ಅರಿಯಡ್ಕ: ಅರಿಯಡ್ಕ ಗ್ರಾಮ ಸಭೆಯು ಜು.24ರಂದು ಕಾವು ಸುವರ್ಣ ಗ್ರಾಮೋದಯ ಸಮುದಾಯ ಭವನದಲ್ಲಿ ಪಂಚಾಯತ್ ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯರವರ ಅಧ್ಯಕ್ಷೆಯಲ್ಲಿ ನಡೆಯಿತು. ನೋಡೆಲ್ ಅಧಿಕಾರಿಯಾಗಿ ಡಾ.ಧರ್ಮಪಾಲ್ ಸಹಾಯಕ ನಿರ್ದೇಶಕರು ಸಹಾಯಕ ಪಶುಸಂಗೋಪನಾ ಇಲಾಖೆ ಪುತ್ತೂರು ವಹಿಸಿದ್ದರು. ಈ ವೇಳೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶಿವರಾಮ ಮಣಿಯಾಣಿ ಕುರುಂಜರವರು ಮಾತಾಡಿ ಪಶುಗಳನ್ನು ಸಾಕುವವರ ಸಂಖ್ಯೆ ಕಡಿಮೆ ಆಗಿದೆ. ಗಂಡು ಕರು ಹುಟ್ಟಿದರೆ ಅದನ್ನು ಏನು ಮಾಡಬೇಕು ನಮ್ಮಲ್ಲಿ ಗೋವು ಶಾಲೆಗಳು ಕೂಡ ಇಲ್ಲ. ಪಶುಸಂಗೋಪನೆ ವತಿಯಿಂದ ಉಚಿತವಾಗಿ ಕೃತಕ ಗರ್ಭಾಧಾರಣೆಗೆ ಹೆಣ್ಣುಕರುಗಳ ಲಸಿಕೆಯನ್ನು ನೀಡಬೇಕು. ಹಾಗೇಯೇ ಪಶುಗಳನ್ನು ದಫನ ಮಾಡಲು ಜಾಗ ನಿಗದಿ ಪಡಿಸಬೇಕೆಂದು ಒತ್ತಾಯಿಸಿದರು. ಇದಕ್ಕೆ ನರಸಿಂಹ ಪೂಂಜ ಗೊಳ್ತಿಲರವರು ಧ್ವನಿಗೂಡಿಸಿದರು. ಈ ಬಗ್ಗೆ ಗ್ರಾಮ ಸಭೆಯಲ್ಲಿ ನಿರ್ಣಯಿಸಲಾಯಿತು.
ಬೀದಿನಾಯಿಗಳ ಕಾಟ:
ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಕಾಟ ಜಾಸ್ತಿಆಗಿದೆ. ನಾಯಿ ಮರಿಗಳನ್ನು ಶಾಲೆ ಅಂಗನವಾಡಿ ವಠಾರದಲ್ಲಿ ಬಿಡುವರರ ಸಂಖ್ಯೆ ಜಾಸ್ತಿ ಆಗಿದೆ. ನಾಯಿಗಳನ್ನು ಕಟ್ಟಿ ಸಾಕಬೇಕು. ಹಾಗೂ ಬೀದಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆಗೆ ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಅಮ್ಮಣ್ಣ ರೈ ಡಿ ಪಾಪೆಮಜಲು ಒತ್ತಾಯಿಸಿದರು. ಈ ಬಗ್ಗೆ ಮಾತಾಡಿದ ನೋಡೆಲ್ ಅಧಿಕಾರಿ ಡಾ.ಧರ್ಮಪಾಲ್ ಪಂಚಾಯತ್ ಮತ್ತು ಸಾರ್ವಜನಿಕರು ಸಹಕರಿಸಿದರೆ ಬೀದಿನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆಗೆ ಪಶು ಸಂಗೋಪಣಾ ಇಲಾಖೆ ಸದಾ ಸಿದ್ಧ ಎಂದರು.
