ಕ್ಷಾತ್ರ ಪರಂಪರೆ, ವೀರತ್ವವನ್ನು ಮರೆತ ದೇಶಕ್ಕೆ ಭವಿಷ್ಯವಿಲ್ಲ : ಶ್ರೀಕಾಂತ ಶೆಟ್ಟಿ
ಪುತ್ತೂರು: ಕ್ಷಾತ್ರ ಪರಂಪರೆ, ವೀರತ್ವವನ್ನು ಮರೆತ ದೇಶಕ್ಕೆ ಭವಿಷ್ಯವಿಲ್ಲ. ಯಾವಾಗ ರಾಷ್ಟ್ರದ ಸೈನಿಕ ತನ್ನ ಕೋವಿಯನ್ನು ಕೆಳಗಿಳಿಸುತ್ತಾನೋ ಆಗ ಆ ರಾಷ್ಟ್ರ ಅರಾಜಕತೆಯಿಂದ ನಲುಗಿಹೋಗುತ್ತದೆ. ಹಾಗಾಗಿ ಸೈನಿಕರಿಗೆ ನೈತಿಕ ಶಕ್ತಿ ತುಂಬುವ, ನಿರಂತರವಾಗಿ ಬೆಂಬಲ ತೋರುವ ಸಂಸ್ಕಾರವನ್ನು ನಾಡಿನ ಜನ ಬೆಳೆಸಿಕೊಳ್ಳಬೇಕು. ಯೋಧರು ಬಲಿಷ್ಟವಾಗಿದ್ದಷ್ಟೂ ದೇಶ ಚೆನ್ನಾಗಿರುತ್ತದೆ ಎಂದು ಉಡುಪಿಯ ವಾಗ್ಮಿ ಶ್ರೀಕಾಂತ ಶೆಟ್ಟಿ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ರೂಪಿಸಲ್ಪಟ್ಟಿರುವ ಪುತ್ತೂರಿನ ಅಮರ್ ಜವಾನ್ ಜ್ಯೋತಿ ಸ್ಮಾರಕದಲ್ಲಿ ಬುಧವಾರ ನಡೆದ ಕಾಶ್ಮೀರ ವಿಜಯ್ ದಿವಸ್ ಆಚರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕೇವಲ ಉದ್ಯೋಗವನ್ನಷ್ಟೇ ಅಪೇಕ್ಷಿಸುವವರು ಸೈನ್ಯಕ್ಕೆ ಸೇರುವುದಲ್ಲ. ದೇಶದ ಬಗೆಗೆ ಅಪಾರ ಅಭಿಮಾನ ಕಾಳಜಿಯಿರುವವರು ಸೈನಿಕರಾಗುತ್ತಾರೆ. ಹಾಗಾಗಿ ಅದೊಂದು ವೃತ್ತಿಯಷ್ಟೇ ಅಲ್ಲ ಎಂಬುದನ್ನು ಗಮನಿಸಬೇಕು. ನನ್ನ ಹಿಂದೆ ಇಡಿಯ ದೇಶ ಇದೆ ಎಂಬ ಭಾವನೆಯಿಂದ ಸೈನಿಕರು ಕೆಲಸ ಮಾಡುತ್ತಾರೆ. ಆದರೆ ಅಂತಹ ವೀರಪುತ್ರರನ್ನೇ ಅವಮಾನಿಸುವ, ಅನುಮಾನಿಸುವ ಕೆಲಸ ದೇಶದ ಒಳಗಡೆ ಇರುವ ಕೆಲವರಿಂದ ಎಗ್ಗಿಲ್ಲದೆ ನಡೆಯುತ್ತಿದೆ. ಅಕಸ್ಮಾತ್ ಸೈನಿಕರು ಇದರಿಂದ ರೋಸಿ ಹೋಗಿ ಶಸ್ತ್ರ ಕೆಳಗಿಟ್ಟರೆ ದೇಶದ ಗತಿಯೇನು ಎಂಬುದನ್ನು ಆಲೋಚಿಸಬೇಕು ಎಂದು ನುಡಿದರು
ಮತ್ತೋರ್ವ ಅತಿಥಿ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ತಾಯ್ನಾಡಿನ ವಿರೋಧಿಗಳು ಯಾರೇ ಆಗಿರಲಿ ಅವರೆಲ್ಲರೂ ನಮ್ಮೆಲ್ಲರ ವಿರೋಧಿಗಳು. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ನಮ್ಮ ಐದುನೂರಕ್ಕಿಂತಲೂ ಅಧಿಕ ಯೋಧರು ಪ್ರಾಣಾರ್ಪಣೆ ಮಾಡಿ ನಮ್ಮ ಭೂಭಾಗವನ್ನು ಉಳಿಸಿಕೊಡದೇ ಇರುತ್ತಿದ್ದರೆ ನಾವು ಹಂತ ಹಂತವಾಗಿ ಒಂದೊಂದೇ ಪ್ರದೇಶವನ್ನು ಕಳೆದುಕೊಳ್ಳುವ ಸ್ಥಿತಿ ಬರುತ್ತಿತ್ತು. ಹಾಗಾಗಿ ದೇಶ ಕಾಯುವ ಯೋಧರಿಗೆ ಸಮಾಜದಲ್ಲಿ ಅತೀವ ಗೌರವದ ಸ್ಥಾನವಿದೆ ಎಂದು ನುಡಿದರು.
ನಮ್ಮ ಸಮಾಜದಲ್ಲಿ ಮಿಲಿಟರಿಗೆ ಬಗೆಗೆ ಜಾಗೃತಿ ಕಡಿಮೆ ಇದೆ. ಹಾಗಾಗಿ ಇತ್ತೀಚೆಗಿನ ದಿನಗಳಲ್ಲಿ ಸೈನ್ಯಕ್ಕೆ ಸೇರುವ ಆಸಕ್ತರ ಸಂಖ್ಯೆ ಕಡಿಮೆಯಾಗುತ್ತಿದೆ. ಸೇನೆಗೆ ಸೇರುವುದೆಂದರೆ ಯುದ್ಧ ಮಾಡುವುದು, ಬದುಕನ್ನು ಕಳೆದುಕೊಳ್ಳುವುದು ಎಂಬ ತಪ್ಪು ಕಲ್ಪನೆ ಅನೇಕರಲ್ಲಿದೆ. ಆದರೆ ಸೇನೆಗೆ ಸೇರಿದ ನಂತರವೂ ಕಲಿಕೆಯ ಅವಕಾಶಗಳಿವೆ, ಸೇನೆಯಲ್ಲಿದ್ದು ವ್ಯಕ್ತಿತ್ವ ಬೆಳೆಸಿಕೊಳ್ಳುವ ಅಪಾರ ಸಾಧ್ಯತೆಗಳಿವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಡಾಕ್ಟರ್, ಇಂಜಿನಿಯರ್ ಆಗುವಂತೆ ಸೈನಿಕರಾಗುವುದೂ ನಮ್ಮ ಆದ್ಯತೆಯಾಗಬೇಕು ಎಂದರಲ್ಲದೆ ಅಂಬಿಕಾದಂತಹ ಶಿಕ್ಷಣ ಸಂಸ್ಥೆ ಪುತ್ತೂರಿನಲ್ಲಿರುವುದು ಅತೀವ ಹೆಮ್ಮೆ ತರುವ ವಿಚಾರ ಎಂದು ಹೇಳಿದರು.
ಪುತ್ತೂರಿನ ಸಹಾಯಕ ಆಯುಕ್ತ ಗಿರೀಶ್ ನಂದನ್ ಮಾತನಾಡಿ ಕಾರ್ಗಿಲ್ ವಿಜಯ ಎಂಬುದು ಅನೇಕ ಸೈನಿಕರ ತ್ಯಾಗದ ಪ್ರತಿಫಲ. ಅವರೆಲ್ಲರ ಬಲಿದಾನವನ್ನು ನಾವು ನೆನಪಿಸಿಕೊಳ್ಳಬೇಕು. 1999ರಲ್ಲಿ ಒಂದೆಡೆ ಶಾಂತಿ ಮಾತುಕತೆ ನಡೆಯುತ್ತಿದ್ದಾಗ ಮತ್ತೊಂದೆಡೆಯಿಂದ ಪಾಕಿಸ್ಥಾನ ತನ್ನ ಸೈನಿಕರನ್ನು ನುಗ್ಗಿಸುವ ಪ್ರಯತ್ನ ಮಾಡಿತ್ತು. ಆದರೆ ನಮ್ಮ ಸೈನಿಕರು ಕೆಚ್ಚೆದೆಯಿಂದ ಹೋರಾಡಿ ನಮ್ಮ ದೇಶವನ್ನು ಉಳಿಸಿಕೊಟ್ಟಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪುತ್ತೂರಿನ ಮಾಜಿ ಸೈನಿಕರ ಸಂಘದ ಅಧ್ಯಕ್ಷ, ಭಾರತೀಯ ನೌಕಾದಳದ ನಿವೃತ್ತ ಪೆಟ್ಟಿ ಆಫೀಸರ್ ಎಂ.ಕೆ.ನಾರಾಯಣ ಭಟ್ ಮಾತನಾಡಿ ಇಂದು ವಿದ್ಯಾರ್ಥಿ ಸಮುದಾಯದಲ್ಲಿ ನೈತಿಕತೆ ಕ್ಷೀಣಿಸುತ್ತಿದೆ. ಮಾದಕ ದ್ರವ್ಯಗಳಿಗೆ ಯುವಸಮೂಹ ಬಲಿಯಾಗುತ್ತಿದೆ. ಅಂತೆಯೇ ಹನಿ ಟ್ರಾಪಿಂಗ್ ಮುಖಾಂತರ ದೇಶವನ್ನು ಹಾಳುಮಾಡುವ ಪ್ರಕ್ರಿಯೆ ನಡೆಯುತ್ತಿದೆ. ವಿದ್ಯಾರ್ಥಿ ಸಮುದಾಯ ತಕ್ಷಣ ಎಚ್ಚೆತ್ತು ದೇಶಾಭಿಮಾನಿಗಳಾಗಿ ಮುಂದುವರಿಯಬೇಕು ಎಂದು ಹೇಳಿದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತ ಮಂಡಳಿ ಸದಸ್ಯರಾದ ಡಾ.ಎಚ್.