ಪುಣಚ ಗ್ರಾಮ ಸಭೆ

0

ಕುಮ್ಕಿ ಜಾಗದಲ್ಲಿ ಮನೆ ನಿರ್ಮಿಸಿದವರ ಅಡಿಸ್ಥಳ ಮಂಜೂರು ಮಾಡುವಂತೆ ಸರಕಾರಕ್ಕೆ ಮನವಿ

ಪುತ್ತೂರು: ಕುಮ್ಕಿ ಜಾಗದಲ್ಲಿ ಮನೆ ನಿರ್ಮಿಸಿದವರಿಗೆ ಬಹಳಷ್ಟು ತೊಂದರೆಯಾಗಿದ್ದು ಅವರು ಮನೆ ನಿರ್ಮಿಸಿದ ಅಡಿಸ್ಥಳ ಮಂಜೂರು ಆಗುತ್ತಿಲ್ಲ, ಇದರಿಂದ ಗ್ರಾಮದಲ್ಲಿ ಹಲವು ಮಂದಿಗೆ ತೊಂದರೆಯಾಗಿದೆ. ಆದ್ದರಿಂದ ಕುಮ್ಕಿ ಜಾಗದಲ್ಲಿ ಮನೆ ನಿರ್ಮಿಸಿದವರಿಗೆ ಅವರ ಅಡಿ ಸ್ಥಳವನ್ನು ಮಂಜೂರು ಮಾಡಿಕೊಡುವಂತೆ ಸರಕಾರಕ್ಕೆ ಮನವಿ ಸಲ್ಲಿಸುವುದು ಎಂದು ಪುಣಚ ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.


ಸಭೆಯು ಗ್ರಾಪಂ ಅಧ್ಯಕ್ಷ ರಾಮಕೃಷ್ಣ ಮೂಡಂಬೈಲುರವರ ಅಧ್ಯಕ್ಷತೆಯಲ್ಲಿ ಆ.8 ರಂದು ಪುಣಚ ಗ್ರಾಪಂ ಸುವರ್ಣ ಸೌಧ ಸಭಾಂಗಣದಲ್ಲಿ ನಡೆಯಿತು. ವಿಷಯ ಪ್ರಸ್ತಾಪಿಸಿದ ಶ್ರೀಕೃಷ್ಣ ಭಟ್‌ರವರು, ಗ್ರಾಮದಲ್ಲಿ ಬಹಳಷ್ಟು ಮಂದಿ ಕುಮ್ಕಿ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಆದರೆ ಇವರಿಗೆ ತಮ್ಮ ಅಡಿ ಸ್ಥಳ ಮಂಜೂರು ಆಗುತ್ತಿಲ್ಲ ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳಬೇಕು ಎಂದರು. ಇದಕ್ಕೆ ಧ್ವನಿಗೂಡಿಸಿದ ಅಧ್ಯಕ್ಷರು, ಇದೊಂದು ಜಟಿಲ ಸಮಸ್ಯೆಯಾಗಿದ್ದು ಪುಣಚ ಗ್ರಾಮದಲ್ಲಿ ಹಲವು ಮಂದಿ ಈ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಈ ಬಗ್ಗೆ ಗ್ರಾಪಂನಿಂದ ಸರಕಾರಕ್ಕೆ ಬರೆದುಕೊಳ್ಳಲಾಗುವುದು ಎಂದು ತಿಳಿಸಿದರು. ಇದಕ್ಕೆ ಉತ್ತರಿಸಿದ ಅಭಿವೃದ್ಧಿ ಅಧಿಕಾರಿ ರವಿಯವರು, ಯಾರು 2015 ರ ಮೊದಲು ಮನೆ ನಿರ್ಮಿಸಿಕೊಂಡಿದ್ದಾರೋ ಅವರು 94ಸಿಯಲ್ಲಿ ಅರ್ಜಿ ಸಲ್ಲಿಸಿ ಅಡಿ ಸ್ಥಳ ಮಂಜೂರು ಮಾಡಿಸಿಕೊಳ್ಳಬಹುದಾಗಿದೆ ಎಂದರು.


