ಪಠ್ಯಪುಸ್ತಕ ಆಧಾರಿತ ಸಂಗತಿಗಳಷ್ಟೇ ಶಿಕ್ಷಣವಲ್ಲ : ಸುಬ್ರಹ್ಮಣ್ಯ ನಟ್ಟೋಜ
ಪುತ್ತೂರು: ಶಿಕ್ಷಣ ಎಂದರೆ ಕೇವಲ ಪಠ್ಯಪುಸ್ತಕಗಳ ಓದುವಿಕೆಯಿಂದ ಪಡೆಯುವ ಅಂಕಗಳಷ್ಟೇ ಅಲ್ಲ. ಎಲ್ಲಾ ತರಹದ ಲಲಿತ ಕಲೆಗಳ ಸಮ್ಮಿಲನವೇ ಶಿಕ್ಷಣ. ವ್ಯಕ್ತಿಯಲ್ಲಿರುವ ಯಾವುದೇ ಒಂದು ಪ್ರತಿಭೆ ಇದ್ದರೂ ಅದು ಆತನ ಒತ್ತಡ ಎದುರಿಸುವಲ್ಲಿ ಸಹಕಾರಿಯಾಗುತ್ತದೆ ಮತ್ತು ಎಂತಹ ಕಷ್ಟಕರ ಪರಿಸ್ಥಿತಿಯನ್ನೂ ಎದುರಿಸುವ ಶಕ್ತಿಯನ್ನು ಒದಗಿಸಿಕೊಡುತ್ತದೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ನಡೆದ 2023- 24ನೇ ಸಾಲಿನ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಮಂಗಳವಾರ ಮಾತನಾಡಿದರು.
ಪ್ರಾಂಶುಪಾಲೆ ಸುಚಿತ್ರ ಪ್ರಭು ಉಪ ಪ್ರಾಂಶುಪಾಲ ಗಣೇಶ ಪ್ರಸಾದ ಡಿ ಎಸ್ ಹಾಗೂ ಕಾರ್ಯಕ್ರಮ ಸಂಯೋಜಕ ನಮೃತ್ ಜಿ ಉಚ್ಚಿಲ್, ಉಪನ್ಯಾಸಕಿ ಕಾವ್ಯ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ವೈನವಿ ಸ್ವಾಗತಿಸಿ ವಿದ್ಯಾರ್ಥಿನಿ ಕೇಶ್ನಿ ಆರ್ ಸಾಲಿಯಾನ್ ವಂದಿಸಿದರು. ವಿದ್ಯಾರ್ಥಿನಿ ಹಿಮನಾಗ್ವಿ ಕಾರ್ಯಕ್ರಮ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಸ್ವಾತಂತ್ರ್ಯೋತ್ಸವ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ದೇಶಭಕ್ತಿ ಗೀತೆ ಮತ್ತು ಭಜನಾ ಸ್ಪರ್ಧೆ ನಡೆಯಿತು. ರಸಾಯನ ಶಾಸ್ತ್ರ ಉಪನ್ಯಾಸಕಿ ಅಪರ್ಣ ಉಪಾಧ್ಯಾಯ ಸ್ಪರ್ಧೆಗಳ ಮೇಲ್ವಿಚಾರಣೆಯನ್ನು ನಿರ್ವಹಿಸಿದರು. ಪ್ರಯೋಗಾಲಯ ಸಹಾಯಕ ಕೌಶಿಕ್ ಸಹಕರಿಸಿದರು.