ಲಂಚ-ಭ್ರಷ್ಟಾಚಾರ ಹುಟ್ಟಿಗೆ ರಾಜಕೀಯ ಪಕ್ಷಗಳೇ ಕಾರಣ – ಆರ್ಯಾಪು ಗ್ರಾ.ಪಂ. ಸದಸ್ಯ ಸುಬ್ರಹ್ಮಣ್ಯ ಬಲ್ಯಾಯರ ಮನೆಯಲ್ಲಿ ಅಭಿನಂದನಾ ಸಭೆಯಲ್ಲಿ ರಾಮ ಭಟ್ ಚೆನ್ನಡ್ಕ

0

*ರಾಜಕೀಯದಲ್ಲಿ ಗೆಲ್ಲಲು ಹಣಬಲಕ್ಕಿಂತ ಜನ ಬಲ ಮುಖ್ಯ: ರಾಮಭಟ್ ಚೆನ್ನಡ್ಕ
*ನಮ್ಮ ಕಾರ್ಯಕರ್ತರ ನಿರೀಕ್ಷೆಯನ್ನು ಸಾಕಾರ ಮಾಡಿದ ವ್ಯಕ್ತಿ ಸುಬ್ರಹ್ಮಣ್ಯ ಬಲ್ಯಾಯರು: ಪ್ರಸನ್ನ ಕುಮಾರ್ ಮಾರ್ತ
*ಗ್ರಾ.ಪಂ. ಉಪಚುನಾವಣೆಯ ಮೂಲಕ ಪುತ್ತಿಲ ಪರಿವಾರ ಸ್ಪಷ್ಠ ಉತ್ತರ ನೀಡಿದೆ: ಗಣೇಶ್ ಪ್ರಸಾದ್ ಮುದ್ರಾಜೆ
*ಬಲ್ಯಾಯರ ಗೆಲುವು ನಮ್ಮೆಲ್ಲರ ಗೆಲುವಾಗಿದೆ: ಶ್ರೀಕೃಷ್ಣ ಉಪಾಧ್ಯಾಯ

ಪುತ್ತೂರು: ಜನ ನ್ಯಾಯದ ಪರ ನಿಂತ ಹಿನ್ನೆಲೆಯಲ್ಲಿ ನಮಗೆ ಗೆಲುವಾಗಿದೆ. ಬಲ್ಯಾಯರೊಬ್ಬರು ಯೋಗ್ಯ ಪುರುಷ. ಇದೊಂದು ನ್ಯಾಯ ಸಮ್ಮತ ಚುನಾವಣೆಯಾಗಿದೆ. ರಾಜಕೀಯದಲ್ಲಿ ಗೆಲ್ಲಲು ಹಣಬಲಕ್ಕಿಂತ ಜನ ಬಲ ಮುಖ್ಯ ಎಂದು ತೋರಿಸಿಕೊಟ್ಟವರು ಪುತ್ತಿಲ ಎಂದು ಕೃಷಿಕ ರಾಮಭಟ್ ಚೆನ್ನಡ್ಕರವರು ಹೇಳಿದರು.
ಆರ್ಯಾಪು ಗ್ರಾ.ಪಂ. ಉಪಚುನಾವಣೆಯಲ್ಲಿ ಚುನಾಯಿತರಾದ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿ ಸುಬ್ರಹ್ಮಣ್ಯ ಬಲ್ಯಾಯರ ಮನೆ ದೊಡ್ಡಡ್ಕದಲ್ಲಿ ನಡೆದ ಕಾರ್ಯಕರ್ತರ ಹಾಗೂ ಮತದಾರ ಬಂಧುಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಲಂಚ ಭ್ರಷ್ಟಾಚಾರದ ಹುಟ್ಟಿಗೆ ರಾಜಕೀಯ ಪಕ್ಷಗಳೇ ಕಾರಣ. ನಮ್ಮ ದೇಶದ ಈ ದುಸ್ಥಿತಿಗೆ ಲಂಚಾವತಾರ ಕಾರಣ. ಜನರ ಜೊತೆಗೆ ಸ್ಪಂದನೆ ಮಾಡುವ ಮನಸ್ಸು ನಮ್ಮದಾಗಬೇಕು. ಆಗ ಮಾತ್ರ ನಾವು ಯಶಸ್ಸಾಗಲು ಸಾಧ್ಯ ಎಂದವರು ಹೇಳಿದರು.
ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತರವರು ಮಾತನಾಡಿ ನಮ್ಮ ಕಾರ್ಯಕರ್ತರ ನಿರೀಕ್ಷೆಯನ್ನು ಸಾಕಾರ ಮಾಡಿದ ವ್ಯಕ್ತಿ ಸುಬ್ರಹ್ಮಣ್ಯ ಬಲ್ಯಾಯರು. ಗ್ರಾಮದ ಅಭಿವೃದ್ಧಿಯ ಬಗ್ಗೆ ಚಿಂತನೆ ಹೊಂದಿರುವ ವ್ಯಕ್ತಿ ಅವರು. ಪುತ್ತಿಲ ಪರಿವಾರಕ್ಕೆ ಇದು ಪ್ರಥಮ ವಿಜಯ. ಸ್ವಾರ್ಥ ರಾಜಕೀಯವನ್ನು ಮೆಟ್ಟಿ ನಿಲ್ಲುವ ನಿಟ್ಟಿನಲ್ಲಿ ಅರುಣ್ ಕುಮಾರ್ ಪುತ್ತಿಲ ಚುನಾವಣೆಗೆ ನಿಲ್ಲಬೇಕಾಯಿತು. ಸೇವೆಯ ಉzಶದಿಂದ ಪುತ್ತಿಲ ಪರಿವಾರದ ಹುಟ್ಟಾಯಿತು. ಮಾತೃಪಕ್ಷದ ಹಿರಿಯರು ಸಮಸ್ಯೆ ಬಗೆಹರಿಸುವ ಗೋಜಿಗೆ ಹೋಗದೆ ಅದನ್ನು ಇನ್ನಷ್ಟು ಜಟಿಲ ಮಾಡಿಕೊಂಡು ಹೋಗುತ್ತಿದ್ದಾರೆ. ಪುತ್ತಿಲ ಪರಿವಾರಕ್ಕೆ ಕಾರ್ಯಕರ್ತರೇ ಹೈಕಮಾಂಡ್. ಪಂಚ ಸೂತ್ರದಲ್ಲಿ ಈ ಪುತ್ತಿಲ ಪರಿವಾರ ಮುಂದುವರೆಯಲಿದೆ ಎಂದರು.
ಪುತ್ತಿಲ ಪರಿವಾರದ ಗೌರವ ಸಲಹೆಗಾರರಾಗಿರುವ ಡಾ. ಗಣೇಶ್ ಪ್ರಸಾದ್ ಮುದ್ರಾಜೆರವರು ಮಾತನಾಡಿ ಹಿಂದೂ ಸಮಾಜ ಆತಂಕದಲ್ಲಿದೆ ಎನ್ನುವ ಭಾವದಲ್ಲಿ ನಾವಿದ್ದೇವೆ. ಹಿಂದೂ ಸಮಾಜ ಒಗ್ಗಟ್ಟಾಗಬೇಕು. ಹೊಂದಾಣಿಕೆಯಲ್ಲಿ ನಡೆಯುವುದರ ಮೂಲಕ ನಮ್ಮ ಹಿಂದೂ ಸಮಾಜವನ್ನು ಮತ್ತಷ್ಟು ಗಟ್ಟಿಗೊಳಿಸುವ ಕೆಲಸವಾಗಬೇಕು. ರಾಜ್ಯವೇ ಪುತ್ತೂರನ್ನು ನೋಡುವ ಹಾಗೆ ಮಾಡಿದ ಸಾಧನೆ ನಮ್ಮ ಪುತ್ತಿಲ ಪರಿವಾರದ ಕಾರ್ಯಕರ್ತರಿಂದ ಆಗಿದೆ ಎನ್ನುವ ಕುಶಿ ನನಗಿದೆ. ನಮ್ಮ ಆಶಯ ಹಾಗೂ ಹಿಂದುತ್ವಕ್ಕೆ ಬೆಲೆ ಸಿಗದಿದ್ದ ಹಿನ್ನೆಲೆಯಲ್ಲಿ ಪುತ್ತಿಲ ಪರಿವಾರದ ಹುಟ್ಟಾಯಿತು. ನೈಜ ಹಿಂದೂ ನಾಯಕನ ಕಳೆ ಬಲ್ಯಾಯರ ಮುಖದಲ್ಲಿದೆ. ನಮ್ಮನ್ನು ಲೇವಡಿ ಮಾಡಿದರೆ, ನಮ್ಮನ್ನು ಉಪೇಕ್ಷಿಸಿದರೆ, ಕಡೆಗಣನೆ ಮಾಡಿದೇ ಮುಂದಿನ ಚುನಾವಣೆಯಲ್ಲಿ ಮತದಾರ ಬಾಂಧವರು ತಕ್ಕ ಉತ್ತರ ನೀಡಲಿದ್ದಾರೆ. ಆರ್ಯಾಪು ಗ್ರಾ.ಪಂ. ಉಪಚುಮಾವಣೆಯಲ್ಲಿ ಪುತ್ತಿಲ ಪರಿವಾರ ಸ್ಪಷ್ಠ ಉತ್ತರ ನೀಡಿದೆ. ಹಿಂದೂ ಸಮಾಜದ ಮನಸ್ಥಿತಿ ಪುತ್ತಿಲ ಪರಿವಾರದ ಪರವಾಗಿದೆ. ಹಿಂದೂ ಸಮಾಜ ಜಾಗೃತವಾಗಿದೆ ಎಂದರು.
ಪ್ರಮುಖ ಶ್ರೀಕೃಷ್ಣ ಉಪಾಧ್ಯಾಯರವರು ಮಾತನಾಡಿ ಸುಬ್ರಹ್ಮಣ್ಯ ಬಲ್ಯಾಯರ ಗೆಲುವು ನಮ್ಮೆಲ್ಲರ ಗೆಲುವಾಗಿದೆ. ನಾವಿಂದು ಗೆಲುವಿನ ಸಂಭ್ರಮದಲ್ಲಿದ್ದೇವೆ. ಹಿಂದುಗಳಿಗೆ ನ್ಯಾಯ ಸಿಗಬೇಕು ಎನ್ನುವುದು ನಮ್ಮೆಲ್ಲರ ಆಶಯವಾಗಿದೆ.
ಹಿಂದುತ್ವದ ಉಳಿವಿಗೆ ರಾಜಕೀಯದ ಅಗತ್ಯವಿಲ್ಲ. ಪರಿಶುದ್ಧ ಮನಸ್ಸಿನ ಕಾರ್ಯಕರ್ತರಿಂದ ಹಿಂದುತ್ವ ಉಳಿಯಲು ಸಾಧ್ಯ. ಕಾರ್ಯಕರ್ತರ ರಕ್ಷಣೆಗಾಗಿ ರಾಜಕೀಯ ಅಸ್ತಿತ್ವ ಅಗತ್ಯ. ಒಡೆಯುವುದು ಸುಲಭ, ಕಟ್ಟುವುದು ಕಷ್ಟ. ನಾವು ಯಾರನ್ನೂ ಒಡೆಯಲಿಲ್ಲ. ಒಡೆಯುವುದೂ ಇಲ್ಲ. ಬಲ್ಯಾಯರು ಚುನಾವಣೆಗೆ ನಿಲ್ಲದಿದ್ದ ಪಕ್ಷದಲ್ಲಿ ಕಾಂಗ್ರೆಸ್ ಗೆ ಗೆಲುವಾಗ್ತಿತ್ತು. ನಮ್ಮ ಮರ್ಯಾದೆಯನ್ನು ಉಳಿಸುವ ನಿಟ್ಟಿನಲ್ಲಿ ಈ ಹೋರಾಟ. ಬಲ್ಯಾಯರು ನಮಗೆ ಸಿಕ್ಕಿದ ಬಂಗಾರ. ನಮ್ಮೊಳಗೆ ಸ್ವಂತಿಕೆ ಅಗತ್ಯ. ವೈಯ್ಯಕ್ತಿಕ ಪ್ರತಿಷ್ಠೆಗೆ ಪುತ್ತೂರಿನಲ್ಲಿ ಬಿಜೆಪಿ ಅವನತಿಯತ್ತ ಸಾಗ್ತಿದೆ.
