ನೆಲ್ಯಾಡಿ: ಹಣದ ವಿಚಾರದಲ್ಲಿ ಹಲ್ಲೆಗೈದು ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಯಾಹ್ಯ ಕೊಕ್ಕಡ ಎಂಬವರು ನೀಡಿದ ದೂರಿನಂತೆ ಶಿವಪ್ರಸಾದ್ ಪಿ.ಎಂ.ಹಾಗೂ ಗಣೇಶ್ ಎಂಬವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಉಪ್ಪಿನಂಗಡಿ ಗ್ರಾಮದ ಮಠ ನಿವಾಸಿ ಕೆ.ಮಹಮ್ಮದ್ ಎಂಬವರ ಪುತ್ರ ಯಾಹ್ಯ ಕೊಕ್ಕಡ(44ವ.)ಎಂಬವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಯಾಹ್ಯ ಅವರಿಂದ ಶಿವಪ್ರಸಾದ್ ಪಿ.ಎಂ.ಎಂಬವರು ಅಂದಾಜು 46 ಲಕ್ಷ ರೂ.ಪಡಕೊಂಡಿದ್ದು ಈ ಬಗ್ಗೆ ಕರಾರು ಪತ್ರ ಮತ್ತು ಚೆಕ್ಕುಗಳನ್ನು ನೀಡಿದ್ದಾರೆ. ಈ ಹಣವನ್ನು ವಾಪಾಸು ಕೊಡುವಂತೆ ಹಲವು ಬಾರಿ ಕೇಳಿದರೂ ಇವತ್ತು, ನಾಳೆ ಎಂದು ದಿನ ಮುಂದೂಡುತ್ತಿದ್ದರು. ಜು.23ರಂದು ಸಂಜೆ ಶಿವಪ್ರಸಾದ್ರವರು ಕರೆ ಮಾಡಿ ಗೋಳಿತ್ತೊಟ್ಟು ಎಂಬಲ್ಲಿಗೆ ಬಾ, ಹಣದ ವಿಚಾರದಲ್ಲಿ ಮಾತನಾಡೋಣ ಎಂದು ತಿಳಿಸಿದ್ದರು. ಅದರಂತೆ ಯಾಹ್ಯಾರವರು ತನ್ನ ಸ್ವಿಪ್ಟ್ ಕಾರಿನಲ್ಲಿ ರಿಯಾಸ್ ಎಂಬವರೊಂದಿಗೆ ಗೋಳಿತ್ತೊಟ್ಟು ಗ್ರಾಮದ ಕೊಕ್ಕಡ ಕ್ರಾಸ್ನಿಂದ ಕಾಂಕ್ರಿಟ್ ರಸ್ತೆಯಲ್ಲಿ ಸ್ವಲ್ಪ ಮುಂದೆ ತಲುಪಿದಾಗ ಶಿವಪ್ರಸಾದ್ ಹಾಗೂ ಗಣೇಶ್ ಎಂಬವರು ಕಾರಿನಲ್ಲಿ ಇದ್ದು, ಅವರ ಬಳಿ ಹೋಗುತ್ತಿದ್ದಂತೆ ಶಿವಪ್ರಸಾದ್ರವರು ನಿನಗೆ ಹಣ ಕೊಡಬೇಕಾ ಎಂದು ಅವಾಚ್ಯವಾಗಿ ಬೈದು ಅವರ ಕೈಯಲ್ಲಿದ್ದ ಮರದ ರೀಪಿನಿಂದ ತೊಡೆ, ಎದೆಗೆ ಹೊಡೆದಿದ್ದಾರೆ. ಈ ವೇಳೆ ಗಣೇಶ್ ಎಂಬವನು ನಿನಗೆ ಹಣ ಕೊಡಲ್ಲ, ಏನು ಮಾಡುತ್ತಿಯ ಎಂದು ಅವಾಚ್ಯವಾಗಿ ಬೈದು ಕೈಯಿಂದ ಬೆನ್ನಿಗೆ ಹೊಡೆದಿದ್ದಾರೆ. ಈ ವೇಳೆ ಸ್ವಿಫ್ಟ್ ಕಾರಿನಲ್ಲಿದ್ದ ರಿಯಾಸ್ರವರು ಇಳಿದು ಬರುತ್ತಿರುವುದನ್ನು ಕಂಡು, ಇನ್ನೊಮ್ಮೆ ಹಣ ಕೇಳಿದರೆ ಕೊಂದು ಹಾಕುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಬಿಳಿ ಬಣ್ಣದ ಕಾರಿನಲ್ಲಿ ಹೋಗಿದ್ದಾರೆ ಎಂದು ಯಾಹ್ಯಾ ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 96/2023 ಕಲಂ: 504,324,323,506,34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.