ಉಪ್ಪಿನಂಗಡಿ: ಪುತ್ತೂರು ಶಾಸಕರ ರಾಜಕೀಯ ರಹಿತವಾದ ಅಭಿವೃದ್ಧಿ ಶೀಲ ನಡೆ ಹಾಗೂ ಭ್ರಷ್ಟಾಚಾರ ರಹಿತ ಆಡಳಿತದಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಲು ಬಿಜೆಪಿಯವರು ಒಲವು ತೋರುತ್ತಿದ್ದು, ಇದರಿಂದಾಗಿ ಬಿಜೆಪಿಯವರು ಅಧಿಕಾರ ನಡೆಸುತ್ತಿದ್ದ ಗ್ರಾ.ಪಂ.ಗಳಿಂದು ಕಾಂಗ್ರೆಸ್ ತೆಕ್ಕೆಗೆ ಬರುತ್ತಿವೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಮುರಳೀಧರ ರೈ ಮಠಂತಬೆಟ್ಟು ತಿಳಿಸಿದರು.
ಕೋಡಿಂಬಾಡಿ ಗ್ರಾ.ಪಂ.ನಲ್ಲಿ ಆ.16ರಂದು ನಡೆದ ಗ್ರಾ.ಪಂ. ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯೆಯೋರ್ವರ ಬೆಂಬಲದಿಂದ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಬೆಂಬಲಿತರು ಪಡೆದುಕೊಂಡ ಬಳಿಕ ನಡೆದ ಸಂಭ್ರಮಾಚರಣೆಯಲ್ಲಿ ಅವರು ಮಾತನಾಡುತ್ತಿದ್ದರು.
ಪಕ್ಷಕ್ಕಾಗಿ ಹಗಲಿರುಳು ದುಡಿದವರನ್ನು ಮುಖಂಡರು ಗಣನೆಗೆ ತೆಗೆದುಕೊಳ್ಳದಿದ್ದಾಗ, ಅಭಿವೃದ್ಧಿಯ ಕಡೆ ಗಮನ ನೀಡದಿದ್ದಾಗ ಕಾರ್ಯಕರ್ತರಿಗೆ ನೋವು ಬರುವುದು ಸಹಜ. ಆ ಪರಿಸ್ಥಿತಿ ಇಂದು ಬಿಜೆಪಿಯಲ್ಲಾಗಿದೆ. ಬಿಜೆಪಿಯವರಿಗೇ ಬಿಜೆಪಿ ಬೇಡ ಅನ್ನುವಂತಾಗಿದೆ. ಹಾಗಾಗಿ ಅವರು ಕಾಂಗ್ರೆಸ್ನ ರಾಜಕೀಯ ರಹಿತವಾದ ಅಭಿವೃದ್ಧಿ ಶೀಲ ನಡೆ, ಭ್ರಷ್ಟಾಚಾರ ರಹಿತ ಆಡಳಿತವನ್ನು ನೋಡಿ ಕಾಂಗ್ರೆಸ್ಗೆ ಬೆಂಬಲ ನೀಡುತ್ತಿದ್ದಾರೆ. ಇದರಿಂದಾಗಿ ವಿಟ್ಲ- ಉಪ್ಪಿನಂಗಡಿ ಬ್ಲಾಕ್ನಲ್ಲಿ ಈಗಾಗಲೇ ಬಿಜೆಪಿ ಬೆಂಬಲಿತ ಸದಸ್ಯರು ಅಧಿಕಾರದಲ್ಲಿದ್ದ ನಾಲ್ಕು ಗ್ರಾ.ಪಂ.ಗಳಲ್ಲಿ ಕಾಂಗ್ರೆಸ್ ಬೆಂಬಲಿತರಿಗೆ ಅಧಿಕಾರ ಸಿಗುವಂತಾಗಿದೆ. ಪಕ್ಷದ ಈ ಬೆಳವಣಿಗೆ ಕಾಂಗ್ರೆಸ್ನ ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕಾರಣವಾಗಿದೆ. ಕೋಡಿಂಬಾಡಿಯಲ್ಲಿ ಕೂಡಾ ಶಾಸಕರ ಮಾರ್ಗದರ್ಶನ, ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಶ್ರಮ ಕಾರಣವಾಗಿದೆ ಎಂದರು.
ಈ ಸಂದರ್ಭ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಚುನಾಯಿತರಾದ ಮಲ್ಲಿಕಾ ಅಶೋಕ್ ಪೂಜಾರಿ, ಉಪಾಧ್ಯಕ್ಷರಾಗಿ ಚುನಾಯಿತರಾದ ಜಯಪ್ರಕಾಶ್ ಬದಿನಾರು, ಬಿಜೆಪಿ ಬೆಂಬಲಿತ ಸದಸ್ಯೆ ಪುಷ್ಪಾ ಲೋಕಯ್ಯ ನಾಯ್ಕ, ಕಾಂಗ್ರೆಸ್ ಪ್ರಮುಖರಾದ ಎಂ.ಎಸ್. ಮಹಮ್ಮದ್, ಪ್ರವೀಣ್ಚಂದ್ರ ಆಳ್ವ, ಚಂದ್ರಹಾಸ ಶೆಟ್ಟಿ, ಉಮಾನಾಥ ಶೆಟ್ಟಿ, ಈಶ್ವರ ಭಟ್ ಪಂಜಿಗುಡ್ಡೆ, ನಿರಂಜನ್ ರೈ ಮಠಂತಬೆಟ್ಟು, ಕಾರ್ತಿಕ್ ರೈ ಬೆಳ್ಳಿಪ್ಪಾಡಿ, ಮೋನಪ್ಪ ಗೌಡ ಪಲ್ಲಮಜಲು, ಪದ್ಮನಾಭ ಶೆಟ್ಟಿ ರೆಂಜಾಜೆ, ಮೋಹನ್ ಗುಜ್ಜಿನಡ್ಕ, ಅನಿ ಮಿನೇಜಸ್, ಕೇಶವ ಪೂಜಾರಿ, ರಾಮಣ್ಣ ಪಿಲಿಂಜ, ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಸುಶಾನ್ ಶೆಟ್ಟಿ, ವಿಕ್ರಮ್ ಶೆಟ್ಟಿ ಅಂತರ, ಸುಮಿತ್ ಶೆಟ್ಟಿ, ಸುಂದರ ಸಾಲ್ಯಾನ್, ಕೇಶವ ಗೌಡ, ವಿಜಯಕುಮಾರ್ ಚೀಮುಳ್ಳು, ಶಿವಪ್ರಸಾದ್ ಶೆಟ್ಟಿ, ಪ್ರಭಾಕರ ಸಾಮಾನಿ, ಯತೀಶ್ ಶೆಟ್ಟಿ, ಸತೀಶ್ ಸೇಡಿಯಾಪು, ಯೊಗೀಶ್ ಸಾಮಾನಿ, ಗಣೇಶ್ ಶೆಟ್ಟಿ ಕಟಾರ, ದಾಮೋದರ ಶೆಟ್ಟಿ, ಗ್ರಾ.ಪಂ. ಸದಸ್ಯರಾದ ಜಗನ್ನಾಥ ಶೆಟ್ಟಿ ನಡುಮನೆ, ಗೀತಾ ಬಾಬು, ಪೂರ್ಣಿಮಾ ಯತೀಶ್ ಶೆಟ್ಟಿ, ಪುಷ್ಪಾವತಿ ಬೆಳ್ಳಿಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.