ಲೋಕಾಯುಕ್ತ ಪೊಲೀಸರಿಂದ ಅಹವಾಲು ಸ್ವೀಕಾರದಲ್ಲಿ ಎಸ್.ಪಿ ಸಿ.ಎ ಸೈಮನ್ ತಹಶೀಲ್ದಾರ್‌ಗೆ ಸೂಚನೆ
ಪುತ್ತೂರು:ಸರಕಾರಿ ಜಮೀನುಗಳನ್ನು ಅತಿಕ್ರಮಿಸಿದರೆ ಅಂತವರ ವಿರುದ್ಧ ಕೂಡಲೇ ಕ್ರಮಕೈಗೊಳ್ಳಬೇಕು. ನೀವು ಕ್ರಮ ಕೈಗೊಳ್ಳದಿದ್ದರೆ ನಿಮ್ಮ ವಿರುದ್ಧವೇ ಕ್ರಮಕೈಗೊಳ್ಳಲಾಗುವುದು ಎಂದು ಪುತ್ತೂರಿನಲ್ಲಿ ನಡೆದ ಸಾರ್ವಜನಿಕರಿಂದ ಅಹವಾಲು ಸ್ವೀಕಾರದಲ್ಲಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸಿ.ಎ ಸೈಮನ್ ತಹಶೀಲ್ದಾರ್‌ರವರಿಗೆ ಸೂಚನೆ ನೀಡಿದರು.
ಮಂಗಳೂರು ವಿಭಾಗದ ಲೋಕಾಯುಕ್ತ ಪೊಲೀಸರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮಗಳು ಆ.9ರಂದು ತಾಲೂಕು ಆಡಳಿತ ಸೌಧದಲ್ಲಿರುವ ತಹಶೀಲ್ದಾರ್ ಸಭಾಂಗಣದಲ್ಲಿ ನಡೆಯಿತು. ಚಿಕ್ಕಮುಡ್ನೂರು ಗ್ರಾಮದ ಕೊಲ್ಯ ಎಂಬಲ್ಲಿ ಕೌಶಲ್ಯಾಭಿವೃದ್ಧಿಗೆ ಮೀಸಲಿರಿಸಿದ ಜಮೀನನ್ನು ಸ್ಥಳೀಯ ವ್ಯಕ್ತಿಯೋರ್ವರು ಅತಿಕ್ರಮಿಸಿಕೊಂಡು ಸೈಟ್‌ಗಳನ್ನಾಗಿ ಮಾರಾಟ ಮಾಡುತ್ತಿರುವುದಾಗಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಿಗೆ ದೂರು ಸಲ್ಲಿಸಿದರು. ಸಾರ್ವಜನಿಕ ದೂರನ್ನು ಸ್ವೀಕರಿಸಿ, ಸದರಿ ವಿಚಾರದ ಬಗ್ಗೆ ವಿಮರ್ಷಿಸಿದ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸಿ.ಎ ಸೈಮನ್ ಸರಕಾರಿ ಜಮೀನುಗಳನ್ನು ಯಾರೇ ಅತಿಕ್ರಮಿಸಿಕೊಂಡರೆ ಅಂತವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ನಿಮ್ಮ ವಿರುದ್ಧವೇ ಕ್ರಮಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಜೆ.ಶಿವಶಂಕರ್‌ರವರಿಗೆ ಸೂಚನೆ ನೀಡಿದರು.
1991ರಿಂದ ಪ್ಲಾಟಿಂಗ್ ಸಮಸ್ಯೆ ಬಗ್ಗೆ ಮನವಿ ಸಲ್ಲಿಸುತ್ತಿದ್ದರೂ ಯಾವುದೇ ಸ್ಪಂಧನೆ ದೊರೆತಿಲ್ಲ ಎಂದು ನೆಟ್ಟಣಿಗೆ ಮುಡ್ನೂರು ನಿವಾಸಿ ಕೃಷ್ಣರವರು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ದೂರು ಸ್ವೀಕರಿಸಿದ ಲೋಕಾಯುಕ್ತರು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ವಿಚಾರಿಸಿ ಕೂಡಲೇ ಕ್ರಮಕೈಗೊಳ್ಳುವಂತೆ ಸೂಚಿಸಿದರಲ್ಲದೆ ಅವರಿಂದ ಸ್ಪಂಧನೆ ದೊರೆಯದಿದ್ದರೆ ತನಗೆ ಮಾಹಿತಿ ನೀಡುವಂತೆ ತಿಳಿಸಿದರು.
