ʼಏಯ್… ಕಾರಣ ಹೇಳುವುದು ಬೇಡ.. ಸೋಮವಾರ ಕಚೇರಿಗೆ ಬನ್ನಿʼ – ಕೆಆರ್‌ಡಿಎಲ್ ಅಧಿಕಾರಿಗಳನ್ನು ತರಾಟೆಗೆ ಎತ್ತಿಕೊಂಡ ಶಾಸಕರು

0

ಪುತ್ತೂರು: ಏಯ್.. ಕಾರಣ ಹೇಳುವುದು ಬೇಡ.. ಸೋಮವಾರ ಕಚೇರಿಗೆ ಬನ್ನಿ… ಇದರಲ್ಲಿ ಎಷ್ಟು ಪರ್ಸೆಂಟ್ ಹೊಡೆದಿದ್ದೀರಿ…. ಸ್ವಲ್ಪನಾದರೂ ಜವಾಬ್ದಾರಿ ಇಲ್ವ… ಕಾರಣ ಹೇಳುವುದು ಬೇಡ, ನೀವು ಸೋಮವಾರ ನನ್ನ ಕಚೇರಿಗೆ ಬನ್ನಿ.. ಇದು ಪುತ್ತೂರು ಶಾಸಕ ಅಶೋಕ್ ರೈಯವರು ಕೆಆರ್‌ಡಿಎಲ್ ಅಧಿಕಾರಿಗಳನ್ನು ತರಾಟೆಗೆ ಎತ್ತಿಕೊಂಡ ಪರಿ. ಈ ಘಟನೆ ನಡೆದದ್ದು ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನಲ್ಲಿ.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆಗೆ ಕಾಲೇಜಿಗೆ ಶಾಸಕರು ತೆರಳಿದ್ದರು. ಕಾಲೇಜಿನ ವರಾಂಡದಲ್ಲಿ ಪೂರ್ತಿಯಾಗಿ ನೀರು ಹರಿಯುತ್ತಿತ್ತು. ವರಾಂಡದಲ್ಲಿ ನೀರು ಹರಿಯುತ್ತಿರುವುದನ್ನು ಕಂಡ ಶಾಸಕರು ಪ್ರಾಂಶುಪಾಲರನ್ನು ಕೇಳಿದ್ದಾರೆ. ಸಮರ್ಪಕ ಉತ್ತರ ಸಿಗಲಿಲ್ಲ.
ಕಾಮಗಾರಿ ಯಾರು ಮಾಡಿದ್ದು ಎಂದು ಪ್ರಾಂಶುಪಾಲರಲ್ಲಿ ಕೇಳಿದಾಗ 2016ರಲ್ಲಿ ಈ ಕಟ್ಟಡ ಕಾಮಗಾರಿ ಪ್ರಾರಂಭ ಮಾಡಲಾಗಿದೆ. ಗುತ್ತಿಗೆದಾರರು ಕಾಮಗಾರಿಯನ್ನು ಪೂರ್ಣಗೊಳಿಸದೆ, ಕಟ್ಟಡವನ್ನು ಕಾಲೇಜಿಗೆ ಹಸ್ತಾಂತರ ಮಾಡದೆ ಹೋಗಿದ್ದಾರೆ. ಅವರು ಯಾರೂ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಪ್ರಾಂಶುಪಾಲರು ಶಾಸಕರಲ್ಲಿ ತಿಳಿಸಿದರು. ಕೂಡಲೇ ಕಾಮಗಾರಿ ನಡೆಸಿದ ಕೆಆರ್‌ಡಿಎಲ್ ಅಧಿಕಾರಿಗೆ ಕರೆ ಮಾಡಿ ಕಾಮಗಾರಿ ಅರ್ಧಂಬರ್ಧ ಮಾಡಿ ಹೋಗಿದ್ದೀರಿ, ಕಟ್ಟಡವೇ ಸೋರಿಕೆಯಗುತ್ತಿದೆ, ಕಾಮಗಾರಿಯಲ್ಲಿ ಎಷ್ಟು ಪರ್ಸಂಟೇಜ್ ಪಡೆದುಕೊಂಡಿದ್ದೀರಿ? ನಿಮಗೆ ಜವಾಬ್ದಾರಿ ಇಲ್ವ? ಮೆಟ್ಟಿಲುಗಳಲ್ಲಿ ಯಾವುದೇ ಸುರಕ್ಷ ಗ್ರಿಲ್‌ಗಳನ್ನು ಅಳವಡಿಸಿಲ್ಲ, ವಿದ್ಯಾರ್ಥಿಗಳು ಜಾರಿ ಬಿದ್ದು ಅವರಿಗೆ ಏನಾದರೂ ಆದರೆ ಯಾರು ಹೊಣೆ ಎಂದು ತರಾಟೆಗೆ ಎತ್ತಿಕೊಂಡಿದ್ದಾರೆ. ಅಧಿಕಾರಿಗಳು ಸಮಜಾಯಿಷಿಕೆ ನೀಡಲು ಮುಂದಾದಾಗ ನಿಮ್ಮ ಕಾರಣ ಏನೂ ನನ್ನಲ್ಲಿ ಹೇಳಬೇಡಿ, ನೀವು ಸೋಮವಾರ ನನ್ನ ಕಚೇರಿಗೆ ಬನ್ನಿ.. ನೀವು ಈ ರೀತಿ ಕಾಮಗಾರಿ ನಡೆಸಿದರೆ ನಿಮ್ಮನ್ನು ಕಪ್ಪು ಪಟ್ಟಿಗೆ ಸೇರಿಸಬೇಕಾಗುತ್ತದೆ ಎಂದು ತರಾಟೆಗೆ ಎತ್ತಿಕೊಂಡಿದ್ದಾರೆ. ಕಾಲೇಜಿನ ಕಟ್ಟಡ ಕಾಮಗಾರಿ ಇಷ್ಟು ಕಳಪೆಯಾಗಿದ್ದರೂ ಯಾಕೆ ಮೌನವಾಗಿದ್ದೀರಿ ಎಂದು ಪ್ರಾಂಶುಪಾಲರನ್ನು ಹಾಗೂ ಸ್ಥಳೀಯ ಗ್ರಾ.ಪಂ.ನವರನ್ನು ಶಾಸಕರು ಪ್ರಶ್ನಿಸಿ, ಕಾಮಗಾರಿ ಈ ರೀತಿ ಆಗದಂತೆ ನಾವೆಲ್ಲರೂ ನೋಡಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here