ಪುಣಚ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಬೇಕು
ಪುಣಚ ಅತೀ ದೊಡ್ಡ ಗ್ರಾಮವಾಗಿದ್ದು ಜನಸಂಖ್ಯೆಯೂ ಹೆಚ್ಚಿದೆ ಆದ್ದರಿಂದ ಪುಣಚ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಶ್ರೀಕೃಷ್ಣ ಭಟ್ ತಿಳಿಸಿದರು. ಕನಿಷ್ಠ 10 ಬೆಡ್‌ನ ಆಸ್ಪತ್ರೆಯಾದರೂ ಆಗಬೇಕು ಇದಕ್ಕೆ ಬೇಕಾದ ಜಾಗದಿಂದ ಹಿಡಿದು ಎಲ್ಲಾ ವ್ಯವಸ್ಥೆ ಇಲ್ಲಿದೆ.ಈ ಬಗ್ಗೆ ಆರೋಗ್ಯ ಇಲಾಖಾ ಸಚಿವರಿಗೆ ಬರೆದುಕೊಳ್ಳಬೇಕು ಎಂದು ತಿಳಿಸಿದರು. ಅದರಂತೆ ನಿರ್ಣಯಿಸಲಾಯಿತು.


ಕೆಂಪು ಕಲ್ಲು ಸಾಗಾಟದ ಲಾರಿಯವರು ಟಾರ್ಪಲ್ ಹಾಕೋದಿಲ್ಲ!
ಕೆಂಪು ಕಲ್ಲು, ಮರಳು ಇತ್ಯಾದಿ ಸಾಗಿಸುವ ಟಿಪ್ಪರ್, ಲಾರಿಯವರು ಕಲ್ಲು, ಮರಳಿನ ಮೇಲೆ ಟರ್ಪಲ್ ಹಾಕುವುದಿಲ್ಲ ಇದರಿಂದ ಹಿಂದಿನಿಂದ ಬರುವ ದ್ವಿಚಕ್ರ ವಾಹನ ಸವಾರರಿಗೆ, ಪಾದಚಾರಿಗಳಿಗೆ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಟಿಪ್ಪರ್,ಲಾರಿಯವರಲ್ಲಿ ಕೇಳಿದರೆ ನೀವ್ಯಾರು ಕೇಳೋಕೆ ಎಂದು ಗದರಿಸುತ್ತಾರೆ. ಆರ್‌ಟಿಒ ಕಾನೂನು ಪ್ರಕಾರ ಕೆಂಪು ಕಲ್ಲು, ಮರಳು ಸಾಗಾಟದ ಲಾರಿಗಳು ಟಾರ್ಪಲ್ ಹಾಕಬೇಕು ಎಂಬ ನಿಯಮವಿದ್ದರೂ ಅದನ್ನು ಪಾಲಿಸುತ್ತಿಲ್ಲ ಎಂದು ಕಿಶೋರ್ ಸಂಕೇಶ ಹೇಳಿದರು. ಇದಕ್ಕೆ ಉತ್ತರಿಸಿದ ಪಿಡಿಒರವರು ಈ ಬಗ್ಗೆ ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆಗೆ ಬರೆದುಕೊಳ್ಳುವ ಎಂದು ತಿಳಿಸಿದರು.