ಈಗೋ ಪ್ರಾಬ್ಲೆಮ್ಸ್ ಬಿಟ್ಟು ಕೆಲಸ ಮಾಡೋಣ ಮತ್ತೆ ಒಂದಾಗೋಣ. ನಮ್ಮನ್ನು ಡಿವೈಡ್ ಮಾಡುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಪುತ್ತಿಲ ಪರಿವಾರವನ್ನು ವಿಭಜನೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ನಾವೆಲ್ಲ ಕೂಡುಕುಟುಂಬದಂತೆ ಇರಬೇಕು. ನಮ್ಮ ಒಗ್ಗಟ್ಟು ತೋರಿಸಲು ಗ್ರಾ.ಪಂ. ಚುನಾವಣೆ ಬೇಕಾಯಿತು. ಉತ್ತಮ ಸಂದೇಶ ಈ ಚುನಾವಣೆಯಿಂದ ತಲುಪಿದೆ.
ಬಲ್ಯಾಯರ ಅವಧಿ ಆರಂಭವಾಗಿರುವುದು ಪುತ್ತಿಲಪರಿವಾರದಲ್ಲಿ ಆದರೂ ಮುಗಿಯುವುದು ಬಿಜೆಪಿಯಲ್ಲಿ ಆಗಲಿ ಎಂದರು.
ಪುತ್ತಿಲ ಪರಿವಾರದ ಉಪಾಧ್ಯಕ್ಷರಾದ ಪ್ರವೀಣ್ ಭಂಡಾರಿ, ಪ್ರಗತಿಪರ ಕೃಷಿಕರಾದ ಗೋಪಾಲ ಭಟ್ ಕುಂಜೂರು ಪಂಜ, ರಾಮಚಂದ್ರ ಪ್ರಭು ದೇವಸ್ಯ, ಪುತ್ತಿಲ ಪರಿವಾರದ ನಗರಾಧ್ಯಕ್ಷ ಅನಿಲ್ ಗೌಡ ತೆಂಕಿಲ, ಆರ್ಯಾಪು ವಾರ್ಡಿನ ಅಧ್ಯಕ್ಷ ನವೀನ್ ರೈ, ಪ್ರಮುಖರಾದ ತಿಮ್ಮಪ್ಪ ನಾಯ್ಕ್ ಜಂಗಮುಗೇರು, ಚಂದ್ರಿಕಾ ಸೇಸಪ್ಪ ಕುಲಾಲ್, ಉಮಾವತಿ, ನಿಡ್ಪಳ್ಳಿ ಪುತ್ತಿಲ ಪರಿವಾರದ ಕಾರ್ಯಕರ್ತರಾದ ಜಗನ್ನಾಥ್ ರೈ ಕೊಳಂಬೆತ್ತಿಮಾರ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗೆಳೆಯರ ಬಳಗ ದೊಡ್ಡಡ್ಕ ಹಾಗೂ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ ದೊಡ್ಡಡ್ಕದ ಪದಾಧಿಕಾರಿಗಳು ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯ ಸುಬ್ರಹ್ಮಣ್ಯ ಬಲ್ಯಾಯರವರನ್ನು ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯರಾದ ಸುಬ್ರಹ್ಮಣ್ಯ ಬಲ್ಯಾಯರವರ ಹುಟ್ಟುಹಬ್ಬದ ಆಚರಣೆಯೂ ನಡೆಯಿತು. ರಶ್ಮಿರಾಧಾಕೃಷ್ಣ ಸ್ವಾಗತಿಸಿದರು.
