ರಾಮಕುಂಜ: ಕಡಬ ತಾಲೂಕಿನ ಕೊಯಿಲದಲ್ಲಿರುವ ಎಂಡೋ ಪಾಲನಾ ಕೇಂದ್ರಕ್ಕೆ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಯೋಗೇಶ್ ದುಬೆ ಅವರು ಆ.10ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಎಂಡೋ ಪಾಲನಾ ಕೇಂದ್ರದ ಸ್ಥಿತಿಗತಿಗಳನ್ನು ಅವಲೋಕಿಸಿದ ಅವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಈ ಸಮಸ್ಯೆ ಇಲ್ಲಿಗೆ ಕೊನೆಯಾಗಬೇಕು, ಇನ್ನು ಮುಂದೆ ಎಂಡೋದಿಂದ ಯಾವುದೇ ಸಮಸ್ಯೆ ಉದ್ಭವವಾಗಬಾರದು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಹಾಗೂ ಕೇಂದ್ರ ಮಾನವ ಹಕ್ಕುಗಳ ಆಯೋಗ ಸೂಕ್ತ ಕ್ರಮ ಕೈಗೊಳ್ಳಲಿದೆ. ಕೊಯಿಲ ಎಂಡೋ ಪಾಲನಾ ಕೇಂದ್ರ ಅಭಿವೃದ್ಧಿ ಹಾಗೂ ಎಂಡೋ ಪೀಡಿತರು ಸಹಜ ಸ್ಥಿತಿಗೆ ಬರುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಬೇಡಿಕೆಗಳನ್ನು ಸಲ್ಲಿಸಿದಲ್ಲಿ ಬೇಕಾಗುವಷ್ಟು ಅನುದಾನವನ್ನು ಒದಗಿಸಿಕೊಡಲಾಗುವುದು. ಎಂಡೋ ಪೀಡಿತರನ್ನು ಇನ್ನಷ್ಟು ಚುರುಕು ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಇದಕ್ಕೆ ನಮ್ಮ ಕಡೆಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು. ಎಂಡೋ ಸಂತ್ರರಿಗೆ ಸಿಗುವ ಮಾಶಾಸನ ಹಾಗೂ ಇತರ ಸವಲತ್ತುಗಳ ಬಗ್ಗೆ ಅವರು ಮಾಹಿತಿ ಪಡೆದುಕೊಂಡರು.
ಜಿಲ್ಲೆಯಲ್ಲಿರುವ ಎಂಡೋ ಬಾಧಿತರ ಅಂಕಿ ಅಂಶ, ಸಂತ್ರಸ್ಥರಿಗೆ ನೀಡಲಾಗುವ ಸೌಲಭ್ಯದ ಬಗ್ಗೆ ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಜಿಲ್ಲಾ ಮೆಡಿಕಲ್ ಆಫೀಸರ್ ಡಾ.ನವೀನ್ ಕುಲಾಲ್, ಜಿಲ್ಲಾ ವಿಕಲಚೇತನಕ ಕಲ್ಯಾಣಾಧಿಕಾರಿ ಡಾ.ಗೋಪಾಲಕೃಷ್ಣ, ಕಡಬ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಮಾಹಿತಿ ನೀಡಿದರು. ಎಂಡೋಪಾಲನಾ ಕೇಂದ್ರವನ್ನು ಮುನ್ನಡೆಸುತ್ತಿರುವ ಬೆಳ್ತಂಗಡಿ ನೆರಿಯ ಸಿಯೋನ್ ಆಶ್ರಮ ಟ್ರಸ್ಟ್‌ನ ವ್ಯವಸ್ಥಾಪಕ ಜಾಕ್ಸನ್‌ರವರು ಕೇಂದ್ರದ ಕಾರ್ಯವೈಖರಿ ಬಗ್ಗೆ ಮಾಹಿತಿ ನೀಡಿದರು. ಎಂಡೋ ಜಿಲ್ಲಾ ಸಂಯೋಜಕ ಶಾಜುದ್ಧೀನ್, ಕೊಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರಯಾಗ್, ಪುತ್ತೂರು ಬಿಆರ್‌ಸಿಗಳಾದ ತನುಜಾ, ಸೀತಮ್ಮ, ಸಿಬ್ಬಂದಿಗಳಾದ ನಮಿತಾ, ರಜಿನ್, ಶೈನಿ, ಯಶ್ವಿತಾ ಮತ್ತಿತರರು ಉಪಸ್ಥಿತರಿದ್ದರು.