ಒಳಮೊಗ್ರು ಗ್ರಾಮವನ್ನು ಬಾಲವ್ಯಸನ ಮುಕ್ತ ಗ್ರಾಮ’ ಮಾಡಲು ನಿರ್ಣಯ
ಪುತ್ತೂರು: ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಧೂಮಪಾನ, ಗುಟ್ಕ ಸೇವನೆ, ಡ್ರಗ್ಸ್ ಇತ್ಯಾದಿ ಚಟಗಳಿಗೆ ಬಲಿಯಾಗುತ್ತಿರುವುದು ಕಂಡು ಬರುತ್ತಿದ್ದು ಇಂತಹ ಕೆಟ್ಟ ಚಟಗಳಿಗೆ ಮಕ್ಕಳು ಬಲಿಯಾಗದಂತೆ ತಡೆಯುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಈ ನಿಟ್ಟಿನಲ್ಲಿ ಒಳಮೊಗ್ರು ಗ್ರಾಮವನ್ನು ಬಾಲವ್ಯಸನ ಮುಕ್ತ’ ಗ್ರಾಮವನ್ನಾಗಿ ಮಾಡುವ ಬಗ್ಗೆ ಒಳಮೊಗ್ರು ಗ್ರಾಮ ಪಂಚಾಯತ್ ಕೆಡಿಪಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರ ಅಧ್ಯಕ್ಷತೆಯಲ್ಲಿ ಆ.8 ರಂದು ಗ್ರಾಪಂ ಸಭಾಂಗಣದಲ್ಲಿ ನಡೆಯಿತು. ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಸದಸ್ಯೆ ಕಸ್ತೂರಿ ಬೊಳುವಾರುರವರು ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ರಕ್ಷಣೆ, ದೌರ್ಜನ್ಯ ತಡೆ ಬಗ್ಗೆ ಮಾಹಿತಿ ನೀಡುತ್ತಾ, ಕುಂಬ್ರ ಪರಿಸರದಲ್ಲೂ ಮಕ್ಕಳು ಧೂಮಪಾನ, ಮಾದಕ ವಸ್ತುಗಳ ಸೇವನೆಯಂತಹ ಕೆಟ್ಟ ಚಟಗಳಿಗೆ ಬಲಿಯಾಗುತ್ತಿರುವ ಬಗ್ಗೆ ತಿಳಿದು ಬಂದಿದೆ ಎಂದರು. ಒಳಮೊಗ್ರು ಗ್ರಾಮವನ್ನು ಬಾಲವ್ಯಸನ ಮುಕ್ತ ಗ್ರಾಮವನ್ನಾಗಿ ಮಾಡುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು.
ಕುಂಬ್ರಕ್ಕೆ ಪ್ರತ್ಯೇಕ ವಿದ್ಯುತ್ ಫೀಡರ್
ಕುಂಬ್ರ ಪೇಟೆಯಲ್ಲಿ ಪದೇ ಪದೇ ವಿದ್ಯುತ್ ಕೈಕೊಡುತ್ತಿರುವ ಬಗ್ಗೆ ಸಭೆಯಲ್ಲಿ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಮೆಸ್ಕಾಂ ಅಧಿಕಾರಿಯವರು ಕುಂಬ್ರಕ್ಕೆ ಪ್ರತ್ಯೇಕ ವಿದ್ಯುತ್ ಫೀಡರ್ ಅಳವಡಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.ದರ್ಬೆತ್ತಡ್ಕ ಶೇಖಮಲೆ ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳ ಗೆಲ್ಲುಗಳನ್ನು ಕತ್ತರಿಸುವಂತೆ ಕೇಳಿಕೊಳ್ಳಲಾಯಿತು.
