ಕೊಲೆಯಾದ ಗೌರಿ ಮನೆಗೆ ಶಾಸಕರ ಭೇಟಿ – ಕಾನೂನಿಗೇ ಬದಲಾವಣೆ ಅಗತ್ಯವಿದೆ – ಅಶೋಕ್ ಕುಮಾರ್ ರೈ

0

ಪುತ್ತೂರು: ಆ.24ರಂದು ಚೂರಿ ಇರಿತಕ್ಕೊಳಗಾಗಿ ಮೃತಪಟ್ಟ ಯುವತಿ ಕುದ್ದುಪದವು ಆದಾಳ ನಿವಾಸಿ ಗೌರಿಯವರ ಮನೆಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರು ಭೇಟಿ ನೀಡಿ, ಮನೆಮಂದಿಗೆ ಸಾಂತ್ವನ ಹೇಳಿದರು. ಈ ವೇಳೆ ಮೃತ ಗೌರಿಯವರ ತಾಯಿ ಸೀತಾ ಅವರು ಶಾಸಕರಿಗೆ ಘಟನೆಯ ಬಗ್ಗೆ ವಿವರಿಸಿದರು. ಮನೆಮಂದಿಯಿಂದ ಮಾಹಿತಿ ಪಡೆದ ಶಾಸಕರು ವೈಯಕ್ತಿಕ ನೆಲೆಯಲ್ಲಿ ಕುಟುಂಬಕ್ಕೆ ಧನಸಹಾಯ ನೀಡಿದರು.


ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಶಾಸಕ ಅಶೋಕ್ ರೈಯವರು, ಯುವತಿ ಗೌರಿಯ ಹತ್ಯೆ ಮಾಡಿರುವುದು ಅಮಾನುಷ ಕೃತ್ಯ. ಎಲ್ಲಿಯೂ ಇಂತಹ ಕೃತ್ಯಗಳು ನಡೆಯಬಾರದು. ಮಾದಕದ್ರವ್ಯ ತೆಗೆದುಕೊಂಡರೆ ಮಾತ್ರ ಇಂತಹ ಕೃತ್ಯ ಮಾಡಲು ಸಾಧ್ಯ ಎನ್ನುವುದು ನನ್ನ ಅನಿಸಿಕೆ. ಇಂದು ಯುವಕರು ಮಾದಕದ್ರವ್ಯ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಇಲ್ಲದಿದ್ದರೆ ಇಂತಹ ಅಮಾನುಷ ಕೃತ್ಯವನ್ನು ಮಾಡಲು ಸಾಧ್ಯವಿಲ್ಲ. ಇವೆಲ್ಲವನ್ನು ನೋಡುವಾಗ ಕಾನೂನಿಗೇ ಬದಲಾವಣೆ ತರುವ ಅಗತ್ಯ ಇದೆ ಎನ್ನುವುದು ನನ್ನ ಭಾವನೆ. ಬೇರೆ ದೇಶಗಳಲ್ಲಿ ನಡುರಾತ್ರಿಯೂ ಮಹಿಳೆಯರು ಒಬ್ಬಂಟಿಯಾಗಿ ತಿರುಗಾಡುವ ವ್ಯವಸ್ಥೆ ಇದೆ. ನಮ್ಮಲ್ಲಿ ಕೇಸ್ ಕೊಡಲು ಹೋಗುವಾಗಲೂ ಈ ರೀತಿಯಾದ್ರೆ ಹೇಗೆ? ಕೊಲೆ ಮಾಡಿದವರು ಕೆಲ ಸಮಯದಲ್ಲೇ ಹೊರಗೆ ಬರುತ್ತಾರೆ. ಹೊರಬಂದು ರಾಜಾರೋಷವಾಗಿ ತಿರುಗಾಡುತ್ತಾರೆ. ಇಂತಹವರಿಗೆ ಮರಣದಂಡನೆ ಕೊಡುವ ಕೆಲಸ ಆಗಬೇಕು. ದುಬೈನಲ್ಲಿ ಇಂತಹ ಪ್ರಕರಣಗಳಿಗೆ ಒಂದು ವಾರದಲ್ಲೇ ಮರಣದಂಡನೆ ನೀಡುತ್ತಾರೆ. ಸಮಾಜ ಕೂಡ ಇಂತಹ ಕೃತ್ಯಗಳನ್ನು ಖಂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಕುಟುಂಬಕ್ಕೆ ಸ್ಪಂದನೆ ನೀಡುವ ಕೆಲಸವನ್ನು ನಾವು ಮಾಡುತ್ತೇವೆ. ಜನಪ್ರತಿನಿಧಿಗಳು ಚುನಾವಣೆ ನಡೆಯುವಾಗ ಬರುತ್ತೇವೆ. ಮತ ಕೇಳಿ ಹೋದವರು ಮತ್ತೆ ಆಚೆಯೇ ಹೋಗುತ್ತೇವೆ. ಆದರೆ ನಾವು ಇವರ ಜೊತೆಗೆ ನಿಂತು ಸ್ಪಂದನೆ ನೀಡುತ್ತೇವೆ. ಮಾದಕದ್ರವ್ಯ ಸಾಗಾಟ ತಡೆಗಟ್ಟುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇವೆ ಎಂದು ಶಾಸಕರು ಹೇಳಿದರು.