ಮೊಟ್ಟೆಯ ವಿಚಾರವಾಗಿ ಗೊಂದಲ:
ಶಾಲಾ ಮಕ್ಕಳಿಗೆ ಸರಕಾರದದಿಂದ ಮೊಟ್ಟೆಕೊಡುವ ಯೋಜನೆ ಜಾರಿಯಲ್ಲಿದೆ. ಕೆಲವೊಂದು ಶಾಲೆಗಳಿಗೆ ಕೊಳತ ಮೊಟ್ಟೆ ನೀಡಿರುವ ವರದಿಗಳು ಬರುತ್ತಿವೆ. ನಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ಇಂತಹ ಘಟನೆಗಳು ಬಾರದ ರೀತಿಯಲ್ಲಿ ಎಚ್ಚರವಹಿಸಬೇಕೆಂದು ಅಮ್ಮಣ್ಣ ರೈ ಪಾಪೆಮಜಲು ಹೇಳಿದರು. ಈ ಸಂದರ್ಭದಲ್ಲಿ ಪಂಚಾಯತ್ ಮಾಜಿ ಸದಸ್ಯ ಮಹಮ್ಮದ್ ಕುಂಞಯವರು ಮಾತನಾಡಿ ಶಾಲಾ ಮಕ್ಕಳಿಗೆ ಸರಕಾರದಿಂದ ಮೊಟ್ಟೆ ನೀಡಲು ಅನುದಾನ ಕಡಿಮೆ ಆಗುವ ಸಂದರ್ಭದಲ್ಲಿ ಪಂಚಾಯತ್ ನಿಂದ ಪ್ರೋತ್ಸಾಹಧನ ನೀಡಿ ಒಳ್ಳೆಯ ಮೊಟ್ಟೆ ನೀಡಬೇಕೆಂದರು ಈ ಸಂದರ್ಭದಲ್ಲಿ ಅಮ್ಮಣ್ಣ ರೈ ಪಾಪೆಮಜಲು ಮಾತಾಡಿ ನೀವು ನಾನು ಮಾತಾನಾಡುವಾಗ ಮಧ್ಯೆ ಮಾತಾನಾಡುತ್ತಿರಿ. ಇದು ಸರಿಯಲ್ಲ, ನಾನು ಗ್ರಾಮಸ್ಥ. ನನಗೂ ಮಾತಾಡಲು ಹಕ್ಕಿದೆ ಎಂದರು. ಈ ಬಗ್ಗೆ ಸ್ವಲ್ಪ ಕಾವೇರಿದ ಮಾತುಗಳು ಬಂದು ಕೊನೆಗೆ ನೋಡಲ್ ಅಧಿಕಾರಿಯವರು ಇಬ್ಬರ ಮಾತಿಗೂ ತೆರೆ ಎಳೆದರು.ಈ ಬಗ್ಗೆ ಉಪಾಧ್ಯಕ್ಷ ಸಂತೋಷ್ ಮಣಿಯಾಣಿ ಮಾತಾಡಿ ರಾಜ್ಯ ಮಟ್ಟದಲ್ಲಿ ಆಗುವ ಟೆಂಡರು ಇದಕ್ಕೆ ಗ್ರಾಮ ಪಂಚಾಯತ್ ನಿಂದ ಪ್ರೋತ್ಸಾಹಧನ ನೀಡಲು ಸಾಧ್ಯವಿಲ್ಲ. ನಮಗೆ ಬರುವ ಅನುದಾನವೇ ಕಡಿಮೆ ಎಂದರು. ಈ ಬಗ್ಗೆ ಮಹಮ್ಮದ್ ಕುಂಞಯವರು ಮಾತಾಡಿ, ಪಂಚಾಯತ್ ನಿಂದ ಕೆಲವೊಂದು ಸಲ ಅನಾವಶ್ಯಕವಾಗಿ ಹಣ ಖರ್ಚು ಮಾಡಿತ್ತೀರಿ,
ಇದನ್ನು ನಿಲ್ಲಿಸಿ ಪ್ರೋತ್ಸಾಹಧನ ನೀಡಿ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯ ಮಾತಾಡಿ, ನಾವು ಅನಾವಶ್ಯಕವಾಗಿ ಖರ್ಚು ಮಾಡಿಲ್ಲ. ಸಂದರ್ಭಕ್ಕೆ ತಕ್ಕಂತೆ ಭ್ರಷ್ಟಾಚಾರ ರಹಿತ ಸಾರ್ವಜನಿಕ ಸೇವೆಯನ್ನು ಮಾಡಿದ್ದೇವೆ. ಇದರಲ್ಲಿ ನಮಗೆ ತೃಪ್ತಿ ಇದೆ ಎಂದರು. ನನ್ನ ಬಾಯಿ ಮಾತಿನಿಂದ ತಪ್ಪಾಗಿದ್ದರೇ ನನ್ನ ಮಾತನ್ನು ಹಿಂತೆಗೆದುಕೊಳ್ಳುವೇ ಎಂದು ಮಹಮ್ಮದ್ ಕುಂಞಯವರು ಗೊಂದಲಗಳಿಗೆ ತೆರೆ ಎಳೆದರು.
