ಕಡಬ: ಗೃಹಲಕ್ಷ್ಮೀ ಯೋಜನೆಗೆ ಉಚಿತ ನೋಂದಣಿಗೆ ಸರಕಾರದ ಆದೇಶ-ಸಂಕಷ್ಟದಲ್ಲಿರುವ ಗ್ರಾಮಒನ್ ಸೇವಾ ಕೇಂದ್ರಗಳ ಸಮಸ್ಯೆ ಪರಿಹರಿಸಲು ಸರಕಾರಕ್ಕೆ ಮನವಿ

0

ಕಡಬ: ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಗೆ ಉಚಿತವಾಗಿ ನೋಂದಣಿಗೆ ಸರಕಾರ ಆದೇಶ ನೀಡಿರುವುದರಿಂದ ಗ್ರಾಮ ಒನ್ ಕೇಂದ್ರಗಳು ಸಂಕಷ್ಟಕ್ಕೆ ಒಳಗಾಗಿದೆ ಈ ಸಮಸ್ಯೆಯನ್ನು ಪರಿಹರಿಸಿಕೊಡುವಂತೆ ಕಡಬ ತಾಲೂಕಿನ ಗ್ರಾಮ ಒನ್ ಫ್ರಾಂಚೈಸಿನ ನಿರ್ವಾಹಕರು ಕಡಬ ತಹಸೀಲ್ದಾರ್ ಮೂಲಕ ಜು.24ರಂದು ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.


ಕಡಬ ತಾಲೂಕಿನ ಸುಮಾರು 20 ಗ್ರಾಮ ಒನ್ ಫ್ರಾಂಚೈಸಿ ನಿರ್ವಾಹಕರು ಮನವಿ ನೀಡಿದ್ದು, ನಾವು ಒಂದು ವರುಷದ ಹಿಂದೆ ಗ್ರಾಮ ಒನ್ ಕೇಂದ್ರಗಳನ್ನು ಬಂಡವಾಳ ಹೂಡಿಕೆ ಮಾಡಿ ಆರಂಭಿಸಿರುತ್ತೇವೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನವರು ಗ್ರಾಮ ಪಂಚಾಯತ್‌ಗಳಿಗೆ ಕಳುಹಿಸಿದ ಸುತ್ತೋಲೆಯಲ್ಲೂ ಗ್ರಾಮ ಒನ್ ಕೇಂದ್ರಗಳಿಗೆ ಬೇಕಾದ ವ್ಯವಸ್ಥೆಗಳನ್ನು ಮಾಡಿ ಕೊಡಬೇಕಾಗಿ ತಿಳಿಸಲಾಗಿದೆ. ಆದರೆ ಸರಕಾರದಿಂದ ನಮ್ಮ ಕೇಂದ್ರಗಳಿಗೆ ಯಾವುದೇ ರೀತಿಯ ಸೌಲಭ್ಯಗಳನ್ನು ಒದಗಿಸಿರುವುದಿಲ್ಲ. ಕೇವಲ ಐಡಿ ಮಾತ್ರ ಕೊಟ್ಟು ನಮ್ಮ ಮೂಲಕ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ನಮಗೆ ಸರಿಯಾದ ಕಮಿಷನ್ ಕೂಡ ಸಿಗುತ್ತಿಲ್ಲ. ಈ ಮೊದಲು ಉಚಿತವಾಗಿ ಅಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಮಾಡಿಸಿಕೊಡುವಂತೆ ಜಿಲ್ಲಾ ಸಂಯೋಜಕರು ನಮಗೆ ತಿಳಿಸಿ, ಇದಕ್ಕೆ ಸಂಭಾವನೆ ಇದೆ ಎಂದು ಎಲ್ಲರಿಗೂ ದೂರವಾಣಿ ಮುಖಾಂತರ ತಿಳಿಸಿದ್ದರು. ಆದರೆ ಅದಕ್ಕೆ ಸರಿಯಾದ ಕಮಿಷನ್ ಅಥವಾ ಯಾವುದೇ ರೀತಿಯ ಸಂಭಾವನೆಯನ್ನು ಇಲ್ಲಿಯವರೆಗೆ ನೀಡಿರುವುದಿಲ್ಲ. ಹಲವು ಕ್ಯಾಂಪ್‌ಗಳನ್ನು ಮಾಡಿ ಸಾವಿರಾರು ರೂ ಖರ್ಚು ಮಾಡಿ ನಷ್ಟ ಅನುಭವಿಸಿರುತ್ತೇವೆ. ಅದಕ್ಕೆ ಮಾಡಿದ ಖರ್ಚು ಕೂಡ ನಮಗೆ ಕೊಟ್ಟಿಲ್ಲ. ಇದೀಗ ಸರಕಾರದ ವತಿಯಿಂದ ಗೃಹಲಕ್ಷ್ಮಿ ಯೋಜನೆಯನ್ನು ಉಚಿತವಾಗಿ ಮಾಡಿಕೊಡಬೇಕೆಂದು ಒತ್ತಡ ಹಾಕುತ್ತಿದ್ದಾರೆ. ನಾವು ನೀಡುವ ಸೇವೆಗಳಿಗೆ ಹಣವನ್ನು ಅದೇ ದಿನ ಜಮಾ ಮಾಡಬೇಕು. ಎಲ್ಲವನ್ನೂ ಉಚಿತವಾಗಿ ಮಾಡಿಕೊಟ್ಟರೆ ನಮ್ಮ ಗ್ರಾಮ ಒನ್ ಕೇಂದ್ರದ ಖರ್ಚು ವೆಚ್ಚಗಳನ್ನು ಯಾರು ಕೊಡುವುದು ನಮ್ಮ ಜೀವನೋಪಾಯಕ್ಕೆ ನಾವು ಏನು ಮಾಡಬೇಕು. ತಿಂಗಳ ಖರ್ಚು ಕೊಠಡಿ ಬಾಡಿಗೆ ವಿದ್ಯುತ್ ಬಿಲ್, ಇಂಟರ್ನೆಟ್ ಬಿಲ್ ಪ್ರಿಂಟ್ ಪೇಪರ್ ಮತ್ತು ಇತರ ಖರ್ಚುಗಳನ್ನು ಭರಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.


