ಸಮಾವರ್ತನ' ಸ್ವಉದ್ಯೋಗದತ್ತ ಯೋಚಿಸಿದರೆ ಉತ್ತಮ ಭವಿಷ್ಯ-ಬಲರಾಮ
ಪುತ್ತೂರು: ದೇಶದ ಅಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ ಬಹು ದೊಡ್ಡದು. ನಮ್ಮ ದೇಶ ಈಗ ಅಮೃತ ಕಾಲದಲ್ಲಿದೆ ಉದ್ಯೋಗಕ್ಕೆ ವಿಫುಲ ಅವಕಾಶಗಳನ್ನು ತೆರೆದಿಡುತ್ತಿದೆ. ಇದರ ಜತೆಗೆ ವಿದ್ಯಾರ್ಥಿಗಳು ಸ್ವ ಉದ್ಯೋಗವನ್ನು ಕೈಗೊಳ್ಳುವ ದೃಷಿಯಿಂದ ಯೋಚಿಸಿದರೆ ಉತ್ತಮ ಭವಿಷ್ಯವನ್ನು ಕಂಡುಕೊಳ್ಳಬಹುದು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಬಲರಾಮ ಆಚಾರ್ಯ ಹೇಳಿದರು. ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ 2022-23ನೇ ಸಾಲಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ನಡೆಸಿದ ಇಂಜಿನಿಯರಿಂಗ್ ವಿಭಾಗಗಳ ಅಂತಿಮ ವರ್ಷದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಪದವೀಧರರಾದ ಅರ್ಹ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಕಾರ್ಯಕ್ರಮ
ಸಮಾವರ್ತನ’ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದು ನಾವು ಚಂದ್ರಯಾನ-3ರ ಯಶಸ್ಸನ್ನು ಕಂಡಿದ್ದೇವೆ ಇದರ ಹಿಂದೆ ಅಸಂಖ್ಯಾತ ವಿಜ್ಞಾನಿಗಳ ಮತ್ತು ತಂತ್ರಜ್ಞರ ಶ್ರಮ ಅಡಗಿದೆ ಅದೇ ರೀತಿ ಯುವ ಇಂಜಿನಿಯರುಗಳಾದ ತಾವು ಉನ್ನತ ಸಾಧನೆಯನ್ನು ಮಾಡಿ ಯಶಸ್ಸನ್ನು ಗಳಿಸಿ ಎಂದು ಅವರು ಹಾರೈಸಿದರು.
ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗದಲ್ಲಿ 4ನೇ ರ್ಯಾಂಕ್ ಗಳಿಸಿರುವ ಜಾಗೃತಿ.ಜೆ.ನಾಯಕ್ ಹಾಗೂ ಏಳನೇ ರ್ಯಾಂಕ್ ಗಳಿಸಿರುವ ದಿವ್ಯಶ್ರೀ.ಎಸ್ ಅವರನ್ನು ಶಾಲು ಹೊದಿಸಿ, ಕಾಲೇಜಿನ ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್ ಅವರು ವೈಯಕ್ತಿಕವಾಗಿ ನೀಡಿದ ಚಿನ್ನದ ನಾಣ್ಯವನ್ನಿತ್ತು ಸನ್ಮಾನಿಸಲಾಯಿತು.
ಶೈಕ್ಷಣಿಕವಾಗಿ ವಿಶೇಷ ಸಾಧನೆಯನ್ನು ಮಾಡಿದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಹಾಗೂ ಇಂಜಿನಿಯರಿಂಗ್ ಪದವಿ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಘಟಿಕೋತ್ಸವದ ಪ್ರಮಾಣ ಪತ್ರ ನೀಡಲಾಯಿತು.
ಅತಿಥಿಗಳು ಭಾರತ ಮಾತೆಗೆ ಹಾಗೂ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ವೇದಿಕೆಗೆ ಆಗಮಿಸಿದರು.
ವೇದಿಕೆಯಲ್ಲಿ ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಯ ಕೋಶಾಧಿಕಾರಿ ಮುರಳೀಧರ ಭಟ್, ನಿರ್ದೇಶಕರಾದ ರವಿಕೃಷ್ಣ.ಡಿ.ಕಲ್ಲಾಜೆ, ಸತ್ಯನಾರಾಯಣ ಭಟ್, ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ಸ್ವಾಗತಿಸಿ, ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ವಿಭಾಗದ ಮುಖ್ಯಸ್ಥ ಡಾ.ಗೋವಿಂದರಾಜ್.ಪಿ ವಂದಿಸಿದರು. ಮೂಲವಿಜ್ಞಾನ ವಿಭಾಗದ ಉಪನ್ಯಾಸಕಿ ಪ್ರೊ.ಸೌಜನ್ಯ.ಎಂ.ಎಂ ಹಾಗೂ ಎಂಸಿಎ ವಿಭಾಗದ ಉಪನ್ಯಾಸಕಿ ಪ್ರೊ.ನೀಮಾ ಕಾರ್ಯಕ್ರಮ ನಿರ್ವಹಿಸಿದರು.