ಮಾಧವ ಭಟ್, ಸುರೇಶ ಶೆಟ್ಟಿ, ಬಾಲಕೃಷ್ಣ ಬೋರ್ಕರ್, ಹಿಂದೂ ನಾಯಕ ಅರುಣ್ ಕುಮಾರ್ ಪುತ್ತಿಲ, ನಗರ ಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ಸುದಾನ ವಿದ್ಯಾಸಂಸ್ಥೆಗಳ ಸಂಚಾಲಕ ವಿಜಯ ಹಾರ್ವಿನ್, ಸಾಂದೀಪನಿ ವಿದ್ಯಾಸಂಸ್ಥೆಗಳ ಸಂಚಾಲಕ ಹಿಂದಾರು ಭಾಸ್ಕರಾಚಾರ್ಯ, ನಗರ ಸಭಾ ಉಪಾಧ್ಯಕ್ಷೆ ಹಾಗೂ ಸ್ಕೌಟ್ ಅಂಡ್ ಗೈಡ್ಸ್‌ನ ಪುತ್ತೂರು ವಿಭಾಗದ ಕಾರ್ಯದರ್ಶಿ ವಿದ್ಯಾಗೌರಿ, ಉದ್ಯಮಿಗಳಾದ ಚೈತ್ರ ನಾರಾಯಣ, ಶಿವರಾಮ ಆಳ್ವ, ಹಿರಿಯ ನ್ಯಾಯವಾದಿ ಮಹೇಶ್ ಕಜೆ, ಮಾಜಿ ಸೈನಿಕರು, ಗಣ್ಯರು, ಸಾರ್ವಜನಿಕರು ಹಾಗೂ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಾಚಾರ್ಯರು, ಬೋಧಕ, ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ವಿಶ್ವ ಜಾಂಬೂರಿಯಲ್ಲಿ ಭಾಗವಹಿಸುತ್ತಿರುವ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ವಿದ್ಯಾರ್ಥಿ ಶ್ರೀಕೃಷ್ಣ ಎಸ್. ನಟ್ಟೋಜ, ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳಾದ ಸತ್ಯಪ್ರಸಾದ್, ಅನಿಕೇತ್ ಹಾಗೂ ಅಕ್ಷಯಕೃಷ್ಣ ಅವರನ್ನು ಅಭಿನಂದಿಸಲಾಯಿತು. ಪುತ್ತೂರಿನ ಸ್ಕೌಟ್ ಅಂಡ್ ಗೈಡ್ಸ್ ವಿಭಾಗದಿಂದ ವಿಶ್ವಜಾಂಬೂರಿಗೆ ಆಯ್ಕೆಯಾದ ೨೧ ಮಂದಿ ವಿದ್ಯಾರ್ಥಿಗಳಿಗೆ ಪೌಚ್ ನೀಡಿ ಗೌರವಿಸಲಾಯಿತು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಪ್ರಸ್ತಾವನೆಗೈದು ಸ್ವಾಗತಿಸಿದರು. ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ವಂದಿಸಿದರು. ಉಪನ್ಯಾಸಕರಾದ ವಿಷ್ಣುಪ್ರದೀಪ್ ಹಾಗೂ ಸತೀಶ್ ಇರ್ದೆ ಕಾರ್ಯಕ್ರಮ ನಿರ್ವಹಿಸಿದರು. ಈ ಕಾರ್ಯಕ್ರಮದಲ್ಲಿ ಸುದಾನ ಸಂಸ್ಥೆ, ರಾಮಕೃಷ್ಣ ಶಾಲೆ ಹಾಗೂ ಸಾಂದೀಪನಿ ಸಂಸ್ಥೆಯ ಸ್ಕೌಟ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು ಭಾಗಿಯಾದರು. ಪುತ್ತೂರಿನ ಮಾಜಿ ಸೈನಿಕರ ಸಂಘ, ಅಮರ್ ಜವಾನ್ ಜ್ಯೋತಿ ಸಂರಕ್ಷಣಾ ಸಮಿತಿ ಹಾಗೂ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಸಭಾಕಾರ್ಯಕ್ರಮದ ಪೂರ್ವದಲ್ಲಿ ಅತಿಥಿಗಳಿಂದ ಅಮರ್ ಜವಾನ್ ಜ್ಯೋತಿ ಸ್ಮಾರಕಕ್ಕೆ ರೀತ್ ಸಮರ್ಪಣೆ ನಡೆಯಿತು.