ಪುತ್ತೂರು: ಮರಾಟಿ ಸಮುದಾಯದ ಅರಾಧ್ಯ ದೇವರು ಮಹಮ್ಮಾಯಿ ಅಮ್ಮನವರ ಗೊಂದೋಳು ಪೂಜಾ ಕ್ರಮ ಮತ್ತು ಭೈರವನ ಆರಾಧನಾ ಕ್ರಮದ ಫೊಟೋ ಹಾಗೂ ವಿಡಿಯೋವನ್ನು ಎಡಿಟ್ ಮಾಡಿಕೊಂಡು ಫೇಸ್ಬುಕ್ ಹಾಗೂ ಇನ್‌ಸ್ಟಾಗ್ರಾಂಮ್‌ಗೆ ಅಪಲೋಡ್ ಮಾಡಿ ದೇವರ ಹೆಸರನ್ನು ದುರುಪಯೋಗ ಪಡಿಸಿಕೊಂಡ ವಿಚಾರ ಹಾಗೂ ಸಮುದಾಯದ ಜನರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆಂದು ಆರೋಪಿಸಿ ವ್ಯಕ್ತಿಯೊಬ್ಬರ ಮೇಲೆ ಕೊಂಬೆಟ್ಟು ಮರಾಟಿ ಸಮಾಜ ಸಂಘದ ವತಿಯಿಂದ ಪುತ್ತೂರು ನಗರ ಠಾಣೆಗೆ ಆ.10 ದೂರು ನೀಡಲಾಗಿದೆ.
ಪಂಡಿತ್ ಶ್ರೀ ರಾಮದೇವ್ ಭಟ್ ಗುರೂಜಿ ಎಂಬ ಹೆಸರಿನ ವ್ಯಕ್ತಿ ಯು ‘ಓಂ ಶ್ರೀ ಮೂಕಾಂಬಿಕಾ ಜ್ಯೋತಿಷ್ಯ ಫಲಂ’ ಶೀರ್ಷಿಕೆ ಅಡಿ ಉಚಿತ ಭವಿಷ್ಯ, ಉಚಿತ ಪರಿಹಾರ ಎಂಬ ವಾಕ್ಯದೊಂದಿಗೆ ಪಂಗಡದ ಅರಾಧ್ಯ ದೇವರು ಹಾಗೂ ಭೈರವನ ಆರಾಧನ ಕ್ರಮಗಳ ಫೊಟೋ, ವಿಡಿಯೋ ಎಡಿಟ್ ಮಾಡಿಕೊಂಡು ದುರುಪಯೋಗ ಪಡಿಸಿಕೊಂಡಿದ್ದಾರೆ. ಅನಾದಿ ಕಾಲದಿಂದಲೂ ಸಮುದಾಯ ಪೂಜಿಸಿಕೊಂಡು ಬಂದಿರುವಂತಹ ದೈವ, ದೇವರುಗಳ ಫೊಟೋ, ತನ್ನ ನೀಚ ಕಾರ್ಯಗಳಿಗೆ ಬಳಸಿ, ವ್ಯವಹಾರವಾಗಿ ಉಪಯೋಗಿಸಿದ್ದಾರೆಂದು ಹಾಗೂ ವಿಶಿಷ್ಟ ರೀತಿಯ ಧಾರ್ಮಿಕ ಆಚರಣೆ ವಿಧಿಗಳ ಫೊಟೋ, ವಿಡಿಯೋ ಬಳಸಿರುವುದು ಕಂಡು ಬಂದಿದ್ದು ಘಟನೆಗೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ನೀಡಲಾಯಿತು.
ಕೊಂಬೆಟ್ಟು ಮರಾಟಿ ಸಮಾಜ ಸಂಘದ ಅಧ್ಯಕ್ಷ ಮಂಜುನಾಥ ಎನ್.ಎಸ್, ಮಾಜಿ ಅಧ್ಯಕ್ಷ ಶಿವಪ್ಪ ನಾಯ್ಕ, ಮಹಮ್ಮಾಯಿ ಸೌಹಾರ್ದ ಸಹಕಾರಿಯ ಅಧ್ಯಕ್ಷ ಶೀನ ನಾಯ್ಕ, ಅಶೋಕ್ ಬಲ್ನಾಡು, ಮಹಾಲಿಂಗ ನಾಯ್ಕ ನರಿಮೊಗರು, ಕೃಷ್ಣ ನಾಯ್ಕ, ವೆಂಕಪ್ಪ ನಾಯ್ಕ ನಗರ, ಬಾಲಕೃಷ್ಣ ನಾಯ್ಕ, ಗಿರೀಶ್ ಸೊರಕೆ, ಕೇಶವ ಪ್ರಸಾದ್ ಹಾಗೂ ಅಪ್ಪಯ್ಯ ತಲೆಂಜಿ ಮೊದಲಾದವರು ಹಾಜರಿದ್ದರು.