ಪುತ್ತೂರು: ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಪುತ್ತೂರು ಇದರ ಸಹಸಂಸ್ಥೆಯಾದ ‘ನ್ಯೂಸ್ ಪುತ್ತೂರು’ ನೂತನ ಕಚೇರಿ ಸೆ.9ರಂದು ಪುತ್ತೂರು ಏಳ್ಮುಡಿಯಲ್ಲಿರುವ ಪ್ರಾವಿಡೆನ್ಸ್ ಫ್ಲಾಝಾ ದ 3ನೇ ಮಹಡಿಯಲ್ಲಿ ಶುಭಾರಂಭಗೊಳ್ಳಲಿದೆ.
ಪತ್ರಿಕಾಗೋಷ್ಠಿಯಲ್ಲಿ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಆಡಳಿತ ಮಂಡಳಿ ಅಧ್ಯಕ್ಷ ಕೆ.ರಾಜೇಂದ್ರ ಪ್ರಸಾದ್ ಶೆಟ್ಟಿಯವರು ಮಾತನಾಡಿ ಜನಮನದ ಪ್ರತಿಧ್ವನಿ ಎಂಬ ಧ್ಯೇಯ ವಾಕ್ಯದೊಂದಿಗೆ ನ್ಯೂಸ್ ಪುತ್ತೂರು ತಾಲೂಕಿನ ಸಮಗ್ರ ಸುದ್ದಿಯನ್ನು ವಿಶ್ವಾಸಾರ್ಹತೆ, ವಸ್ತುನಿಷ್ಠತೆ, ನಿಖರತೆಯೊಂದಿಗೆ ಕಳೆದ ಒಂದು ವರ್ಷದಿಂದ ಜನಮಾನಸಕ್ಕೆ ತಲುಪಿಸುವ ಮೂಲಕ ಕಾರ್ಯಾಚರಿಸುತ್ತಿದೆ. ಸಮಾರಂಭದಲ್ಲಿ ಪ್ರೇರಣಾ ಸಂಸ್ಥೆ ಪ್ರವರ್ತಿತ ವಿದ್ಯಾರ್ಥಿ ವೇತನ ವಿತರಣೆಯು 60 ಮಂದಿ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು. ಪ್ರೇರಣಾ ಸಂಸ್ಥೆಯಲ್ಲಿ ತರಬೇತಿ ಪಡೆದು ಸಿ.ಎ ಫೌಂಡೇಶನ್ ನಲ್ಲಿ ತೇರ್ಗಡೆ ಹೊಂದಿರುವವರಿಗೆ ಇದೇ ಸಂದರ್ಭದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಹವಾನಿಯಂತ್ರಿತ ಸ್ಟುಡಿಯೋವನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು ಕಚೇರಿಯನ್ನು ಉದ್ಘಾಟಿಸಲಿದ್ದಾರೆ. ಹಿಂದು ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲ ನ್ಯೂಸ್ ಪುತ್ತೂರು ಲಾಂಛನ ಬಿಡುಗಡೆಗೊಳಿಸಲಿದ್ದಾರೆ. ಸಂಪ್ಯ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಜಯಂತ ನಡುಬೈಲು ವಿದ್ಯಾರ್ಥಿವೇತನ ವಿತರಣೆ ಮಾಡಲಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಸುನೀಲ್ ಕುಮಾರ್, ನಗರಸಭೆ ಆಯುಕ್ತ ಮಧುಎಸ್ ಮನೋಹರ್ ಸಹಿತ ಅನೇಕ ಗಣ್ಯರು ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಪ್ರೇರಣಾದಲ್ಲಿ 3ಸಾವಿರ ಮಂದಿಗೆ ಮಾರ್ಗದರ್ಶಿ:
ಸಮರ್ಪಣಾ ಚಾರಿಟೇಬಲ್ ಟ್ರಸ್ಟ್‌ನ ಅಡಳಿತ ಮಂಡಳಿ ನಿರ್ದೇಶಕ ಪ್ರವೀಣ್ ಕುಂಟ್ಯಾನ ಅವರು ಮಾತನಾಡಿ ಈಗಾಗಲೇ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್‌ನ ಅಡಿಯಲ್ಲಿ ಪ್ರೇರಣಾ ಸಂಸ್ಥೆ ಕಳೆದ ಒಂದು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ 3ಸಾವಿರ ಮಕ್ಕಳಿಗೆ ಪಿಯುಸಿ ಆದ ಬಳಿಕದ ಮಾರ್ಗಸೂಚಿ ನೀಡಿದ್ದೇವೆ. ಅದರ ಜೊತೆಗೆ ಸುಮಾರು 200 ಮಕ್ಕಳಿಗೆ ಭಾಷಣಕಲೆ ಮತ್ತು ನಿರೂಪಕ ತರಬೇತಿಯನ್ನು ನೀಡಿದ್ದೇವೆ. ಅದೇ ರೀತಿ ಸುಮಾರು 22 ಮಂದಿಗೆ ಐಎಎಸ್ ತರಬೇತಿ ಕಾರ್ಯಕ್ರಮ, ಸಿ.ಎ ತರಗತಿಯನ್ನು ನೀಡಿದ್ದೇವೆ. ಹೀಗೆ ಬೇರೆ ಬೇರೆ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಬೇಕಾದ ಮಾರ್ಗದರ್ಶನ ನೀಡಿದ್ದೇವೆ ಎಂದು ಅವರು ಹೇಳಿದರು.
ರೂ. 2ಲಕ್ಷ ವಿದ್ಯಾರ್ಥಿ ವೇತನ ವಿತರಣೆ:
ಸಮರ್ಪಣಾ ಚಾರಿಟೇಬಲ್ ಟ್ರಸ್ಟ್‌ನ ಅಡಳಿತ ಮಂಡಳಿ ನಿರ್ದೇಶಕ ವಸಂತ ಎಸ್ ವೀರಮಂಗಲ ಅವರು ಮಾತನಾಡಿ ಪ್ರೇರಣಾದಲ್ಲಿ ತರಬೇತಿ ಸಂಪೂರ್ಣ ಉಚಿತವಾಗಿರುತ್ತದೆ. ಆ ಮಕ್ಕಳು ಮುಂದಿನ ಭವಿಷ ನಿರ್ಮಾಣ ಮಾಡಬೇಕೆಂಬ ನಿಟ್ಟಿನಲ್ಲಿ ಪ್ರೇರಣಾ ಸಂಸ್ಥೆಯು ನ್ಯೂಸ್ ಪುತ್ತೂರು ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಸುಮಾರು ರೂ. 2ಲಕ್ಷ ಮೊತ್ತದ ವಿದ್ಯಾರ್ಥಿ ವೇತನವನ್ನು ಸುಮಾರು 60 ಮಂದಿಗೆ ವಿತರಣೆ ಮಾಡಲಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್‌ನ ನಿರ್ದೇಶಕರಾದ ಚಿದಾನಂದ ಬೈಲಾಡಿ, ವೆಂಕಟೇಶ್ ಭಟ್ ಕೊಯಕ್ಕುಡೆ, ನಾಗೇಶ್ ಕೆಡೆಂಜಿ ಉಪಸ್ಥಿತರಿದ್ದರು.
ಸದ್ಯದ ಮಟ್ಟಿಗೆ ವೆಬ್ ಚಾನೆಲ್ ಆಗಿ ಕಾರ್ಯನಿರ್ವಹಿಸಲಿದೆ
ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಅಡಿಯಲ್ಲಿ ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ನ್ಯೂಸ್ ಪುತ್ತೂರಿಗೆ ಈ ತನಕ ಸ್ವಂತ ಕಚೇರಿ ಇರಲಿಲ್ಲ. ಸದ್ಯದ ಮಟ್ಟಿಗೆ ವೆಬ್ ಚಾನೆಲ್ ಆಗಿ ಕಾರ್ಯನಿರ್ವಹಿಸಲಿದೆ. ಉದ್ಯಮಿಗಳು, ರಾಜಕೀಯ ನಾಯಕರು, ಸಮಾಜಕ್ಕೆ ದಾರಿ ತೋರಿಸಬೇಕಾದ ಪ್ರಮುಖ ವ್ಯಕ್ತಿಗಳನ್ನು ಕರೆಸಿ ಅವರನ್ನು ಸಂದರ್ಶನ ಮಾಡಿ ಅವರ ಅಭಿವೃದ್ದಿಯ ಯಶೋಗಾತೆಯನ್ನು ಸಮಾಜಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಹವಾನಿಯಂತ್ರಿತ ಸ್ಟುಡಿಯೋ ಮಾಡಲಾಗಿದೆ. ಅದನ್ನು ವೆಬ್ ನ್ಯೂಸ್ ಮತ್ತು ಯುಟ್ಯೂಬ್ ಮೂಲಕವು ಪ್ರಸಾರ ಮಾಡಲಾಗುತ್ತದೆ.
ವಸಂತ ವೀರಮಂಗಲ, ನಿರ್ದೇಶಕರು ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಪುತ್ತೂರು