





ವಿದ್ಯಾರ್ಥಿಗಳು ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು: ಗುಡ್ಡಪ್ಪ ಬಲ್ಯ


ವಿಟ್ಲ: ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದ ಮಾಣಿ ವಿದ್ಯಾನಗರ ಪಾಳ್ಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ತಿನ ಸದಸ್ಯರಿಗೆ ತರಬೇತಿ ಕಾರ್ಯಾಗಾರ ನಡೆಯಿತು.
ನಿವೃತ್ತ ಪ್ರೌಢ ಶಾಲಾ ಶಿಕ್ಷಕ ಗುಡ್ಡಪ್ಪ ಬಲ್ಯರವರು ತರಬೇತಿ ನೀಡಿ ಮಾತನಾಡಿ ವಿದ್ಯಾರ್ಥಿಗಳು ದಿನನಿತ್ಯ ವಾರ್ತಾ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಆ ಮೂಲಕ ನಮ್ಮ ರಾಜ್ಯ ಹಾಗೂ ದೇಶದ ಆಗು ಹೋಗುಗಳ ಬಗ್ಗೆ ಮಾಹಿತಿಗಳನ್ನು ದಿನನಿತ್ಯ ಕೆಲಹಾಕಿಕೊಳ್ಳಲು ಸಹಕಾರಿಯಾಗುವುದು ಎಂದರು.






ಬಳಿಕ ಸಂಸತ್ತಿನಲ್ಲಿ ನಡೆಯುವ ಅಧಿವೇಶನದ ಕಾರ್ಯಕಲಾಪಗಳು, ಸಭಾಧ್ಯಕ್ಷರ ಭಾಷಣ ಸಹಿತ ಅಲ್ಲಿ ನಡೆಯುವ ಎಲ್ಲಾ ವಿಚಾರಗಳ ಬಗ್ಗೆ ಮಾಹಿತ ನೀಡಿದರು. ತರಬೇತಿ ಕಾರ್ಯಾಗಾರದ ಬಳಿಕ ಶಾಲಾ ಅಣಕು ಸಂಸತ್ತಿನ ಅಧಿವೇಶನ ನಡೆಯಿತು.
ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಶಾಲಾ ಆಡಳಿತಾಧಿಕಾರಿಗಳಾದ ರವೀಂದ್ರ ದರ್ಬೆರವರು ಮಾತನಾಡಿ ತರಬೇತಿ ಕಾರ್ಯಾಗಾರದ ಸಂಪೂರ್ಣ ಪ್ರಯೋಜನವನ್ನು ನಮ್ಮ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಶಾಲೆಯಲ್ಲಿ ಮುಂದೆ ನಡೆಯವ ಶಾಲಾ ಸಂಸತ್ತಿನ ಅಧಿವೇಶನಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಒಳ್ಳೆಯ ನಾಯಕರಾಗುವ ಮನೋಭಾವವನ್ನು ಬೆಳಸಿಕೊಳ್ಳಬೇಕು, ನಮ್ಮ ಈ ಪ್ರಜಾಪ್ರಭುತ್ವ ದೇಶದಲ್ಲಿ ಜವಾಬ್ದಾರಿಯುತ ಪ್ರಜೆಗಳಾಗಿ ಬಾಳಿ ಮುಂದೆ ದೇಶದ ಒಳ್ಳೆಯ ನಾಯಕರಾಗಿ ಎಂದು ಶುಭ ಹಾರೈಸಿದರು.
ವಿದ್ಯಾರ್ಥಿಗಳಾದ ವೃದ್ಧಿ ಕೊಂಡೆ ಮತ್ತು ಪ್ರಕೃತಿ ಶೆಟ್ಟಿ ತರಬೇತಿ ಕಾರ್ಯಾಗಾರದ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ ವಿ.ಶೆಟ್ಟಿ ಸ್ವಾಗತಿಸಿ, ಸಹಶಿಕ್ಷಕಿ ಸೌಮ್ಯ ವಂದಿಸಿ, ಸಹಶಿಕ್ಷಕಿ ಸಪ್ನಾ ಕಾರ್ಯಕ್ರಮ ನಿರೂಪಿಸಿದರು.





