ಜಿಲ್ಲಾ ಉಪಾಧ್ಯಕ್ಷ: ಡಾ.ರಾಜಾರಾಂ ಕೆ.ಬಿ, ತಾ.ಅಧ್ಯಕ್ಷ:ಕೇಶವ ಪೂಜಾರಿ, ಗೌರವಾಧ್ಯಕ್ಷ:ವಿಜಯಕುಮಾರ್ ಸೊರಕೆ ಆಯ್ಕೆ
ಪುತ್ತೂರು:ಬಿಲ್ಲವ ಯುವ ಸಮುದಾಯದ ಮನಪರಿವರ್ತನೆಗೆ ಕರಾವಳಿ ಭಾಗದ ಪ್ರತಿ ಗ್ರಾಮದಲ್ಲೂ ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠ, ಈಡಿಗ ಬಿಲ್ಲವ ನಾಮಧಾರಿ ರಾಷ್ಟ್ರೀಯ ಮಹಾಮಂಡಳಿಯ ಪದಾಧಿಕಾರಿಗಳನ್ನು ನೇಮಿಸಲಾಗುತ್ತಿದ್ದು, ಜಿಲ್ಲಾ ಉಪಾಧ್ಯಕ್ಷರಾಗಿ ಡಾ.ರಾಜಾರಾಂ ಕೆ.ಬಿ, ಪುತ್ತೂರು ತಾಲೂಕು ಸಮಿತಿಯ ಅಧ್ಯಕ್ಷರಾಗಿ ಕೇಶವ ಪೂಜಾರಿ ಬೆದ್ರಾಳ ಹಾಗೂ ಗೌರವಾಧ್ಯಕ್ಷರಾಗಿ ವಿಜಯಕುಮಾರ್ ಸೊರಕೆರವರನ್ನು ಕಲಬುರಗಿ ಮಠದ ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠಾಧಿಪತಿ ಶ್ರೀ ಪ್ರಣವಾನಂದ ಸ್ವಾಮೀಜಿ ಇವರು ನೇಮಕ ಮಾಡಿರುತ್ತಾರೆ.
ಜಿಲ್ಲಾ ಉಪಾಧ್ಯಕ್ಷರಾದ ಡಾ.ರಾಜಾರಾಂ ಕೆ.ಬಿರವರು ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾಗಿ, ಉಪ್ಪಿನಂಗಡಿ ರೋಟರಿ ಕ್ಲಬ್ ಹಾಗೂ ಜೇಸಿಐನ ಮಾಜಿ ಅಧ್ಯಕ್ಷರಾಗಿ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರಾಗಿ, ಇಂಡಿಯನ್ ಡೆಂಟಲ್ ಅಸೋಸಿಯೇಶನ್(ಐಡಿಎ)ನ ಮಾಜಿ ಅಧ್ಯಕ್ಷರಾಗಿ, ವಿಟ್ಲ-ಉಪ್ಪಿನಂಗಡಿ ಕಾಂಗ್ರೆಸ್ ಅಧ್ಯಕ್ಷರಾಗಿ, ಶ್ರೀ ಕ್ಷೇತ್ರ ಗೆಜ್ಜೆಗಿರಿ ಸಮಿತಿಯ ಟ್ರಸ್ಟ್ ಸದಸ್ಯರಾಗಿ ಸೇವೆ ಸಲ್ಲಿಸಿರುತ್ತಾರೆ.
ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ನಂದಿಕೇಶ್ವರ ಎಲೆಕ್ಟ್ರಿಕಲ್ಸ್ ಮಾಲಕ ಕೇಶವ ಪೂಜಾರಿ ಬೆದ್ರಾಳರವರು ಕಳೆದ 23 ವರ್ಷಗಳಿಂದ ಪುತ್ತೂರು ಬಿಲ್ಲವ ಸಂಘದ ಸಕ್ರಿಯ ಸದಸ್ಯರಾಗಿ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿರುತ್ತಾರೆ. ಸುಮಾರು 10 ವರ್ಷಗಳ ಕಾಲ ಚಿಕ್ಕಮುಡ್ನೂರು ಬಿಲ್ಲವ ಗ್ರಾಮ ಸಮಿತಿಯ ಅಧ್ಯಕ್ಷರಾಗಿ, ಪುತ್ತೂರು ಬಿಲ್ಲವ ನಗರ ಸಮಿತಿ ಅಧ್ಯಕ್ಷರಾಗಿ, ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷರಾಗಿ, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯಾಗಿ, ಗುರು ಮಂದಿರದ ಸದಸ್ಯರಾಗಿ, ಬಿಲ್ಲವ ಸಂಘದ ಜೊತೆ ಕಾರ್ಯದರ್ಶಿಯಾಗಿ ಮತ್ತು ಕಾರ್ಯದರ್ಶಿಯಾಗಿ, ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ, ಪುತ್ತೂರ್ದ ಮುತ್ತು ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ, ವಿದ್ಯುತ್ ಗುತ್ತಿಗೆದಾರರ ಸ0ಘದ ಉಪಾಧ್ಯಕ್ಷರಾಗಿ, ಸಿಡ್ಕೋ ಬ್ಯಾಂಕ್ ಇದರ ನಿರ್ದೇಶಕರಾಗಿ, ನಂದಿಕೇಶ್ವರ ಭಜನಾ ಮಂದಿರದ ಗೌರವ ಸಲಹೆಗಾರರಾಗಿ, ಪುತ್ತೂರು ನಗರ ಸಭೆಯ ನಾಮನಿರ್ದೇಶಿತ ಸದಸ್ಯರಾಗಿ ಜವಾಬ್ದಾರಿ ವಹಿಸಿಕೊಂಡು ಸೇವೆ ಸಲ್ಲಿಸಿರುತ್ತಾರೆ.
ತಾಲೂಕು ಗೌರವಾಧ್ಯಕ್ಷರಾಗಿ ಆಯ್ಕೆಯಾದ ವಿಜಯಕುಮಾರ್ ಸೊರಕೆಯವರು ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯರಾಗಿ, ಪುತ್ತೂರು ಬಿಲ್ಲವ ಸಂಘದ ಮಾಜಿ ಅಧ್ಯಕ್ಷರಾಗಿ, ಜಿಲ್ಲಾ ಮೂರ್ತೆದಾರರ ಮಹಾಮಂಡಳಿಯ ಮಾಜಿ ಅಧ್ಯಕ್ಷರಾಗಿ, ಗೋಕರ್ಣನಾಥೇಶ್ವರ ಕೋ-ಆಪರೇಟಿವ್ ಬ್ಯಾಂಕಿನ ನಿರ್ದೇಶಕರಾಗಿ, ನರಿಮೊಗರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತಿದ್ದಾರೆ.