ಕಷ್ಟಪಟ್ಟು ಕೆಲಸ ಮಾಡಿದರೆ ಸ್ವಾವಲಂಬಿಯಾಗಿ ಬದುಕಬಹುದು-ನವೀನ್ ಭಂಡಾರಿ
ಪುತ್ತೂರು: ವಾಣಿಯನ್/ಗಾಣಿಗ ಸಮಾಜ ಸೇವಾ ಸಂಘ ಪುತ್ತೂರು, ಸೆಲ್ಕೋ ಸೋಲಾರ್ ಲೈಟ್ ಪುತ್ತೂರು ಶಾಖೆ ಹಾಗೂ ಪುತ್ತೂರು ತಾಲೂಕಿನ ವಿಕಲಚೇತನಾ ಸೇವಾ ವಿಭಾಗ ಸಹಯೋಗದೊಂದಿಗೆ ಸೋಲಾರ್ ಆಧಾರಿತ ಸ್ವ ಉದ್ಯೋಗ ತರಬೇತಿ ಕಾರ್ಯಾಗಾರ ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಪುತ್ತೂರು ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ನವೀನ್ ಕುಮಾರ್ ಭಂಡಾರಿ ಎಚ್.ರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕಷ್ಟಪಟ್ಟು ಕೆಲಸ ಮಾಡಿದರೆ ಸ್ವಾವಲಂಬಿಯಾಗಿ ಬದುಕಬಹುದು. ದೇವರು ಕೊಟ್ಟ ವೈಫಲ್ಯಗಳನ್ನು ಮೆಟ್ಟಿ ನಿಲ್ಲಬೇಕು. ಸಮಾಜದಲ್ಲಿ ವಿಕಲಚೇತನರು ಕೂಡ ಮುಂದೆ ಬರಬೇಕು. ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಸೆಲ್ಕೋ ಸಂಸ್ಥೆಯು ಈಗಾಗಲೇ ಹಲವು ಸೌಲಭ್ಯಗಳನ್ನು ಶಾಲೆ ಸೇರಿದಂತೆ ಕೆಲವು ಕಡೆ ನೀಡುತ್ತಿದೆ. ಇವುಗಳ ಸದುಪಯೋಗ ಪಡೆದುಕೊಳ್ಳಿ ಎಂದರು. ಪುತ್ತೂರು ವಾಣಿಯನ್/ಗಾಣಿಗ ಸಮಾಜ ಸೇವಾ ಸಂಘದ ಸ್ಥಾಪಕಾಧ್ಯಕ್ಷ ತಿಮ್ಮಪ್ಪ ಪಾಟಾಳಿ ಮಾತನಾಡಿ ಸೆಲ್ಕೋ ಸಂಸ್ಥೆ ನೀಡುವ ಸ್ವ-ಉದ್ಯೋಗ ತರಬೇತಿಯ ಪ್ರಯೋಜನ ಪಡೆದುಕೊಳ್ಳಿ ಎಂದರು. ಪುತ್ತೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ ಎಸ್. ಮಾತನಾಡಿ ಸೆಲ್ಕೋ ಸಂಸ್ಥೆಯು ಪರಿಸರ ಸ್ನೇಹಿ ಸೋಲಾರ್ ಆಧಾರಿತ ಯೋಜನೆ ನೀಡುತ್ತಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯಗಳು ಸಿಗಬೇಕು. ಎಲ್ಲಾ ವಿಕಲಚೇತನರು ಈ ಸೌಲಭ್ಯಗಳನ್ನು ಪಡೆದುಕೊಳ್ಳಿ ಎಂದು ಹೇಳಿ ಸೆಲ್ಕೋ ಸಂಸ್ಥೆ ಹಾಗೂ ವಾಣಿಯನ್ ಗಾಣಿಗ ಸಂಘಕ್ಕೆ ಕೃತಜ್ಞತೆ ಸಲ್ಲಿಸಿದರು. ಪುತ್ತೂರು ವಿಕಲಚೇತನರ ಇಲಾಖೆಯ ನೋಡಲ್ ಅಧಿಕಾರಿ ಭಾರತಿ ಜೆ.