ಜನನ ಪ್ರಮಾಣಪತ್ರ ಗ್ರಾಮದಲ್ಲೇ ಸಿಗಲಿ
ಪುಣಚದ ಒಬ್ಬರು ಮಹಿಳೆ ಮಂಗಳೂರು ಆಸ್ಪತ್ರೆಯಲ್ಲಿ ಹೆರಿಗೆಯಾದರೆ ಅಲ್ಲಿನ ಆಸ್ಪತ್ರೆಯವರು ಮಗುವಿನ ಜನನದ ಬಗ್ಗೆ ದಾಖಲೆಗಳನ್ನು ಅಲ್ಲಿನ ಸ್ಥಳೀಯ ಆಡಳಿತಕ್ಕೆ ಕಳುಹಿಸಿಕೊಡುತ್ತಾರೆ. ಇದರಿಂದ ಮಹಿಳೆಗೆ ಮುಂದೆ ಮಗುವಿನ ಜನನ ಪ್ರಮಾಣಪತ್ರ ಪಡೆದುಕೊಳ್ಳಲು ಮಂಗಳೂರಿಗೆ ಅಲೆಯಬೇಕಾಗುತ್ತದೆ. ಇದರಿಂದ ಬಹಳಷ್ಟು ತೊಂದರೆಯಾಗುತ್ತದೆ. ಇದರ ಬದಲು ಆಸ್ಪತ್ರೆಯವರು ಮಹಿಳೆಯ ಗ್ರಾಮದ ಸ್ಥಳೀಯಾಡಳಿತಕ್ಕೆ ದಾಖಲೆಗಳನ್ನು ಕಳಿಸಿಕೊಟ್ಟರೆ ಬಹಳಷ್ಟು ಉತ್ತಮ ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳಬೇಕು ಎಂದು ಶ್ರೀಕೃಷ್ಣ ಭಟ್ ಕೊಪ್ಪರತೊಟ್ಟು ಹೇಳಿದರು. ಈ ಬಗ್ಗೆ ಚರ್ಚೆ ನಡೆಯಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷರು, ಆಸ್ಪತ್ರೆಯವರೇ ವ್ಯಕ್ತಿಯ ಗ್ರಾಮವನ್ನು ತಿಳಿದುಕೊಂಡು ಅಲ್ಲಿನ ಸ್ಥಳೀಯಾಡಳಿತಕ್ಕೆ ಕಳುಹಿಸಿಕೊಟ್ಟರೆ ಒಳ್ಳೆಯದು ಎಂದು ತಿಳಿಸಿದರು.


ಮಂಗಗಳನ್ನು ಬೇರೆ ದೇಶಕ್ಕೆ ಪಾರ್ಸೆಲ್ ಮಾಡಿ…!
ಮಂಗಗಳ ಉಪಟಳ ಜಾಸ್ತಿಯಾಗುತ್ತಿದೆ. ತೆಂಗಿನ ತೋಟದಲ್ಲಿ ಸೀಯಾಳಗಳನ್ನು ಹಾಳು ಮಾಡುತ್ತಿವೆ. ಇದಲ್ಲದೆ ತರಕಾರಿ ಕೃಷಿ ಸಹಿತ ಕೃಷಿಹಾನಿಯುಂಟು ಮಾಡುತ್ತಿವೆ. ಆದ್ದರಿಂದ ಮಂಗಗಳನ್ನು ಹಿಡಿದು ಬೇರೆ ದೇಶಕ್ಕೆ ಕೊಂಡೋಗಬೇಕಾದ ಅನಿವಾರ್ಯತೆ ಇದೆ ಈ ಬಗ್ಗೆ ಅರಣ್ಯ ಇಲಾಖೆಗೆ ಬರೆದುಕೊಳ್ಳಬೇಕು ಎಂದು ಪುರಂದರ ಶೆಟ್ಟಿ ಕೋಡಂದೂರು ಹೇಳಿದರು. ಈ ಬಗ್ಗೆ ಕಳೆದ ಗ್ರಾಮಸಭೆಯಲ್ಲಿ ಬಂದ ಬೇಡಿಕೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದ್ದು ಮಂಗಗಳ ಉಪಟಳದಿಂದ ಕೃಷಿ ಹಾನಿಯುಂಟಾದರೆ ಸರಕಾರದಿಂದ ಯಾವುದೇ ಪರಿಹಾರ ಇಲ್ಲ ಎಂಬ ಉತ್ತರ ಬಂದಿದೆ ಎಂದು ಅಭಿವೃದ್ಧಿ ಅಧಿಕಾರಿ ರವಿ ತಿಳಿಸಿದರು.


ಪುಣಚಕ್ಕೆ ಸರಕಾರಿ ಬಸ್ಸು ಬರಲಿ
ಪುಣಚಕ್ಕೆ ಬೆಳಿಗ್ಗೆ ಮತ್ತು ಸಂಜೆ ಮಾತ್ರ ಕೆಎಸ್‌ಆರ್‌ಟಿಸಿ ಬಸ್ಸು ಬರುತ್ತಿದೆ. ಉಳಿದ ಸಮಯಗಳಲ್ಲಿ ಜನರು ಖಾಸಗಿ ಬಸ್ಸುಗಳನ್ನೇ ಅವಲಂಭಿಸಬೇಕಾಗುತ್ತದೆ ಆದ್ದರಿಂದ ಸಾರ್ವಜನಿಕರಿಗೆ ಪ್ರಯೋಜವಾಗುವ ನಿಟ್ಟಿನಲ್ಲಿ ಸರಕಾರಿ ಬಸ್ಸು ಬರುವಂತಾಗಬೇಕು ಎಂದು ವಿಶ್ವನಾಥ ರೈ ಕೋಡಂದೂರು ಹೇಳಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ರಾಮಕೃಷ್ಣ ಮೂಡಂಬೈಲುರವರು, ಈ ಬಗ್ಗೆ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಸಾರಿಗೆ ಇಲಾಖೆಗೆ 3 ಬಾರಿ ಕಳುಹಿಸಲಾಗಿದೆ. ಆದರೆ ಯಾವುದೇ ಸ್ಪಂದನೆ ಸಿಕ್ಕಿಲ್ಲ ಇದೀಗ ಮತ್ತೆ ಗ್ರಾಮಸಭೆಯ ನಿರ್ಣಯವನ್ನು ಸಾರಿಗೆ ಇಲಾಖೆಗೆ ಬರೆದುಕೊಳ್ಳುವ ಎಂದು ತಿಳಿಸಿದರು.


1-7 ಮಕ್ಕಳು ಸರಕಾರಿ ಶಾಲೆಯಲ್ಲೇ ಓದಬೇಕು!- ಕಾನೂನು ಬರಲಿ
ಶಿಕ್ಷಕ ಅರವಿಂದ ಕುಡ್ಲರವರು ಶಿಕ್ಷಣ ಇಲಾಖೆಯ ಬಗ್ಗೆ ಮಾಹಿತಿ ನೀಡುವ ಸಂದರ್ಭದಲ್ಲಿ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಂಠಿತಗೊಳ್ಳುತ್ತಿದೆ ಎಂಬ ವಿಚಾರದಲ್ಲಿ ಚರ್ಚೆ ನಡೆಯಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶ್ರೀಕೃಷ್ಣ ಭಟ್‌ರವರು, ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಜಾಸ್ತಿ ಮಾಡಬೇಕಾದರೆ ಇರುವುದು ಒಂದೇ ಉಪಾಯ ಅದೇನಂದರೆ 1 ರಿಂದ 7 ನೇ ತರಗತಿಯವರೇ ಪ್ರತಿಯೊಬ್ಬ ವಿದ್ಯಾರ್ಥಿಯು ಸರಕಾರಿ ಶಾಲೆಯಲ್ಲೇ ಕಲಿಯಬೇಕು ಎಂಬ ಕಾನೂನನ್ನು ಸರಕಾರ ಜಾರಿಗೆ ತಂದರೆ ಹೆತ್ತವರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಕಳಿಸುತ್ತಾರೆ ಎಂದು ತಿಳಿಸಿದರು. ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವ ಬಗ್ಗೆ ಶ್ರೀಧರ ಶೆಟ್ಟಿ ಪುಣಚ ಗ್ರಾಮಸಭೆಯ ಗಮನ ಸೆಳೆದರು.