ಎಸ್ಪಿ ಗಮನಕ್ಕೆ ತಂದು ಸಿಸಿ ಟಿವಿ ಹಾಕಿಸುತ್ತೇನೆ:
ಮಹಿಳಾ ಠಾಣೆ ಬಳಿ ಸಿಸಿಟಿವಿ ಇಲ್ಲದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಸಿಸಿಟಿವಿ ಹಾಕಲೇಬೇಕು. ಇಲ್ಲದಿದ್ದಲ್ಲಿ ಎಸ್ಪಿ ಗಮನಕ್ಕೆ ತಂದು ಹಾಕಿಸುತ್ತೇವೆ. ಎಸ್ಪಿಯವರನ್ನು ಪುತ್ತೂರಿಗೆ ಬರುವಂತೆ ಸೂಚನೆ ನೀಡಿದ್ದೇವೆ. ಅದಕ್ಕೆ ಅವರಿಂದ ಪೂರಕ ಸ್ಪಂದನೆ ದೊರೆತಿದೆ. ಪ್ರತೀ ಮಂಗಳವಾರ ಬೆಳಗ್ಗಿನಿಂದ ಸಂಜೆಯವರೆಗೆ ಪುತ್ತೂರಿನಲ್ಲಿ ನಿಲ್ಲುವ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದರು. ಪೊಲೀಸ್ ಠಾಣೆ ಆವರಣದಲ್ಲೇ ನಡೆದ ಘಟನೆ ಪೊಲೀಸರಿಗೆ ಅರಿವಿಗೆ ಬಾರದಿರುವ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಅಲ್ಲಿ ವಾಹನಗಳ ಓಡಾಟ ಹೆಚ್ಚಿದ್ದ ಕಾರಣ ಯುವತಿಯ ಬೊಬ್ಬೆ ಕೇಳಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಯ ಕೃತ್ಯ ಪೂರ್ವನಿಯೋಜಿತ ಆಗಿದ್ದರಿಂದ ಆಕಸ್ಮಿಕ ಎನ್ನುವಂತೆ ಘಟನೆ ನಡೆದಿದೆ. ಪೊಲೀಸರಿಗೆ ಈ ಬಗ್ಗೆ ಎಚ್ಚರಿಕೆ ನೀಡಿದ್ದೇವೆ ಎಂದು ಶಾಸಕ ಅಶೋಕ್ ರೈ ಹೇಳಿದರು.


ಇದೇ ವೇಳೆ ಮೃತ ಯುವತಿ ಗೌರಿಯವರ ವಿಕಲಚೇತನೆಯಾಗಿರುವ ದೊಡ್ಡಮ್ಮ ಶ್ರೀದೇವಿಯವರ ಅನಾರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡ ಶಾಸಕರು ಆಧಾರ್ ಕಾರ್ಡ್ ಮಾಡಿಸಿಕೊಟ್ಟು ಪಿಂಚಣಿ ಸೇರಿದಂತೆ ಸರಕಾರಿ ಸೌಲಭ್ಯಗಳನ್ನು ದೊರಕಿಸಿಕೊಡುವ ಬಗ್ಗೆ ಭರವಸೆ ನೀಡಿದರು. ಇದೇ ವೇಳೆ ಮೃತ ಯುವತಿಯ ಮನೆಯವರು ಸರಕಾರದಿಂದ ಸೂಕ್ತ ಪರಿಹಾರ ದೊರಕಿಸಿಕೊಡುವಂತೆ ಸರಕಾರಕ್ಕೆ ಶಾಸಕರ ಮೂಲಕ ಮನವಿ ಸಲ್ಲಿಸಿದರು.