ತನ್ನ ಜಮೀನನ್ನು ವಿಭಾಗ ಮಾಡಿ ವಿಭಾಗ ಪತ್ರಕ್ಕೆ ಉಪ ನೊಂದಾವಣಾ ಕಚೇರಿಯಲ್ಲಿ ನೋಂದಾವಣೆ ಮಾಡಲಾಗಿದೆ. ಆದರೆ ಫೈಲ್ ಇನ್ನೂ ಅಲ್ಲಿಂದ ಕಂದಾಯ ಇಲಾಖೆಗೆ ಬಂದಿರುವುದಿಲ್ಲ ಎಂದು ಸೇಸಪ್ಪರವರು ದೂರು ಸಲ್ಲಿಸಿದರು. ಈ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ವಿಚಾರಿಸಿದ್ದು ತಾಂತ್ರಿಕ ಸಮಸ್ಯೆಯಿಂದ ವಿಳಂಬವಾಗಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.
ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಪಡಿತರ ಚೀಟಿಯ ಆವಶ್ಯಕತೆಯಿದ್ದು ತನ್ನ ಬಳಿ ಪಡಿತರ ಚೀಟಿಯಲ್ಲ. ಈ ಹಿಂದೆ ತಾನು ಸಹೋದರರ ಜೊತೆ ವಾಸವಿದ್ದು ಅವರ ಪಡಿತರ ಚೀಟಿಯಿಂದ ತನ್ನ ಹೆಸರು ತೆಗೆದು ಹಾಕಿದ್ದಾರೆ. ಈಗ ನಾನು ಒಬ್ಬಂಟಿಯಾಗಿ ವಾಸವಿದ್ದು ಜೀವನ ನಿರ್ವಹಣೆಗೆ ಅಂಗವಿಕಲ ವೇತನ ಮಾತ್ರ ಬರುತ್ತಿದೆ. ವೃದ್ದಾಪ್ಯ ವೇತನ ಹಾಗೂ ಗೃಹಲಕ್ಷ್ಮೀ ಯೋಜನೆ ಪಡೆದುಕೊಳ್ಳಲು ಪಡಿತರ ಚೀಟಿ ಮಾಡಿಕೊಡುವಂತೆ ಕಬಕದ ಮಾಲಿನಿಯವರು ದೂರು ಸಲ್ಲಿಸಿದ್ದು ಕೂಡಲೇ ಮಾಡಿಕೊಡುವಂತೆ ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
13 ಅಹವಾಲು ಸ್ವೀಕಾರ:
ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಒಟ್ಟು 13 ದೂರುಗಳು ಸ್ವೀಕಾರವಾಗಿದ್ದು ಎಲ್ಲಾ ದೂರುಗಳು ಕಂದಾಯ ಇಲಾಖೆಗಳಿಗೆ ಸಂಬಂಧಿಸಿದ ದೂರುಗಳು ಸಲ್ಲಿಕೆಯಾಗಿದೆ.
ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಗ್ರೇಡ್-2 ತಹಶೀಲ್ದಾರ್ ಲೋಕೇಶ್, ಭೂ ದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕಿ ರಮಾದೇವಿ, ಉಪತಹಶೀಲ್ದಾರ್ ರಾಮಣ್ಣ ನಾಯ್ಕ, ಲೋಕಾಯುಕ್ತ ಪೊಲೀಸ್ ಉಪ ಅಧೀಕ್ಷಕ ಚೆಲುವರಾಜು, ಪೊಲೀಸ್ ನಿರೀಕ್ಷಕ ವಿನಾಯಕ ಬಿಲ್ಲವ, ಸಿಬಂದಿಗಳಾದ ರಾಧಾಕೃಷ್ಣ ಡಿ.ಎ., ವೈಶಾಲಿ, ಶರತ್, ಆದರ್ಶ ಕಾಣಿಯೂರು, ಬಾಲರಾಜ್, ಯತೀಶ, ದುಂಡಪ್ಪ, ರಾಜಶೇಖರ್ ಹಾಗೂ ನವೀನ ಉಪಸ್ಥಿತರಿದ್ದರು.