ಪುತ್ತೂರು: ಪಡ್ನೂರು ಶ್ರೀಜನಾರ್ದನ ಯುವಕ ಮಂಡಲ ಮತ್ತು ಶ್ರೀ ಸರಸ್ವತಿ ಯುವತಿ ಮಂಡಲದ ಸುವರ್ಣ ಮಹೋತ್ಸವದ ಅಂಗವಾಗಿ ಬನ್ನೂರು ಗ್ರಾಮ ಪಂಚಾಯತ್ನ ಸಹಯೋಗದೊಂದಿಗೆ ಜು.30ರಂದು ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನದ ಎದುರುಗದ್ದೆಯಲ್ಲಿ ವಿವಿಧ ಕ್ರೀಡಾಕೂಟಗಳೊಂದಿಗೆ ನಡೆದ ಆಟಿಡೊಂಜಿ ದಿನ ಕೆಸರ್ದ ಗೊಬ್ಬುಲು ಸಂಭ್ರಮದ ಮನೆ ಮಾಡಿತು.
ಕಾರ್ಯಕ್ರಮದಲ್ಲಿ ಕಬಡ್ಡಿ, ವಾಲಿಬಾಲ್, ತ್ರೋಬಾಲ್, ಹಗ್ಗ ಜಗ್ಗಾಟ, ಗೂಟ ಓಟಗಳು, ಕಂಬಳದ ಓಟಗಳು ನೋಡುಗರಿಗಂತು ಬಹಳಷ್ಟು ಮುದ ನೀಡಿತ್ತು. ಗೂಟದ ಓಟ, ಕಂಬಳದ ಓಟದಲ್ಲಿ ಕೆಸರಿನಲ್ಲಿ ಬಿದ್ದು ಎದ್ದು ಓಡುವುದು, ಹಗ್ಗ ಜಗ್ಗಾಟದಲ್ಲಿ ಗುಂಪು ಜೋರಾಗಿ ಕೆಸರಿನಲ್ಲಿ ಬೀಳುತ್ತಿರುವ ದೃಶ್ಯಗಳು ನೋಡುಗರನ್ನು ಮನರಂಜಿಸಿತು. ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗಾಗಿ ಪ್ರತ್ಯೇಕ ಪ್ರತ್ಯೇಕವಾಗಿ ನಡೆದ ಸ್ಪರ್ಧೆಗಳು ಕಣ್ಮನ ಸೆಳೆದವು. ಒಂದೆಡೆ ಗೆಲ್ಲುವ ತವಕ, ಇನ್ನೊಂದೆಡೆ ಕೆಸರಿನ ಗದ್ದೆಯಲ್ಲಿ ಆಟದ ಸಂಭ್ರಮದಲ್ಲಿರುವ ಸ್ಪರ್ಧಾಳುಗಳು ಸಖತ್ ಎಂಜಾಯ್ ಮಾಡಿದರು. ಕೆಸರಿನ ಗದ್ದೆಯಲ್ಲಿ ಧುಮುಕಿ ಮೈ ಚಳಿ ಬಿಟ್ಟು ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡಿದ್ದರು. ಮಳೆ, ಮುಸುಕಿದ ವಾತಾವರಣದಲ್ಲಿಯೇ ಮೈನವಿರೇಳಿಸುವ ಕೆಸರು ಗದ್ದೆ ಆಟಗಳು ಜನರ ಮನಸ್ಸು ಗೆದ್ದವು, ಎದ್ನೋ, ಬಿದ್ನೋ ಎಂಬಂತೆ ಕೆಸರಿನಲ್ಲಿ ಆಡಿದ ಜನರು ಸ್ಪರ್ಧೆ ಜತೆಗೆ ಆಟದಲ್ಲಿ ಸಂಭ್ರಮಿಸಿ ಮಿಂದೆದ್ದರು.