ಬೆಳಗ್ಗಿನ ಜಾವ ವಿದ್ಯುತ್ ತೆಗೆಯಬೇಡಿ
ಮಳೆ ಬಿದ್ದ ತಕ್ಷಣ ವಿದ್ಯುತ್ ಕೈಕೊಡುತ್ತದೆ. ಮಳೆಯ ಹನಿಗೂ ವಿದ್ಯುತ್ ಅನ್ನು ನಿಲ್ಲಿಸುವ ತಾಕತ್ತು ಇದೆಯಾ ಎಂದು ಪುರಂದರ ಶೆಟ್ಟಿ ಕೋಡಂದೂರು ಕೇಳಿದರು. ಇದಕ್ಕೆ ಶ್ರೀಧರ ಶೆಟ್ಟಿ ಪುಣಚರವರು ಧ್ವನಿಗೂಡಿಸಿದರು. ಪದೇ ಪದೇ ವಿದ್ಯುತ್ ಕೈಕೊಡುತ್ತಿದ್ದು ಇದರಿಂದ ಜನರಿಗೆ ತೊಂದರೆಯಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಗ್ರಾಪಂ ಸದಸ್ಯ ಉದಯ ದಂಬೆರವರು, ಬೆಳಿಗ್ಗೆಯ ಹೊತ್ತಿನಲ್ಲಿ ವಿದ್ಯುತ್ ತೆಗೆಯಬೇಡಿ, ಬೆಳಿಗ್ಗಿನ ಜಾವ ವಿದ್ಯುತ್ ತೆಗೆದರೆ ಜನರಿಗೆ ಸಮಸ್ಯೆಯಾಗುತ್ತದೆ ಎಂದು ತಿಳಿಸಿದರು. ಇದಕ್ಕೆ ಉತ್ತರಿಸಿ ಮೆಸ್ಕಾಂ ಜೆಇರವರು, ತುರ್ತು ಕೆಲಸ ಇರುವ ಸಮಯದಲ್ಲಿ ಮಾತ್ರ ವಿದ್ಯುತ್ ತೆಗೆಯುತ್ತೇವೆ ಎಂದು ತಿಳಿಸಿದರು.


ವಿವಿಧ ಇಲಾಖಾ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸುನೀತಾ ಕುಮಾರಿ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಪ್ರತಿಭಾ ಜಗನ್ನಾಥ ಗೌಡ, ಸದಸ್ಯರುಗಳಾದ ಲಲಿತಾ, ಗಿರಿಜ, ಬೇಬಿ, ಗಂಗಮ್ಮ, ರವಿ, ಮಹೇಶ್ ಶೆಟ್ಟಿ ಕೆ.ವಿ, ಹರೀಶ್ ಪೂಜಾರಿ, ಸರೋಜಿನಿ, ಸುಜಾತ, ಉದಯ ದಂಬೆ, ರೇಖಾ, ತೀರ್ಥಾರಾಮ, ಅಶೋಕ್ ಕುಮಾರ್, ಆನಂದ ನಾಯ್ಕ, ವಾಣಿಶ್ರೀ, ರಾಜೇಶ್ ನಾಯ್ಕ, ಶಾರದಾ ಉಪಸ್ಥಿತರಿದ್ದರು. ಗ್ರಾಪಂ ದ್ವಿತೀಯ ದರ್ಜೆ ಲೆಕ್ಕಸಹಾಯಕಿ ಪಾರ್ವತಿ ವರದಿ ವಾಚಿಸಿದರು. ಗ್ರಂಥಪಾಲಕಿ ಜಯಲಕ್ಷ್ಮೀ ದೊಡ್ಡಡ್ಕ ಪ್ರಾರ್ಥಿಸಿದರು. ಅಭಿವೃದ್ಧಿ ಅಧಿಕಾರಿ ರವಿಯವರು ಸ್ವಾಗತಿಸಿ, ಗ್ರಾಪಂ ಮಾಹಿತಿ ನೀಡಿ ಕೊನೆಯಲ್ಲಿ ವಂದಿಸಿದರು. ಸಿಬ್ಬಂದಿಗಳಾದ ಮಮತಾ ಕಜೆಮಾರ್, ಸತ್ಯಪ್ರಕಾಶ್, ಉಸ್ಮಾನ್, ಅಭಿಷೇಕ್, ರೇಷ್ಮಾ ಕೂರೇಲು, ಮುರಳೀಧರ ಸಹಕರಿಸಿದ್ದರು.

