ಗ್ರಾ.ಪಂ. ಉಪಚುನಾವಣೆಯಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ: ಶಾಸಕ ರೈ

0

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ನಿಡ್ಪಳ್ಳಿ ಮತ್ತು ಆರ್ಯಾಪು ಗ್ರಾಪಂ ಉಪ ಚುನಾವಣೆಯಲ್ಲಿ ಬಿಜೆಪಿಯ ಬೆಂಬಲಿತರ ತೆಕ್ಕೆಯಲ್ಲಿದ್ದ ಒಂದು ಕ್ಷೆತ್ರವನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ಪಡೆದುಕೊಂಡಿದ್ದು ಇನ್ನೊಂದರಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ, ಚುನವಣೆಯಲ್ಲಿ ಮತದಾರ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದಾರೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು.

ಫಲಿತಾಂಶದ ಬಳಿಕ ಕಾಂಗ್ರೆಸ್ ಕಚೇರಿಯಲ್ಲಿ ವಿಜೇತ ಅಭ್ಯರ್ಥಿ ನಿಡ್ಪಳ್ಳಿ ಗ್ರಾಪಂ ನ ಸತೀಶ್ ಶೆಟ್ಟಿಯವರನ್ನು ಅಭಿನಂದಿಸಿ ಮಾತನಾಡಿದ ಶಾಸಕರು ಚುನವಣೆ ನಡೆದ ಎರಡೂ ವಾರ್ಡುಗಳು ಬಿಜೆಪಿ ಬಲಿಷ್ಠ ವಾರ್ಡುಗಳಾಗಿದ್ದವು, ಎರಡೂ ವಾರ್ಡಿನಲ್ಲಿ ಈ ಹಿಂದೆ ಬಿಜೆಪಿ ಬೆಂಬಲಿತರೇ ಗೆದ್ದಿದ್ದರು. ಈ ಬಾರಿಯ ಚುನಾವಣೆಯಲ್ಲಿ ಸರಕಾರದ ಐದು ಗ್ಯಾರಂಟಿ ಯೋಜನೆಗಳು ಫಲವನ್ನು ನೀಡಿದೆ. ನಿಡ್ಪಳ್ಳಿ ವಾರ್ಡು ಕಾಂಗ್ರೆಸ್ ಪಾಲಾಗಿದ್ದು ಆರ್ಯಾಪು ವಾರ್ಡಿನಲ್ಲಿ ನಮ್ಮ ಅಭ್ಯರ್ಥಿ ಮತಗಳಿಕೆಯಲ್ಲಿ ಏರಿಕೆಯಾಗಿರುವುದು ಸಾಕ್ಷಿಯಾಗಿದೆ. ಕೆಲವು ವ್ಯಯುಕ್ತಿಕ ಕಾರಣಗಳಿಂದ ಆರ್ಯಾಪು ವಾರ್ಡಿನಲ್ಲಿ ಸೋಲಾಗಿದೆ. ಮತದಾರ ಕಾಂಗ್ರೆಸ್ ಪರವಾಗಿದ್ದಾರೆ ಎಂಬುದು ಚುನಾವಣೆಯಲ್ಲಿ ಸ್ಪಷ್ಟವಾಗಿದೆ. ಐದು ಗ್ಯಾರಂಟಿ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಮತವಾಗಿ ಪರಿವರ್ತನೆ ಮಾಡಬೇಕಾದ ಅನಿವಾರ್ಯತೆ ಇದೆ ಎಂಬುದು ಚುನಾವಣೆಯಲ್ಲಿ ಸಾಬೀತಾಗಿದೆ.

ಮುಂದೆ ನಡೆಯುವ ತಾಪಂ ಹಗೂ ಜಿಪಂ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳು ನಮಗೆ ಇನ್ನಷ್ಟು ಫಲವನ್ನು ಕೊಡಲಿದೆ. ಬಿಜೆಪಿಯನ್ನು ಮತದಾರ ದೂರ ಮಾಡಿದ್ದಾನೆ ಎಂಬುದು ಚುನಾವಣೆಯಲ್ಲಿ ಗೋಚರಿಸಿದೆ ಎಂದು ಹೇಳಿದರಲ್ಲದೆ ಕಾರ್ಯಕರ್ತರು ಪ್ರತೀ ಮನೆ ಮನೆಗೆ ತೆರಳಿ ಕಾಂಗ್ರೆಸ್ ಯೋಜನೆಯ ಪ್ರಚಾರವನ್ನು ಇನ್ನಷ್ಟು ಗಟ್ಟಿಯಾಗಿ ಮಾಡಬೇಕಿದೆ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಮಾತನಾಡಿ ಎರಡರಲ್ಲಿ ಒಂದು ನಮಗೆ ಗೆಲುವು ತಂದಿದೆ. ಗ್ರಾಪಂ ಚುನಾವಣೆಯಲ್ಲಿ ವೈಯುಕ್ತಿಕ ವಿಚಾರಗಳು ಪೆಟ್ಟು ಕೊಡುವ ಕಾರಣ ಆರ್ಯಾಪಿನಲ್ಲಿ ಸೋಲಾಗಿರಬಹುದು ಆದರೆ ಮತ ಗಳಿಕೆಯಲ್ಲಿ ನಾವು ಏರಿಕೆಯನ್ನು ಕಂಡಿರುವುದು ಸಂತೋಷವನ್ನು ತಂದಿದೆ ಎಂದು ಹೇಳಿದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ ಮಾತನಾಡಿ ಬಿಜೆಪಿಯ ವಶದಲ್ಲಿದ್ದ ಎರಡೂ ಕ್ಷೆತ್ರಗಳನ್ನು ಬಿಜೆಪಿ ಕಳೆದುಕೊಂಡಿರುವುದಕ್ಕೆ ಅವರು ಈ ಹಿಂದೆ ಮಾಡಿರುವ ಭ್ರಷ್ಟ ಆಡಳಿತವೇ ಕಾರಣವಾಗಿದೆ. ಕಾಂಗ್ರೆಸ್ಸನ್ನು ಜನ ಬೆಂಬಲಿಸಿದ್ದಾರೆ ಎಂಬುದು ಫಲಿತಾಂಶದಲ್ಲಿ ಸಾಬೀತಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ನಿಡ್ಪಳ್ಳಿಯ ವಿಜೇತ ಅಭ್ಯರ್ಥ ಸತೀಶ್ ಶೆಟ್ಟಿ, ನಿಡ್ಪಳ್ಳಿ ಗ್ರಾಪಂ ಸದಸ್ಯೆ ಗ್ರೇಟಾ, ಬ್ಲಾಕ್ ಎಸ್ ಟಿ ಘಟಕದ ಅಧ್ಯಕ್ಷರಾದ ಮಹಾಲಿಂಗ ನಾಯ್ಕ, ಹರೀಶ್ ಕೋಟ್ಯಾನ್ ಉಪಸ್ಥಿತರಿದ್ದರು. ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಸಿದ್ದಿಕ್ ಸುಲ್ತಾನ್ ವಂದಿಸಿದರು. ಕಾರ್ಯಕ್ರಮದಲ್ಲಿ ವಿಜೆತ ಅಭ್ಯರ್ಥಿ ಸತೀಶ್ ಸೆಟ್ಟಿಯವರನ್ನು ಶಾಸಕರು ಶಾಲು ಹೊದಿಸಿ ಸನ್ಮಾನಿಸಿದರು.

LEAVE A REPLY

Please enter your comment!
Please enter your name here