ಉಪ್ಪಿನಂಗಡಿ: ಇಲ್ಲಿನ ಇಂದ್ರಪ್ರಸ್ಥ ಶಿಕ್ಷಣ ಸಂಸ್ಥೆಗಳಲ್ಲಿ, ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಶಿಬಿರ “ಅಂಕುರ”ದ ಉದ್ಘಾಟನಾ ಸಮಾರಂಭವು ಜರಗಿತು. ಪ್ರಸಕ್ತ ಶೈಕ್ಷಣಿಕ ಸಾಲಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆಸುವ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಕ್ರಮವು ಇದಾಗಿದ್ದು ವಿವಿಧ ಹಂತಗಳಲ್ಲಿ ಕಾರ್ಯಾಗಾರವು ನಡೆಯಲಿದೆ.
ನಿವೃತ್ತ ಸಸ್ಯಶಾಸ್ತ್ರ ವಿಜ್ಞಾನಿ ಶ್ರೀಯುತ ಕೆಎನ್ ಸುಬ್ರಹ್ಮಣ್ಯ ಭಟ್ ಹಾಗೂ ಶ್ರೀಯುತ ಪ್ರಣವ್ ಭಟ್, ಯಶಸ್ ಸ್ಟಡಿ ಸೆಂಟರ್ ಪುತ್ತೂರು, ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು. ಇಂದ್ರಪ್ರಸ್ಥ ಸಂಸ್ಥೆಗಳ ಸಂಚಾಲಕರಾದ ಶ್ರೀ ಯುಜಿ ರಾಧ ಮಾತನಾಡಿ, ವಿದ್ಯಾರ್ಥಿಗಳಿಗೆ
ಶುಭಕೋರುವುದರೊಂದಿಗೆ ಈ ಕಾರ್ಯಾಗಾರದ ಸದುಪಯೋಗ ಪಡಿಸಿಕೊಳ್ಳುವಂತೆ ಕೋರಿದರು.
ಇಂದ್ರಪ್ರಸ್ಥ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಎಚ್‌ಕೆ ಪ್ರಕಾಶ್ ಮಾತನಾಡಿ, “ಅಂಕುರ” ತರಬೇತಿಯ ಸ್ಥೂಲ ಪರಿಚಯ ನೀಡಿದರು. ಈ ಶಿಬಿರವು ರಾಷ್ಟ್ರಮಟ್ಟದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತರಬೇತುಗೊಳಿಸುವುದಲ್ಲದೇ, ಆಧುನಿಕ ಯುಗದ ಅಗತ್ಯತೆಗಳಾದ ಕೃತಕ ಬುದ್ಧಿಮತ್ತೆ ಸೇರಿದಂತೆ ಇತರ ವಿಷಯಗಳನ್ನೂ ಒಳಗೊಳ್ಳಲಿದೆ ಎಂದರು. ಇಂದ್ರಪ್ರಸ್ಥ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಕರುಣಾಕರ ಸುವರ್ಣ, ವಿದ್ಯಾಲಯದ ಮುಖ್ಯಶಿಕ್ಷಕಿ ಶ್ರೀಮತಿ ವೀಣಾ ಆರ್ ಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಾಪಕಿ ಶ್ರೀಮತಿ ನಿಶಿತಾ ಕೆಕೆ ಕಾರ್ಯಕ್ರಮ ನಿರೂಪಿಸಿದರು.