ಸ್ವಚ್ಛತಾ ಶ್ರಮದಾನಿಗಳಿಗೆ ಸನ್ಮಾನ
ಪುಣಚ ಗ್ರಾಮ ಪಂಚಾಯತ್‌ನ ಘನತ್ಯಾಜ್ಯ ಘಟಕಕ್ಕೆ ಒಣ ಕಸಗಳನ್ನು ವಿಲೇವಾರಿ ಮಾಡುತ್ತಿರುವ ಉಜ್ವಲ ಸಂಜೀವಿನ ಒಕ್ಕೂಟದ ಸ್ಚಚ್ಛತಾ ಶ್ರಮದಾನಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. ತಾಲೂಕಿನಲ್ಲೇ ದೊಡ್ಡದಾದ ಸ್ವಚ್ಛತಾ ವಾಹಿನಿ ವಾಹನವನ್ನು ಚಲಾಯಿಸುತ್ತಿರುವ ವಾಹನ ಚಾಲಕಿ ಉಷಾ ಹಾಗೂ ಇಬ್ಬರು ಸ್ವಚ್ಛತಾಗಾರರಾದ ಲೀಲಾ ಮತ್ತು ಪುಷ್ಪಾವತಿಯವರನ್ನು ಶಾಲು ಹಾಕಿ, ಸ್ಮರಣಿಕೆ, ಹೂಗುಚ್ಛ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು.

ತುಳು ಭಾಷೆಯನ್ನು 8 ನೇ ಪರಿಚ್ಛೇದಕ್ಕೆ ಸೇರಿಸಿ-ಗ್ರಾಮಸಭೆಯಲ್ಲಿ ಆಗ್ರಹ
ತುಳು ಭಾಷೆಯನ್ನು ಸರಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು, ತುಳುವನ್ನು 8 ನೇ ಪರಿಚ್ಛೇದಕ್ಕೆ ಶೀಘ್ರವೇ ಸೇರಿಸಬೇಕು ಎಂದು ವಿಶ್ವನಾಥ ರೈ ಕೋಡಂದೂರು ಗ್ರಾಮಸಭೆಯಲ್ಲಿ ಆಗ್ರಹಿಸಿದರು. ಆರಂಭದಿಂದಲೇ ತುಳುವಿನಲ್ಲೇ ಮಾತನಾಡಿದ ವಿಶ್ವನಾಥ ರೈಯವರು, ವಿಧಾನಸಭೆಯಲ್ಲೂ ಶಾಸಕರು ತುಳುವಿನಲ್ಲಿ ಮಾತನಾಡಿ ಸರಕಾರದ ಗಮನ ಸೆಳೆದಿದ್ದಾರೆ. ತುಳು ಅತೀ ಶೀಘ್ರವಾಗಿ 8 ನೇ ಪರಿಚ್ಛೇದಕ್ಕೆ ಸೇರಬೇಕು ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳುವ ಎಂದು ಹೇಳಿದರು. ಇದಕ್ಕೆ ಧ್ವನಿಗೂಡಿಸಿದ ಅಧ್ಯಕ್ಷ ರಾಮಕೃಷ್ಣ ಮೂಡಂಬೈಲುರವರು ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳಲಾಗುವುದು ಎಂದು ತಿಳಿಸಿದರು. ಸಭೆಯ ಆರಂಭದಿಂದ ಕೊನೇಯವರೇಗೂ ತುಳುವಿನಲ್ಲೇ ಮಾತನಾಡುವ ಮೂಲಕ ವಿಶ್ವನಾಥ ರೈ ಕೋಡಂದೂರು ಗಮನ ಸೆಳೆದರು.

LEAVE A REPLY

Please enter your comment!
Please enter your name here