ಕ್ರೀಡಾಕೂಟವನ್ನು ತೆಂಗಿನಕಾಯಿ ಒಡೆದು ಚಾಲನೆ ನೀಡಿದ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಆಧುನಿಕ ಮೊಬೈಲ್ ಯುಗದಲ್ಲಿಯೂ ಕ್ರೀಡಾಕೂಟಗಳ ಮೂಲಕ ಪುರಾತನ ಧರ್ಮ, ಸಂಸ್ಕೃತಿ, ಆಚರಣೆಗಳನ್ನು ನೆನಪಿಸುವ ಕಾರ್ಯ ಶ್ಲಾಘನೀಯ. ಹಿಂದಿನ ಕಾಲದ ಕಷ್ಟದ ದಿನಗಳನ್ನು ಇಂದು ಮನರಂಜನೆಯ ಮೂಲಕ ತಿಳಿಸಿ, ಸಂಭ್ರಮಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಯುವ ಸಮುದಾಯ ಭಾಗವಹಿಸಿ ಸಂಸ್ಕೃತಿಯ ಜೊತೆಗೆ ಹಿಂದು ಧರ್ಮವನ್ನು ಉಳಿಸಿ ಮುಂದಾಗಬೇಕು. ಧಾರ್ಮಿಕತೆಯನ್ನು ಉದ್ದೀಪನಗೊಳಿಸುವ ಕಾರ್ಯವಾಗಬೇಕು ಎಂದರು.
ದೀಪ ಬೆಳಗಿಸಿ ಉದ್ಘಾಟಿಸಿದ ಮದಗ ಶ್ರೀ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾರಕರೆ ವೆಂಕಟರಮಣ ಭಟ್ ಮಾತನಾಡಿ, ಕ್ರೀಡಾಕೂಟಗಳು ಯುವ ಸಮೂಹವನ್ನು ಒಗ್ಗೂಡಿಸಲು ಪೂರಕವಾಗಿದೆ ಎಂದರು. ದೇವಸ್ಥಾನದ ಪ್ರತಿಯೊಂದು ಕಾರ್ಯಕ್ರಮದಲ್ಲಿಯೂ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಹಕರಿಸುತ್ತಿರುವ ಯುವಕ, ಯುವತಿ ಮಂಡಲಗಳ ಮೂಲಕ ಇನ್ನಷ್ಟು ಸೇವೆಗಳು ದೊರೆತು ಗ್ರಾಮದ ಅಭಿವೃದ್ಧಿಗೆ ಪೂರಕವಾಗಿರಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಪೂವಪ್ಪ ದೇಂತಡ್ಕ ಮಾತನಾಡಿ, ಯುವಕ ಮಂಡಲಕ್ಕೆ 50 ವರ್ಷ ತುಂಬಿದ್ದು, ಸುವರ್ಣ ಮಹೋತ್ಸವವನ್ನು ನವಂಬರ್ನಲ್ಲಿ ಅದ್ದೂರಿಯಾಗಿ ಆಚರಿಸಲಾಗುವುದು. ಇದಕ್ಕೆ ಪೂರಕವಾಗಿ ಕೆಸರುಗದ್ದೆ ಕ್ರೀಡಾ ಕೂಟ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಗ್ರಾಮಸ್ಥರಿಗೆ ಇನ್ನಷ್ಟು ಕಾರ್ಯಕ್ರಮಗಳನ್ನು ನೀಡಲಾಗುವುದು ಎಂದರು.
ಬನ್ನೂರು ಗ್ರಾ.ಪಂ ಅಧ್ಯಕ್ಷ ಜಯ ಏಕ ಸಂದರ್ಭೋಚಿತವಾಗಿ ಮಾತನಾಡಿದರು. ಅಂಚೆ ಇಲಾಖೆ ಹಿರಿಯ ಸಹಾಯಕ ಅಂಚೆ ಅಧೀಕ್ಷಕ ಚಂದ್ರ ನಾಯ್ಕ ಮಾತನಾಡಿ, ಅಂಚೆ ಇಲಾಖೆಯ ಸೌಲಭ್ಯಗಳು, ಆಧಾರ್ ನೋಂದಣಿ, ತಿದ್ದುಪಡಿಗಳ ಮಾಹಿತಿ ನೀಡಿದರು.
ಸುವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ವಿಶ್ವನಾಥ ಗೌಡ ಪಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ವೇತಾ ಪ್ರಾರ್ಥಿಸಿದರು. ಸುವರ್ಣ ಮಹೋತ್ಸವ ಸಮಿತಿ ಕಾರ್ಯದರ್ಶಿ ಶ್ರೀಧರ ಕುಂಜಾರು ಸ್ವಾಗತಿಸಿದರು. ಶ್ರೀಧರ ಪಂಜಿಗುಡ್ಡೆ, ಲಕ್ಷ್ಮಣ ದೇಂತಡ್ಕ, ಸುಧಾಕರ ದೇಂತಡ್ಕ, ಗಿರೀಶ್ ಕಡ್ತಿಮಾರ್, ರಮಣಿ ಡಿ. ಅತಿಥಿಗಳನ್ನು ಶಾಲು ಹಾಕಿ ಸ್ವಾಗತಿಸಿದರು. ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಆಟಿಕ್ಕು ಕಾರ್ಯಕ್ರಮ ನಿರೂಪಿಸಿ, ಮಾಜಿ ಅಧ್ಯಕ್ಷ ರಾಜೇಶ್ ಬೇರಿಕೆ ವಂದಿಸಿದರು.
ಆಧಾರ್ ನೊಂದಣಿ, ತಿದ್ದುಪಡಿ:
ಮನರಂಜನೆಯ ಆಟದ ಜೊತೆಗೆ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಂಚೆ ಇಲಾಖೆಯ ಸಹ ಭಾಗಿತ್ವದಲ್ಲಿ ಆಧಾರ್ ನೋಂದಣಿ, ತಿದ್ದುಪಡಿ, ಅಂಚೆ ಉಳಿತಾಯ ಖಾತೆಗೆ ಆಧಾರ್ ಜೋಡಣೆ ಮತ್ತು ಅಂಚೆ ಇಲಾಖೆಯ ಇತರ ಸೌಲಭ್ಯಗಳ ಮಾಹಿತಿ ಹಾಗೂ ಹೊಸದಾಗಿ ಖಾತೆ ತೆರಯುವ ಸೌಲಭ್ಯಗಳು ಕಲ್ಪಿಸಲಾಗಿತ್ತು. ನೂರಾರು ಮಂದಿ ಭಾಗವಹಿಸಿ ಇದರ ಪ್ರಯೋಜನೆ ಪಡೆದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಆಟಿಕ್ಕು ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಮಾಜಿ ಸದಸ್ಯ ಬಾಲಕೃಷ್ಣ ಜೋಯಿಸ ಯರ್ಮುಂಜ, ಬನ್ನೂರು ಗ್ರಾ.ಪಂ ಸದಸ್ಯರಾದ ರಮಣಿ ಡಿ ಗಾಣಿಗ, ಶ್ರೀನಿವಾಸ ಪೆರ್ವೋಡಿ, ಗಣೇಶ ಯರ್ಮುಂಜಪಳ್ಳ, ವಿಮಲ ಹರೀಶ್, ಸರಸ್ವತಿ ಯುವತಿ ಮಂಡಲದ ಅಧ್ಯಕ್ಷೆ ರೇವತಿ ಪಂಜಿಗುಡ್ಡೆ ಹಾಗೂ ಗೌರವಾಧ್ಯಕ್ಷೆ ಸಾವಿತ್ರಿ ಕೊಡಂಗೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಗದೀಶ ಆಟಿಕ್ಕು ಸ್ವಾಗತಿಸಿದರು. ಪೂವಪ್ಪ ದೇಂತಡ್ಕ ಕಾರ್ಯಕ್ರಮ ನಿರೂಪಿಸಿ, ಶ್ರೀಧರ ಕುಂಜಾರು ವಂದಿಸಿದರು.