ಈ ಸಂದರ್ಭದಲ್ಲಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ., ಮಾಜಿ ಜಿ.ಪಂ. ಉಪಾಧ್ಯಕ್ಷ ಎಂ.ಎಸ್. ಮಹಮ್ಮದ್, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಕಾರ್ಯದರ್ಶಿ ನಝೀರ್ ಮಠ, ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಕಾಂಗ್ರೆಸ್ ಮುಖಂಡರಾದ ಪ್ರಹ್ಲಾದ್ ಬೆಳ್ಳಿಪ್ಪಾಡಿ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ಶಾಸಕರಿಂದ ಮನೆಮಂದಿಗೆ ಸಾಂತ್ವನ ಹೇಳಿ ವೈಯಕ್ತಿಕ ನೆಲೆಯಲ್ಲಿ ಧನಸಹಾಯ ಮಾಡಿದರು.

ಪದ್ಮರಾಜೆ’ಪದ್ಮಣ್ಣೆ’ ಆಪೆ..!
ಆರೋಪಿಗೆ ಹೇಗಾದರೂ ಶಿಕ್ಷೆ ಕೊಡಿಸಲೇಬೇಕು. ಆತನನ್ನು ಬಿಟ್ರೆ ಇನ್ನೂ ಹೀಗೆಯೇ ಮಾಡುತ್ತಾನೆ. ಇಷ್ಟು ಸಣ್ಣ ಹುಡುಗಿ ಸತ್ತ ಮೇಲೆ ಆತನೂ ಹೋಗಬೇಕು ಎಂದು ಶಾಸಕರಿಗೆ ಮೃತ ಗೌರಿಯವರ ತಾಯಿ ಸೀತಾ ಅವರು ಮನವಿ ಸಲ್ಲಿಸಿದರು. ಈ ವೇಳೆ ಅವರಿಗೆ ಉತ್ತರಿಸಿದ ಶಾಸಕರು, ನಮ್ಮಲ್ಲಿರುವುದು ಹಳೆಯ ಕಾನೂನು. ಕೊಲೆ ಮಾಡಿದವರು 6 ತಿಂಗಳಲ್ಲಿ ಹೊರಗೆ ಬರುತ್ತಾರೆ. ಹಾಗೆ ಬರುವಾಗ ಪದ್ಮರಾಜೆ’ ಎಂದಿರುವವನುಪದ್ಮಣ್ಣೆ’ ಆಗುತ್ತಾನೆ. ಇದು ನಮ್ಮ ಜನರ ಪರಿಸ್ಥಿತಿ. ಇದು ಕಡಿಮೆಯಾಗಬೇಕು. ಒಂದೆರಡು ಜನರಿಗೆ ಮರಣದಂಡನೆ ಶಿಕ್ಷೆಯಾದರೆ ಇದೆಲ್ಲವೂ ನಿಲ್ಲುತ್ತದೆ. ಕೆಲವೊಂದು ಬೇರೆ ಕೇಸ್‌ಗಳಲ್ಲಿ ಶಿಕ್ಷೆ ಆಗಲು 15 ವರ್ಷ ಬೇಕಾಗುತ್ತದೆ. ಆದರೆ ಇಂತಹ ಕೇಸ್‌ಗಳಲ್ಲಿ 1 ವರ್ಷದೊಳಗೆ ಆದರೂ ಶಿಕ್ಷೆ ನೀಡಿದರೆ ಕಾನೂನಿನ ಬಗ್ಗೆ ಭಯ ಬರುತ್ತದೆ. ಕಾನೂನು ಮಾಡುವುದು ನಾವೇ ಜನಪ್ರತಿನಿಧಿಗಳು. ಕಾನೂನು ಬದಲಾವಣೆ ಮಾಡುವ ಅವಶ್ಯಕತೆ ಇದೆ ಎಂದು ಶಾಸಕರು ಉತ್ತರಿಸಿದರು.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here