ಬೆಂಜನಪದವು: ಅಂಗಡಿಗಳಲ್ಲಿ ನಗದು ಸಹಿತ ಸಾಮಾಗ್ರಿ ಕಳವು-ಪ್ರಕರಣ ದಾಖಲು

0

ವಿಟ್ಲ: ದಿನಸಿ, ಡ್ರೆಸ್ ಮತ್ತು ಫ್ಯಾನ್ಸಿ ಅಂಗಡಿಗೆ ನುಗ್ಗಿದ ಕಳ್ಳರು ನಗದು ಸಹಿತ ಸಾವಿರಾರು ರೂ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ ಘಟನೆ ಬಂಟ್ವಾಳ ತಾಲೂಕಿನ ಬೆಂಜನಪದವು ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಬಂಟ್ವಾಳ ತಾಲೂಕಿನ ಬೆಂಜನಪದವಿನಲ್ಲಿರುವ ಅಲ್ಬರ್ಟ್ ಫೆರ್ನಾಂಡೀಸ್ ಬಿಲ್ಡಿಂಗ್ ನಲ್ಲಿ ನಮಿತಾರವರ ಮಾಲಕತ್ವದ ರಾಜೇಶ್ವರಿ ದಿನಸಿ ಅಂಗಡಿ ಮತ್ತು ರಾಜರಾಜೇಶ್ವರಿ ಡ್ರೆಸ್ ಫ್ಯಾನ್ಸಿ ಅಂಗಡಿಯಲ್ಲಿ ಜು. 22 ರಂದು ಮುಂಜಾನೆ ವೇಳೆ ಕಳವು ನಡೆದಿದೆ.


ಮರುದಿನ ಬೆಳಗ್ಗೆ ಪರಿಚಯದ ವಸಂತರವರು ಕರೆ ಮಾಡಿ ನಮಿತಾರವರಿಗೆ ಅಂಗಡಿಯ ಶಟರ್ ಅರ್ಧ ತೆರೆದಿರುವ ಬಗ್ಗೆ ಮಾಹಿತಿ ನೀಡಿದ್ದು, ಕೂಡಲೇ ಅಂಗಡಿಗೆ ಬಂದು ನೋಡಿದಾಗ ಕಳವು ನಡೆದಿರುವುದು ಬೆಳಕಿಗೆ ಬಂದಿದೆ.


ಅಂಗಡಿಯ ಶಟರ್‌ನ್ನು ಕಬ್ಬಿಣದ ರಾಡ್ ನಿಂದ ಮೇಲಕ್ಕೆತ್ತಿ ಅಂಗಡಿಯ ಒಳಗಿದ್ದ ಬಿಸ್ಕಿಟ್ ಪ್ಯಾಕೇಟ್, ಸಿಗರೇಟ್ ಪ್ಯಾಕೇಟ್, ಕ್ಯಾಶ್ ಡ್ರಾವರ್ ನ ಬೀಗವನ್ನು ಮುರಿದು ಅದರಲ್ಲಿದ್ದ 1500 ರೂಪಾಯಿ ನಗದು ಕಳವು ಮಾಡಿದ್ದಲ್ಲದೇ ರಾಜರಾಜೇಶ್ವರಿ ಡ್ರೆಸ್ ಫ್ಯಾನ್ಸಿ ಸ್ಟೋರ್ ನ ಶಟರಿನ ಬೀಗ ಮುರಿದು ಅದರೊಳಗಿದ್ದ ಸುಮಾರು 10,000 ರೂಪಾಯಿ ಮೌಲ್ಯದ ಶರ್ಟ್ ಮತ್ತು ಜೀನ್ಸ್ ಪ್ಯಾಂಟ್, 5000 ರೂಪಾಯಿ ಮೌಲ್ಯದ ಚಪ್ಪಲಿ ಹಾಗೂ ಕ್ಯಾಶ್ ಡ್ರಾವರ್ ನಲ್ಲಿದ್ದ ೩೫೦೦ ರೂಪಾಯಿ ನಗದು, ಸ್ಟೀಲ್ ಕಾಣಿಕೆ ಡಬ್ಬದಲ್ಲಿದ್ದ 10,000 ರೂಪಾಯಿ ನಗದನ್ನು ಕಳವು ಮಾಡಿದ ಬಳಿಕ ಬಿಲ್ಡಿಂಗ್ ನ ಸ್ಟಾಕ್ ರೂಮ್‌ನ ಅಂಗಡಿಯ ಶಟರಿನ ಬೀಗ ಮುರಿದು ಒಂದು ಪೈಂಟ್ ಡಬ್ಬಿಯನ್ನು ಕಳವು ಮಾಡಿ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಅಂಗಡಿ ಮಾಲಕರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here