ಶಾಲಾ ವಿದ್ಯಾರ್ಥಿಗಳಿಗೆ ಬಸ್ಸಿನ ವ್ಯವಸ್ಥೆ ಮಾಡಿ:
2022-23ನೇ ಸಾಲಿನಲ್ಲಿ ಶಾಲಾ ಮಕ್ಕಳಿಗೆ ಕಾಲರ್ ಶಿಪ್ ಬಂದಿಲ್ಲ, ಶಾಲಾ ಮಕ್ಕಳಿಗೆ ಸರಿಯಾದ ಸಮಯದಲ್ಲಿ ಬಸ್ಸಿನ ವ್ಯವಸ್ಥೆ ಇಲ್ಲ, ಎಂದು ಯೂಸುಬ್ ಮಾಡ್ನೂರು ಹೇಳಿದರು.ಇದಕ್ಕೆ ಪೂರಕವಾಗಿ ಗ್ರಾ.ಪಂ ಮಾಜಿ ಸದಸ್ಯ ತಿಲಕ್ ರೈ ಮಾತಾಡಿ ಕೌಡಿಚ್ಚಾರುನಲ್ಲಿ ಶಾಲಾ ಮಕ್ಕಳಿಗೆ ಬೆಳಿಗ್ಗಿನ ಜಾವ ಯಾವುದೇ ಬಸ್ಸನ್ನು ನಿಲ್ಲಿಸುವುದಿಲ್ಲ. ಪುತ್ತೂರಿಗೆ ಹೋಗುವ ಶಾಲಾ ಮಕ್ಕಳಿಗೆ ಇದರಿಂದ ತೊಂದರೆ ಉಂಟಾಗಿದೆ.ಕಾವಿನಿಂದ ಪುತ್ತೂರಿಗೆ ಬೆಳಿಗ್ಗಿನ ಜಾವ ಕೆ.ಎಸ್.ಆರ್.ಟಿ.ಸಿ ಬಸ್ಸಿನ ವ್ಯವಸ್ಥೆ ಮಾಡಲು ನಿರ್ಣಯಿಸಬೇಕು.ಹಾಗೆಯೇ ಕೆ.ಎಸ್.ಆರ್.ಟಿ.ಸಿ ಗೆ ಪತ್ರ ಬರೆಯಬೇಕೆಂದರು.ಈ ಸಂದರ್ಭದಲ್ಲಿ ಅಮ್ಮಣ್ಣ ರೈ ಪಾಪೆಮಜಲು ಮಾತಾಡಿ ನಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ನೂತನ ಪದವಿ ಕಾಲೇಜು ತೆರೆಯಲು ಒತ್ತಡ ಹಾಕ ಬೇಕೆಂದರು.
ಅರಿಯಡ್ಕ ಶಾಲಾ ಕಟ್ಟಡದಲ್ಲಿ ಬಿರುಕು:
ಶತಮಾನದ ಇತಿಹಾಸ ಇರುವ ಅರಿಯಡ್ಕ ಸ.ಹಿ.ಪ್ರಾ.ಶಾಲೆಯ ಕಟ್ಟಡ ಬಿರುಕು ಬಿಟ್ಟಿದೆ. ಮುಂದಿನ ದಿನಗಳಲ್ಲಿ ಸುವರ್ಣ ಸಂಭ್ರಮವನ್ನು ಆಚರಿಸುವವರಿದ್ದೇವೆ. ಶಾಲಾ ಕಟ್ಟಡದಲ್ಲಿ ಮಕ್ಕಳು ಕಠಿಣ ಸ್ಥಿತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಲಾಖೆ ತಕ್ಷಣ ಸ್ಪಂಧಿಸಬೇಕು ಎಂದು ಸದಸ್ಯ ಹರೀಶ್
ರೈ ಜಾರತ್ತಾರು ಹೇಳಿದರು.
