ಆ.28ರ ಪುತ್ತೂರಿನ ಪ್ರತಿಭಟನೆಗೆ ಬೆಂಬಲ – ವಿಶ್ವನಾಥ ಗೌಡ
ಪುತ್ತೂರು: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕುರಿತು ಹಿಂದಿನ ತನಿಖಾಧಿಕಾರಿಗಳನ್ನು ಮಂಪರು ಪರೀಕ್ಷೆಗೊಳಪಡಿಸುವ ಮೂಲಕ ಮರುತನಿಖೆ ಮಾಡದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಒಕ್ಕಲಿಗ ಗೌಡ ಸೇವಾ ಸಂಘ ಎಚ್ಚರಿಕೆ ನೀಡಿದೆ. ಈ ನಡುವೆ ಆ.28ರಂದು ಪುತ್ತೂರಿನಲ್ಲಿ ನಡೆಯುವ ಪ್ರತಿಭಟನೆಗೆ ಸಂಘದಿಂದ ಬೆಂಬಲ ನೀಡಲಾಗುವುದು ಎಂದು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಬೆಳ್ತಂಗಡಿಯ ಉಜಿರೆಯಲ್ಲಿ 2011ರಲ್ಲಿ ನಡೆದ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ನಂತರ ನಡೆದ ಕೊಲೆ ಪ್ರಕರಣದಲ್ಲಿ ಬಂಧಿತವಾದ ಆರೋಪಿಯನ್ನು ನಿರಪರಾಧಿಯೆಂದು ನ್ಯಾಯಾಲಯ ಘೋಷಿಸಿದ್ದು, ನೈಜ ಆರೋಪಿಗಳು ಯಾರೆಂದು ಇಲ್ಲಿಯವರೆಗೂ ಗೊತ್ತಾಗಿಲ್ಲ. ಆದ್ದರಿಂದ ಈ ಪ್ರಕರಣವನ್ನು ಮರು ತನಿಖೆ ನಡೆಸಿ ನೈಜ ಅಪರಾಧಿಯನ್ನು ಪತ್ತೆ ಹಚ್ಚಿ ಸೂಕ್ತ ಶಿಕ್ಷೆ ನೀಡುವಂತೆ ಈಗಾಗಲೇ ಹಲವು ಸಂಘಟನೆಗಳು ಮತ್ತು ಸಾರ್ವಜನಿಕರು ಹೋರಾಟ ಮಾಡುತ್ತಾ ಬಂದಿದ್ದಾರೆ. ಮರು ತನಿಖೆ ಮಾಡದೆ ಇದ್ದಲ್ಲಿ ಒಕ್ಕಲಿಗ ಗೌಡ ಸಮಾಜ ಜಿಲ್ಲಾ ಸಮಿತಿಯಿಂದ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಮಾಡಲಾಗುವುದು. ಈ ಕುರಿತು ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕು ಗೌಡ ಸಮಿತಿಗಳ ಜಿಲ್ಲಾ ಒಕ್ಕೂಟವನ್ನು ರಚನೆ ಮಾಡಲಾಗಿದ್ದು, ಈ ಸಮಿತಿಯ ಮೂಲಕ ಮುಂದಿನ ಹೋರಾಟದ ರೂಪುರೇಷೆಗಳನ್ನು ಮಾಡಲಾಗುವುದು. ಆ.28ರಂದು ಸಂಜೆ ಪುತ್ತೂರು ಗೌಡ ಸಮುದಾಯ ಭವನದಲ್ಲಿ ಪೂರ್ವ ಭಾವಿ ಸಭೆಯು ನಡೆಯಲಿದೆ ಎಂದು ಅವರು ಹೇಳಿದರು.
ಆ.28ರ ಪ್ರತಿಭಟನೆಗೆ ಬೆಂಬಲ
ಸೌಜನ್ಯ ಪ್ರಕರಣದ ಮರುತನಿಖೆಯನ್ನು ಆಗ್ರಹಿಸಿ ಅಭಿನವ ಭಾರತ ಮಿತ್ರ ಮಂಡಳಿ ಮತ್ತು ಪ್ರಜಾಪ್ರಭುತ್ವ ವೇದಿಕೆ ಬೆಳ್ತಂಗಡಿ ಇದರ ನೇತೃತ್ವದಲ್ಲಿ ಆ.28ರಂದು ಪುತ್ತೂರಿನಲ್ಲಿ ನಡೆಯುವ ಬೃಹತ್ ಪ್ರತಿಭಟನೆಗೆ ಒಕ್ಕಲಿಗ ಗೌಡ ಸೇವಾ ಸಂಘ ಸಂಪೂರ್ಣ ಬೆಂಬಲ ನೀಡಲಿದೆ. ಸಂಘಟಕರು ಈಗಾಗಲೇ ಗೌಡ ಸಂಘಕ್ಕೆ ಮನವಿ ನೀಡಿದ್ದು, ಅದರಂತೆ ಸಂಘದಿಂದ ಪೂರ್ಣ ಬೆಂಬಲ ನೀಡಲಾಗುವುದು ಎಂದು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನಕಾರ್ಯದರ್ಶಿ ಸುಂದರ ಗೌಡ ನಡುಬೈಲು, ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಎ.ವಿ.ನಾರಾಯಣ, ಗೌಡ ಮಹಿಳಾ ಸಂಘದ ಅಧ್ಯಕ್ಷೆ ಮೀನಾಕ್ಷಿ ಡಿ ಗೌಡ, ಸುರೇಶ್ ಗೌಡ ಕಲ್ಲಾರೆ, ಲಿಂಗಪ್ಪ ಗೌಡ ತೆಂಕಿಲ, ಶ್ರೀಧರ ಗೌಡ ಕಣಜಾಲು, ದಯಾನಂದ ಕೆ.ಎಸ್ ಉಪಸ್ಥಿತರಿದ್ದರು.
ನ್ಯಾಯ ಸಿಗುವ ತನಕ ಹೋರಾಟ
ಸೌಜನ್ಯ ಪ್ರಕರಣದಲ್ಲಿ ಇಲ್ಲಿನ ತನಕ ಸರಿಯಾದ ತನಿಖೆ ನಡೆದಿಲ್ಲ. ಈ ನಿಟ್ಟಿನಲ್ಲಿ ಪ್ರಕರಣಕ್ಕೆ ಸಂಬಂಧಿಸಿ ಆಗಿನ ತನಿಖಾಧಿಕಾರಿಗಳು ಯಾರಿದ್ದಾರೋ ಅವರನ್ನೆಲ್ಲ ಮಂಪರು ಪರೀಕ್ಷೆಗೊಳಪಡಿಸಬೇಕು ಎಂದು ನಾವು ಆಗ್ರಹಿಸುತ್ತೇವೆ.
ಜಿಲ್ಲಾ ಮಟ್ಟದ ಧರಣಿ ಸತ್ಯಾಗ್ರಹ ಒಂದು ವಾರ ನಿರಂತರ ನಡೆಯಲಿದೆ. ಜಿಲ್ಲೆಯ 8 ತಾಲೂಕಿನಿಂದ ಒಂದೊಂದು ದಿನ ಧರಣಿಯಲ್ಲಿ ಭಾಗವಹಿಸಲಿದ್ದು, ಸೌಜನ್ಯಳಿಗೆ ನ್ಯಾಯ ಸಿಗುವ ತನಕ ನಮ್ಮ ಹೋರಾಟ ನಡೆಯಲಿದೆ ಎಂದು ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಉಪಾಧ್ಯಕ್ಷ ಚಿದಾನಂದ ಬೈಲಾಡಿ ಹೇಳಿದರು.