ಎ. ಮಾತನಾಡಿ ವಿಕಲಚೇತನ ಎನ್ನುವ ಮನೋಭಾವನೆ ನಿಮ್ಮ ಮನಸ್ಸಿನಲ್ಲಿ ಇರಬಾರದು. ಎಲ್ಲರ ಹಾಗೆ ನಾನೂ ಇದ್ದೇನೆ ಎಂದು ತಿಳಿದುಕೊಳ್ಳಿ. ಇವತ್ತು ಹಮ್ಮಿಕೊಂಡ ತರಬೇತಿ ಕಾರ್ಯ ಶ್ಲಾಘನೀಯ. ಈ ತರಬೇತಿ ಪಡದುಕೊಂಡು ಜೀವನದಲ್ಲಿ ನೀವೂ ಮುಂದೆ ಬನ್ನಿ ಎಂದು ಹೇಳಿದರು. ಪುತ್ತೂರು ತಾಲೂಕು ವಿಕಲಚೇತನರ ಸೇವಾ ಕೇಂದ್ರದ ಸಂಯೋಜಕ ನವೀನ್ ಕುಮಾರ್ ಮಾತನಾಡಿ ವಿಕಲಚೇತನರಿಗೆ ಇಲಾಖೆಯಿಂದ ಸಿಗುವ ಸೌಲಭ್ಯಗಳ ಮಾಹಿತಿ ನೀಡಿದರು. ಸೆಲ್ಕೋ ಸಂಸ್ಥೆಯ ಏರಿಯಾ ಮ್ಯಾನೇಜರ್ ಪ್ರಸಾದ್ ಬಿ. ಪ್ರಾಸ್ತಾವಿಕವಾಗಿ ಮಾತನಾಡಿ ಸೆಲ್ಕೋ ಸಂಸ್ಥೆ ಕಳೆದ ೨೮ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಆರೋಗ್ಯ, ಶಿಕ್ಷಣ, ಸೋಲಾರ್ ವಿಭಾಗಗಳಿಗೆ ಹಲವು ಯೋಜನೆಗಳನ್ನು ನೀಡಿದೆ. 25ಕ್ಕಿಂತ ಹೆಚ್ಚು ವಿಭಾಗಗಳಲ್ಲಿ ಸೌರಶಕ್ತಿಯಲ್ಲಿ ಸ್ವಉದ್ಯೋಗ ಮಾಡಲು ಅವಕಾಶಗಳಿವೆ. ವಿದ್ಯುತ್ ಕೊರತೆ ನೀಗಿಸಲು ಸೌರಶಕ್ತಿ ಪ್ರಯೋಜನಕಾರಿಯಾಗಿದೆ. ಸ್ವಉದ್ಯೋಗ ಮಾಡಲು ಶೇ.60ರಷ್ಟು ಸಹಾಯಧನವನ್ನು ಸೆಲ್ಕೋ ಫೌಂಡೇಶನ್ ನೀಡುತ್ತದೆ ಇದರ ಸದುಪಯೋಗ ಪಡೆಯಿರಿ ಎಂದು ಹೇಳಿದರು.
ಕಡಬ ತಾಲೂಕು ವಿಕಲಚೇತನರ ಸೇವಾ ಕೇಂದ್ರದ ಸಂಯೋಜಕಿ ಅಕ್ಷತಾ ಎ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೆಲ್ಕೋ ಸೋಲಾರ್ ಪುತ್ತೂರು ಶಾಖಾ ವ್ಯವಸ್ಥಾಪಕ ಸುಧಾಕರ ಆಳ್ವ ಸ್ವಾಗತಿಸಿ ಪುತ್ತೂರು ವಿಭಾಗದ ಕ್ಷೇತ್ರ ವ್ಯವಸ್ಥಾಪಕ ಸಂಜಿತ್ ರೈ ವಂದಿಸಿದರು. ವಿಕಲಚೇತನ ಇಲಾಖೆಯ ವಿಆರ್‌ಡಬ್ಲ್ಯೂ ಸೇಸಪ್ಪ ಕಾರ್ಯಕ್ರಮ ನಿರೂಪಿಸಿದರು. ಪುತ್ತೂರು ಮತ್ತು ಕಡಬ ತಾಲೂಕಿನ ವಿಕಲಚೇತನರಿಗೆ ತರಬೇತಿ ಕಾರ್ಯಕ್ರಮ ನಡೆಯಿತು.
ಸೆಲ್ಕೋದಿಂದ ಸ್ವಉದ್ಯೋಗಕ್ಕೆ ಉಪಯೋಗವಾಗಿದೆ…
ಸ್ವಉದ್ಯೋಗ ಮಾಡಿ ಯಶಸ್ವಿಯಾದ ಆರ್ಯಾಪು ಗ್ರಾಮದ ಕಲ್ಲರ್ಪೆ ನಿವಾಸಿ ವಿಕಲಚೇತನೆ ರೇವತಿರವರು ಅನುಭವ ತಿಳಿಸಿ ನಾನು ಕಲ್ಲರ್ಪೆಯಲ್ಲಿ ಗೂಡಂಗಡಿ ನಡೆಸುತ್ತಿರುವಾಗ ನನಗೆ ಸೋಲಾರ್ ಸಂಸ್ಥೆಯು ಸೋಲಾರ್ ಲೈಟ್ ನೀಡಿ ಪ್ರೋತ್ಸಾಹಿಸಿದೆ. ಇದರಿಂದ ನನಗೆ ಜೀವನ ನಡೆಸಲು ಉಪಯೋಗವಾಗಿದೆ ಎಂದು ಹೇಳಿ ಸಂಸ್ಥೆಗೆ ಕೃತಜ್ಷತೆ ಸಲ್ಲಿಸಿದರು.