ಅಧಿಕಾರಿಗಳ ಗೈರು:
ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಪಂಚಾಯತ್ ಇಲಾಖೆಯ ಇಂಜಿನಿಯರ್ ಸಭೆಗೆ ಬಂದಿಲ್ಲ ಇವು ಬಹಳ ಪ್ರಮುಖ ಇಲಾಖೆಗಳು.ಗ್ರಾಮಸಭೆಗೆ ಅವರ ಉಪಸ್ಥಿತಿ ಅವಶ್ಯಕ ಈ ನಿಟ್ಟಿನಲ್ಲಿ ಈ ವಿಚಾರವನ್ನು ಮೇಲಾಧಿಕಾರಿಗಳ ಗಮನಕ್ಕೆ ತರಬೇಕೆಂದು ಶಿವರಾಮ ಮಣಿಯಾಣಿಯವರು ಹೇಳಿದರು. ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಸದಸ್ಯರುಗಳಾದ ಲೋಕೇಶ್ ಚಾಕೋಟೆ, ಮೋನಪ್ಪ ಪೂಜಾರಿ ಕೆರೆಮಾರು, ಹರೀಶ್ ರೈ ಜಾರತ್ತಾರು, ದಿವ್ಯಾನಾಥ ಶೆಟ್ಟಿ ಕಾವು, ಸದಾನಂದ ಮಣಿಯಾಣಿ, ಮಿನಾಕ್ಷಿ ಪಾಪೆಮಜಲು, ಭಾರತಿ ವಸಂತ್ ಕೌಡಿಚ್ಚಾರು, ಪುಷ್ಪಾಲತಾ ಮರತ್ತಮೂಲೆ, ರೇಣುಕ ಸತೀಶ್ ಕರ್ಕೆರಾ, ರಾಜೇಶ್ ಮಣಿಯಾಣಿ ತ್ಯಾಗರಾಜೆ, ಉಷಾರೇಖಾ ರೈ, ಅನಿತಾ ಆಚಾರಿಮೂಲೆ, ಹೇಮಾವತಿ ಚಾಕೋಟೆ, ಶಂಕರ ಮಾಡಂದೂರು, ವಿಜಿತ್ ಕೆರೆಮಾರು, ಜಯಂತಿ ಪಟ್ಟುಮೂಲೆ,ಸಲ್ಮಾ ಕಾವು ,ಅಬ್ದುಲ್ ರಹಿಮಾನ್ ಕಾವು ಹಾಗೂ ವಿವಿಧ
ಇಲಾಖೆಯ ಅಧಿಕಾರಿ ವರ್ಗದವರು,ಗ್ರಾಮಸ್ಥರು, ಅರೋಗ್ಯಧಿಕಾರಿ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕತೆಯರು, ಆಶಾಕಾರ್ಯಕತೆಯರು ವಿವಿಧ ಸಂಘ ಸಂಸ್ಥೆಯ ಮುಖ್ಯಸ್ಥರು,ಪಂಚಾಯತ್ ಸಿಬ್ಬಂದಿಗಳು ಹಾಜರಾಗಿದ್ದರು.
ಪಂಚಾಯತ್ ಪಿ.ಡಿ.ಓ ಪದ್ಮ ಕುಮಾರಿ ಸ್ವಾಗತಿಸಿ ಪಂಚಾಯತ್ ಕಾರ‍್ಯದರ್ಶಿ ಶಿವರಾಮ ಮೂಲ್ಯ ವರದಿ ವಾಚಿಸಿ,ಧನ್ಯವಾದ ನೀಡಿದರು.
ನನ್ನ ಎರಡುವರೆ ವರ್ಷದ ಅವಧಿಯ ಆಧಿಕಾರದಲ್ಲಿ ಗ್ರಾಮದ ಅಭಿವೃದ್ಧಿಗೋಸ್ಕರ ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭಷ್ಟಾಚಾರ ರಹಿತ ಜನ ಸೇವೆಯನ್ನು ಮಾಡಿದ್ದೇನೆ ಎಂಬ ತೃಪ್ತಿನನ್ನಲ್ಲಿ ಇದೆ .ಉತ್ತಮ ಆಡಳಿತ ನೀಡಲು ಸಹಕರಿಸಿದವರಿಗೆಲ್ಲಾ ಈ ಮೂಲಕ ಕೃತಜ್ಞತೆ ಸಲ್ಲಿಸುತ್ತೇನೆ.
ಸೌಮ್ಯ ಬಾಲಸುಬ್ರಹ್ಮಣ್ಯ
ಅಧ್ಯಕ್ಷರು ಗ್ರಾ.ಪಂ ಅರಿಯಡ್ಕ
ಗ್ರಾಮದ ಅಭಿವೃದ್ದಿಗೋಸ್ಕರ ಆರೋಗ್ಯಕರ ಚರ್ಚೆಗಳು ನಡೆದಿದೆ. ಒಳ್ಳೆಯ ಸ್ವಂದನೆ ಸಿಕ್ಕಿದೆ. ಉತ್ತಮ ರೀತಿಯಲ್ಲಿ ಗ್ರಾಮ ಸಭೆ ಮುಕ್ತಾಯವಾಗಿದೆ. ಸಾರ್ವಜನಿಕ ಸಹಕಾರಕ್ಕೆ ಧನ್ಯವಾದಗಳು.
ಡಾ.ಧರ್ಮಪಾಲ್
ಸಹಾಯಕ ನಿರ್ದೇಶಕರು
ಪಶುಸಂಗೋಪನಾ ಇಲಾಖೆ ಪುತ್ತೂರು