ಹಾವು ಕಚ್ಚಿ ಮರಣ ಹೊಂದಿದರೆ 2 ಲಕ್ಷ ರೂ
ಕೃಷಿ ಕೆಲಸ ಅಥವಾ ಇತರ ಕೂಲಿ ಕೆಲಸ ಮಾಡಿಕೊಂಡಿರುವ ಸಂದರ್ಭದಲ್ಲಿ ಹಾವು ಕಚ್ಚಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರೆ ಆ ವ್ಯಕ್ತಿಗೆ ಕಂದಾಯ ಇಲಾಖೆ ಮೂಲಕ ಸರಕಾರದಿಂದ 2 ಲಕ್ಷ ರೂ.ಪರಿಹಾರ ಸಿಗುತ್ತದೆ ಎಂದು ಕಂದಾಯ ಇಲಾಖಾ ಅಧಿಕಾರಿ ಮಾಹಿತಿ ನೀಡಿದರು.
ಗ್ರಾಮದಲ್ಲಿ ಡೆಂಗ್ಯೂ ಪ್ರಕರಣ ಪತ್ತೆಯಾಗಿಲ್ಲ
ಕೈಕಾರದಲ್ಲಿರುವ ಆರೋಗ್ಯ ಉಪಕೇಂದ್ರಕ್ಕೆ ಇಸಿಜಿ ಮೆಷಿನ್ ಬಂದಿದ್ದು ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು, ಈ ವರ್ಷ ಗ್ರಾಮದಲ್ಲಿ ಯಾವುದೇ ಡೆಂಗ್ಯೂ ಪ್ರಕರಣ ಪತ್ತೆಯಾಗಿಲ್ಲ ಎಂದು ಆರೋಗ್ಯ ಇಲಾಖಾ ಅಧಿಕಾರಿ ಮಾಹಿತಿ ನೀಡಿದರು.
ಹಾಲಿನ ಪ್ರೋತ್ಸಾಹ ಧನ ಕಳೆದ ನವೆಂಬರ್ ತಿಂಗಳಿನಿಂದ ಬಂದಿಲ್ಲ ಎಂಬ ಬಗ್ಗೆ ಸಭೆಗೆ ಮಾಹಿತಿ ನೀಡಲಾಯಿತು. ಈ ಬಗ್ಗೆ ಪಶುಸಂಗೋಪನಾ ಇಲಾಖೆಗೆ ಬರೆದುಕೊಳ್ಳುವುದು ಎಂದು ನಿರ್ಣಯಿಸಲಾಯಿತು. ಕೈಕಾರ ಆರೋಗ್ಯ ಕೇಂದ್ರಕ್ಕೆ ಶುದ್ಧ ಕುಡಿಯುವ ನೀರಿನ ಅಕ್ವೋಗಾರ್ಡ್ ಒದಗಿಸಿಕೊಡುವಂತೆ ಆರೋಗ್ಯ ಸಹಾಯಕಿರು ತಮ್ಮ ಬೇಡಿಕೆ ಇಟ್ಟರು. 94ಸಿಯಲ್ಲಿ ಒಟ್ಟು 148 ಅರ್ಜಿ ಬಂಧಿದ್ದು ಇದರಲ್ಲಿ 85 ವಿತರಣೆ ಆಗಿದೆ. ಸಾಮಾಜಿಕ ಭದ್ರತಾ ವೇತನಕ್ಕೆ ಈ ವರ್ಷ 35 ಅರ್ಜಿ ಬಂದಿದೆ ಎಂದು ಕಂದಾಯ ಇಲಾಖಾ ಅಧಿಕಾರಿ ಮಾಹಿತಿ ನೀಡಿದರು. ಒಳಮೊಗ್ರು ಗ್ರಾಪಂ ಗ್ರಂಥಾಲಯದಿಂದ ಒಟ್ಟು 910 ಕಾರ್ಡ್ ನೀಡಲಾಗಿದೆ ಎಂದು ಗ್ರಂಥಪಾಲಕಿ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಸುಂದರಿ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ್ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್. ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದ್ದರು.