ಸಮೀಕ್ಷ ಒಳತ್ತಡ್ಕ ಪ್ರಾರ್ಥಿಸಿದರು. ರಮೇಶ್ ಚನಿಲ ವಂದಿಸಿದರು. ಸೈಲೇಶ್ ರೈ ಕಾರ್ಯಕ್ರಮ ನಿರೂಪಿಸಿದರು.
ಲೋಕೇಶ್ ಬಲ್ಯಾಯ ದೊಡ್ಡಡ್ಕ, ಜಗದೀಶ್ ಪೂಜಾರಿ ಒಳತ್ತಡ್ಕ, ನವೀನ್ ಕುಲಾಲ್, ಶೈಲೇಶ್ ರೈ, ವೇದೇಶ್ ಪೂಜಾರಿ, ಮಿಥುನ್ ಒಳತ್ತಡ್ಕ, ಸಂಜೀವ ಪೂಜಾರಿ ದೊಡ್ಡಡ್ಕ, ಕುಶಾಲಪ್ಪ ಕಂಪ, ತಾರನಾಥ ನಾಯ್ಕ್, ವಿನ್ಯಾಸ್ ಬಲ್ಯಾಯ ದೊಡ್ಡಡ್ಕ, ವಾಣಿಶ್ರೀ ಬಲ್ಯಾಯ ದೊಡ್ಡಡ್ಕ, ಕವಿತಾ ಬಲ್ಯಾಯ, ಪ್ರಶಾಂತ್, ನವೀನ್ ಪಂಜರವರು ಅತಿಥಿಗಳನ್ನು ಹೂ ನೀಡಿ ಸ್ವಾಗತಿಸಿದರು.

ಸರಕಾರದ ಸವಲತ್ತನ್ನು ಜನರಿಗೆ ತಲುಪಿಸುವ ಪ್ರಯತ್ನ-ಸ್ವಚ್ಛತೆಗೆ ಆದ್ಯತೆ

ಮತನೀಡಿ ನನ್ನನ್ನು ಗೆಲ್ಲಿಸಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ಜಾತಿ, ಮತ, ಭೇದ ಮರೆತು ಸರಕಾರದಿಂದ ಸಿಗುವ ಸವಲತ್ತುಗಳನ್ನು ಜನರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅದೇ ರೀತಿ ಹಿಂದಿನಂತೆಯೇ ಬಡವರಿಗೆ ನನ್ನಿಂದಾದ ಸಹಕಾರವನ್ನು ನೀಡುತ್ತಾ ಬರುತ್ತೇನೆ. ಬಡತನ ಬರುವುದು ಸ್ವಾಭಾವಿಕ ಆದರೆ ಸ್ವಚ್ಛತೆಗೆ ಬಡತನವಿಲ್ಲ. ಮೋದೀಜಿಯವರ ಸ್ವಚ್ಛಭಾರತದ ಕನಸನ್ನು ಸಾಕಾರ ಮಾಡುವಲ್ಲಿ ನಾವೆಲ್ಲರೂ ಪಣತೊಡೋಣ. ನಮ್ಮೆಲ್ಲರ ಮನೆಗಳಲ್ಲಿ, ಮನೆ ಪರಿಸರದಲ್ಲಿ ಸ್ವಚ್ಛತೆಗೆ ಪ್ರಥಮ ಆದತೆ ನೀಡೋಣ.
ಸುಬ್ರಹ್ಮಣ್ಯ ಬಲ್ಯಾಯ,
ಸದಸ್ಯರು ಆರ್ಯಾಪು ಗ್ರಾಮ ಪಂಚಾಯತ್

LEAVE A REPLY

Please enter your comment!
Please enter your name here