಎಲ್ಲರನ್ನೂ ಪ್ರೀತಿಸುವ ಗುಣ ನಿಮ್ಮಲ್ಲಿರಲಿ. ದೇಶದ ಅಸ್ಥಿತ್ವ ಉಳಿಸಿಕೊಳುವ ಕೆಲಸವಾಗಬೇಕು. ಪ್ರಕೃತಿಗೆ ತದ್ವಿರುದ್ಧವಾಗಿ ನಡೆಯುವ ಪ್ರಯತ್ನವನ್ನು ಬಿಟ್ಟಾಗ ಮಾತ್ರ ಗಂಡಾಂತರಗಳಿಂದ ಪಾರಾಗಲು ಸಾಧ್ಯ. ಕಾಡು ನಾಶವಾದ ಪರಿಣಾಮ ಇದೀಗ ನಾವು ಅನುಭವಿಸುತ್ತಿದ್ದೇವೆ. ಗಿಡನೆಡುವ ಮೂಲಕ ಪರಿಸರ ಸಂರಕ್ಷಿಸಿಕೊಳ್ಳುವ ಯೋಜನೆ ಬೆಳೆಸಿಕೊಳ್ಳಿ. ಬದುಕಿನ ಉದ್ದಕ್ಕೂ ಉತ್ತಮ ಸಂಸ್ಕಾರವನ್ನು ಬೆಳೆಸಿಕೊಳ್ಳಿ ಎಂದರು.
ಬಂಟ್ವಾಳ ತಾಲೂಕು ಸಮಿತಿ ಕೋಶಾಧಿಕಾರಿ ಕರುಣೇಂದ್ರ ಪೂಜಾರಿ ಕುಂಬರಬೈಲು, ಪ್ರಗತಿಪರ ಕೃಷಿಕ ಸೀತಾರಾಮ ಕುಲಾಲ್ ಒಳಮೊಗರು, ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಟ್ರಸ್ಟಿ ಚಂದ್ರಶೇಖರ ತುಂಬೆ, ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಮಹಿಳಾ ಸೇವಾ ಸಮಿತಿ ಗೌರವಾಧ್ಯಕ್ಷೆ ರೇವತಿ ಪೆರ್ನೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ದೇವಪ್ಪ ಕುಲಾಲ್ ಪಂಜಿಕಲ್ಲು ಸ್ವಾಗತಿಸಿದರು. ಅಶ್ವಿತ್ ಕುಲಾಲ್ ಪಡಂಗಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.