ಪುತ್ತೂರು: ಕೆಯ್ಯೂರು ಗ್ರಾಮದ ಮಾಡಾವು ಹೊಳೆಗೆ ಸೇತುವೆ ಮೇಲಿಂದ ತ್ಯಾಜ್ಯದ ಕಟ್ಟುಗಳನ್ನು ಎಸೆಯುತ್ತಿದ್ದ ಸ್ಥಳೀಯ ವ್ಯಕ್ತಿಯೋರ್ವರಿಗೆ ಕೆಯ್ಯೂರು ಗ್ರಾಮ ಪಂಚಾಯತ್ 3 ಸಾವಿರ ರೂ.ದಂಡ ವಿಧಿಸಿದ ಘಟನೆ ಆ.28 ರಂದು ನಡೆದಿದೆ.
ಮಾಡಾವು ನಿವಾಸಿ ಮೊಹಮ್ಮದ್ ಎಂಬವರು ದ್ವಿಚಕ್ರ ವಾಹನ ಸ್ಕೂಟರ್‌ನಲ್ಲಿ ಬಂದು ಕಸ,ಕಡ್ಡಿ,ತ್ಯಾಜ್ಯಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಸೇತುವೆ ಮೇಲಿಂದ ಹೊಳೆಗೆ ಎಸೆಯುತ್ತಿರುವುದನ್ನು ಗಮನಿಸಿದ ಪಂಚಾಯತ್ ಸದಸ್ಯರೋರ್ವರು ತ್ಯಾಜ್ಯ ಎಸೆಯದಂತೆ ಹೇಳಿದ್ದರು ಆದರೆ ಮೊಹಮ್ಮದ್‌ರವರು ಸರಿಯಾಗಿ ಸ್ಪಂದನೆ ನೀಡದೇ ಇದ್ದುದರಿಂದ ತಕ್ಷಣವೇ ಈ ಬಗ್ಗೆ ಪಂಚಾಯತ್ ಗಮನಕ್ಕೆ ತಂದಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಮಿತಾ ಕೆ, ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಹಾಗೂ ಸದಸ್ಯ ತಾರಾನಾಥ ಕಂಪರವರು ತ್ಯಾಜ್ಯ ಹಾಕಿದ ವ್ಯಕ್ತಿಯಿಂದಲೇ ತ್ಯಾಜ್ಯವನ್ನು ಹೆಕ್ಕಿಸಿದ್ದು ಅಲ್ಲದೆ ರೂ.3 ಸಾವಿರ ದಂಡ ವಿಧಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವುರವರು, ನೀರು ದೇವರು ನೀಡಿದ ಬಲು ದೊಡ್ಡ ಕೊಡುಗೆಯಾಗಿದೆ. ಆದ್ದರಿಂದ ಯಾರೂ ಕೂಡ ಹೊಳೆಗೆ ತ್ಯಾಜ್ಯ ಎಸೆಯಬಾರದು ಅಲ್ಲದೆ ರಸ್ತೆ ಬದಿಯಲ್ಲೂ ತ್ಯಾಜ್ಯ ಹಾಕಬಾರದು, ತ್ಯಾಜ್ಯ ಹಾಕುವುದು ಕಂಡು ಬಂದರೆ ಮುಂದಿನ ದಿನಗಳಲ್ಲಿ 5 ಸಾವಿರದ ತನಕ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ.