ಶ್ರೀಗಳಿಂದ ಮನೆ ಮನೆಗಳಲ್ಲಿಸಂಸ್ಕಾರದ ಬೀಜ ಬಿತ್ತುವ ಪ್ರಯತ್ನವಾಗಿದೆ: ಡಾ.ವೀರೇಂದ್ರ ಹೆಗ್ಗಡೆ
ಧರ್ಮ ಕ್ಷೇತ್ರಗಳಿಗೆ ತೊಂದರೆ ಅಪಚಾರಗಳು ನಡೆದಾಗ ಸುಮನಸ್ಸಿನವರೆಲ್ಲರೂ ಒಗ್ಗಟ್ಟಾಗಬೇಕು : ಮಾಣಿಲ ಶ್ರೀ
ವಿಟ್ಲ: ಸಂಘಟನೆಯ ಕೊರತೆಯನ್ನು ನೀಗಿಸಿದ ಸ್ವಾಮೀಜಿ ಮಾಣಿಲ ಶ್ರೀಗಳು, ಮನೆ ಮನೆಗಳಲ್ಲಿ ಸಂಸ್ಕಾರದ ಬೀಜ ಬಿತ್ತುವ ಪ್ರಯತ್ನವನ್ನು ಅವರು ಮಾಡುತ್ತಾ ಬಂದಿದ್ದಾರೆ. ಮಧುಕರಿ ಸೇವೆಯ ಮೂಲಕ ಮಾಣಿಲ ಕ್ಷೇತ್ರವನ್ನು ಬೆಳೆಸುವ ಜೊತೆಗೆ ಇತರ ಧಾರ್ಮಿಕ ಕೇಂದ್ರಗಳನ್ನೂ ಬೆಳೆಸಿದ್ದಾರೆ. ಎಲ್ಲರನ್ನೂ ಸಮತೋಲನದಿಂದ ಕರೆದುಕೊಂಡು ಹೋಗುವ ಶಕ್ತಿ ಅವರಿಗಿದೆ. ಅವರು ನಿಜವಾದ ರಾಷ್ಟ್ರಸೇವೆಯನ್ನು ಮಾಡುತ್ತಿದ್ದಾರೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ 48 ದಿನಗಳ ಸಾಮೂಹಿಕ ಶ್ರೀಲಕ್ಷ್ಮೀ ಪೂಜೆಯ ಸಂದರ್ಭದಲ್ಲಿ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಬೆಳ್ಳಿ ಹಬ್ಬ ಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಾನಸಿಕ ಉತ್ಸಾಹ ಇದ್ದಾಗ ದೈಹಿಕ ಶ್ರಮ ಕಾಣಿಸಿಕೊಳ್ಳುವುದಿಲ್ಲ. ಯಾವುದೇ ಫಲಾಪೇಕ್ಷೆ ಇಲ್ಲದವರು ಜ್ಞಾನಿಗಳಾಗಿರುತ್ತಾರೆ. ಹಿಂದೂ ಸಮಾಜದ ಎಲ್ಲಾ ವರ್ಗದವರ ಹಾಗೂ ಜನಸಾಮಾನ್ಯರ ಜತೆಗೆ ಸಂಪರ್ಕ ಇಟ್ಟುಕೊಂ ಡಾಗ ಸಂಘಟನೆ ಬಲವಾಗುತ್ತದೆ ಎಂದರು.
ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ,ಧಾರ್ಮಿಕ ಮೌಲ್ಯ, ಆಚಾರವಿಚಾರ, ಸಂಸ್ಕೃತಿಯನ್ನು ಉಳಿಸಬೇಕಾಗಿದೆ. ಕಟೀಲು, ಧರ್ಮಸ್ಥಳ ಕ್ಷೇತ್ರ ಆಧ್ಯಾತ್ಮ ಜೀವನಕ್ಕೆ ಪ್ರೇರೇಪಣೆಯನ್ನು ನೀಡಿದ ಸಾನ್ನಿಧ್ಯವಾಗಿದೆ. ಸನಾತನ ಹಿಂದೂ ಧರ್ಮದಲ್ಲಿ ಬೇರೆ ಬೇರೆ ರೀತಿಯ ಪರಿಸ್ಥಿತಿಗಳು ನಿರ್ಮಾಣವಾಗುತ್ತಿದೆ. ಧರ್ಮ ಕ್ಷೇತ್ರಗಳಿಗೆ ತೊಂದರೆ ಅಪಚಾರಗಳು ನಡೆದಾಗ ಸುಮನಸ್ಸಿನವರೆಲ್ಲರೂ ಒಗ್ಗಟ್ಟನ್ನು ಪ್ರದರ್ಶಿಸಬೇಕಾಗಿದೆ. ಕಲುಷಿತ ವಾತಾವರಣವನ್ನು ಪರಿಶುದ್ಧಗೊಳಿಸುವ ಶಕ್ತಿ ಭಗವಂತನ ಸಾನಿಧ್ಯದಲ್ಲಿದೆ ಎಂದರು.
ವಿಟ್ಲ ಅರಮನೆಯ ಬಂಗಾರು ಅರಸರು ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ಅಮಿತ್ ಕುಮಾರ್ ಬೆಂಗಳೂರು, ಬೆಳ್ಳಿಹಬ್ಬ ಸಮಿತಿ ಗೌರವ ಮಾರ್ಗದರ್ಶಕ ಪ್ರಸಾದ್ ಪಾಂಗಣ್ಣಾಯ, ಪುತ್ತೂರು ಪದ್ಮಶ್ರೀ ಸೋಲಾರ್ ಸಿಸ್ಟಮ್ ಮಾಲಕ ಸೀತಾರಾಮ ರೈ ಕೆದಂಬಾಡಿಗುತ್ತು, ವಿಟ್ಲ ಶ್ರವಣ್ ಜ್ಯುವೆಲ್ಲರ್‍ಸ್ ಮಾಲಕ ಸದಾಶಿವ ಆಚಾರ್ಯ ಕೈಂತಿಲ, ತಾ.ಪಂ.ಮಾಜಿ ಅಧ್ಯಕ್ಷ ಸುದರ್ಶನ ಜೈನ್, ಟ್ರಸ್ಟಿ ಜಯರಾಜ್‌ಪ್ರಕಾಶ್, ಮಹಿಳಾ ಸಮಿತಿ ಅಧ್ಯಕ್ಷೆ ವನಿತಾ ವಿ.ಶೆಟ್ಟಿ ಉಪಸ್ಥಿತರಿದ್ದರು.
ಸನ್ಮಾನ: ಕೃಷಿ ಕ್ಷೇತ್ರದ ಸಾಧಕ ಪದ್ಮಶ್ರೀ ಮಹಾಲಿಂಗ ನಾಯ್ಕ ಅಮೈ, ಸಂಘಟನೆ ಕ್ಷೇತ್ರದ ಸಾದಕ ಚಂದ್ರಹಾಸ ಡಿ. ಶೆಟ್ಟಿ ರಂಗೋಲಿ , ಧಾರ್ಮಿಕ ಕ್ಷೇತ್ರ ಸಾಧಕ ಜಗನ್ನಾಥ ಚೌಟ ಬದಿಗುಡ್ಡೆ, ವಾಸುದೇವ ಆರ್. ಕೊಟ್ಟಾರಿ, ಬಿ.ಪ್ರೇಮಾನಂದ ಕುಲಾಲ್ ಕೋಡಿಕಲ್, ಆರೋಗ್ಯ ಕ್ಷೇತ್ರದ ಸಾದಕರಾ ರೇವತಿ ಡೊಂಬಯ್ಯ ಕುಲಾಲ್ ಪೆರ್ನೆ, ಧಾರ್ಮಿಕ ಕ್ಷೇತ್ರದ ವಿಶೇಷ ಸಾಧಕದ ಕೌಶಿಕ್ ಆಚಾರ್ಯ ಬಂಟ್ವಾಳ ರವರನ್ನು ಸಮ್ಮಾನಿಸಲಾಯಿತು.
ಬೆಳ್ಳಿಹಬ್ಬ ಸಮಿತಿ ಕಾರ್ಯಾಧ್ಯಕ್ಷ ಅಶೋಕ್ ಶೆಟ್ಟಿ ಸರಪಾಡಿ ಸ್ವಾಗತಿಸಿದರು. ಕ್ಷೇತ್ರದ ಟ್ರಸ್ಟಿ ತಾರಾನಾಥ ಕೊಟ್ಟಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ದೇವಪ್ಪ ಕುಲಾಲ್ ಪಂಜಿಕಲ್ಲು ವಂದಿಸಿದರು. ಎಚ್.ಕೆ.ನಯನಾಡು ಕಾರ್ಯಕ್ರಮ ನಿರೂಪಿಸಿದರು