ಗ್ರಾಮಒನ್ ಐಡಿ ಪಡೆದುಕೊಂಡು ಸೈಬರ್ ಸೆಂಟರ್‌ಗಳಿಂದ ದುರುಪಯೋಗ: ಈ ನಡುವೆ ಕೆಲವು ಸೇವಾ ಕೇಂದ್ರದ ಹೆಸರಿನಲ್ಲಿ ಅನಧಿಕೃತವಾಗಿ ಸೇವಾ ಸಿಂಧು ಐಡಿಯಲ್ಲಿ ಕೆಲಸ ಮಾಡಿಕೊಂಡು ಹಣ ಮಾಡುತ್ತಿದಾರೆ. ನಾವು ಎಲ್ಲವನ್ನು ಸಹಿಸಿಕೊಂಡು ವಿಧೇಯತೆಯಿಂದ ಕೆಲಸ ಮಾಡುತ್ತಿದ್ದರೂ, ಅದನ್ನು ಸಹಿಸಲಾಗದೆ ಕೆಲವರು ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರದ ವಿರೋಧಿಗಳು ನಮ್ಮ ವಿರುದ್ದ ವಿವಿಧ ರೀತಿಯ ಷಡ್ಯಂತರಗಳನ್ನು ಮಾಡಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಈ ಸಮಸ್ಯೆಗಳನ್ನು ನಿಭಾಯಿಸಿಕೊಂಡು ಕೆಲಸ ಮಾಡಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರ ಮನವಿಯಲ್ಲಿ ಸರಕಾರವನ್ನು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಕಡಬ ತಾಲೂಕಿನ ಗ್ರಾಮಒನ್ ಪ್ರಾಂಚೈಸಿ ನಿರ್ವಾಹಕರು ಉಪಸ್ಥಿತರಿದ್ದರು, ಉಪ ತಹಸೀಲ್ದಾರ್ ಮನೋಹರ್ ಕೆ.ಟಿ. ಮನವಿ ಸ್ವೀಕರಿಸಿದರು.

LEAVE A REPLY

Please enter your comment!
Please enter your name here