ನೆಲ್ಯಾಡಿ: ಕಾಂಚನ ಲಕ್ಷ್ಮೀನಾರಾಯಣ ಅನುದಾನಿತ ಹಿ.ಪ್ರಾ.ಶಾಲೆ ಮತ್ತು ಕಾಂಚನ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯ ಆಶ್ರಯದಲ್ಲಿ ಕೆಸರ್ಡ್ ಒಂಜಿದಿನ ಸೆ.4ರಂದು ಕೃಷಿಕ ಅಗರ್ತಿಮಾರು ದುಗ್ಗಪ್ಪ ಗೌಡರವರ ಗದ್ದೆಯಲ್ಲಿ ನಡೆಯಿತು.
ದುಗ್ಗಪ್ಪ ಗೌಡ ಅಗರ್ತಿಮಾರು ಹಾಗೂ ಸರೋಜ ದಂಪತಿ ಉದ್ಘಾಟಿಸಿದರು. ಅತಿಥಿಯಾಗಿದ್ದ ಕಾಂಚನ ಹಾ.ಉ.ಸಹಕಾರ ಸಂಘದ ಅಧ್ಯಕ್ಷ ಡೆನ್ನಿಸ್ ಪಿಂಟೋರವರು ಮಾತನಾಡಿ, ಹಿಂದಿನ ಕಾಲದಲ್ಲಿ ಗದ್ದೆಯಲ್ಲಿ ಯಾವ ರೀತಿ ವ್ಯವಸಾಯ ಮಾಡಲಾಗುತ್ತಿತ್ತು. ಹೊಲ ಗದ್ದೆಗಳ ಕೆಲಸ ಹೇಗೆ ನಡೆಯುತ್ತಿದ್ದವು ಎಂಬ ಕುರಿತು ಮಾಹಿತಿ ನೀಡಿ, ಕೃಷಿಯನ್ನು ಮುಂದಕ್ಕೂ ಉಳಿಸಿ ಬೆಳೆಸೋಣ ಎಂದು ಹೇಳಿದರು.
ಕಾಂಚನ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲಾ ಮುಖ್ಯಗುರು ರಮೇಶ್ ಮಯ್ಯರವರು ಮಾತನಾಡಿ, ಅಕ್ಕಿ ಯಾವುದರಿಂದ ಆಗುತ್ತದೆ ಎಂಬ ಜ್ಞಾನವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿ, ಭತ್ತ ಬೆಳೆಯುವ ರೀತಿಯನ್ನು ವಿವರಿಸಿದರು. ಕಾಂಚನ ಲಕ್ಷ್ಮೀನಾರಾಯಣ ಅನುದಾನಿತ ಹಿ.ಪ್ರಾ.ಶಾಲಾ ಮುಖ್ಯಗುರು ಎ.ಲಕ್ಷ್ಮಣ ಗೌಡರವರು ಬೇಸಾಯದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ನಿವೃತ್ತ ಪೋಲಿಸ್ ಅಧಿಕಾರಿ ಪದ್ಮಯ್ಯ ಗೌಡ ಡೆಂಬಳೆ, ಕಾಂಚನ ವಿಕ್ರಂ ಯುವಕ ಮಂಡಲದ ಗೌರವಾಧ್ಯಕ್ಷ ಅನಿಲ್ ಪಿಂಟೋ, ಸ್ಥಳೀಯರಾದ ಭದ್ರಪ್ಪ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತ್ರೀವೆಣಿ ನಿರೂಪಿಸಿದರು. ಸುಜಾತ ಸ್ವಾಗತಿಸಿ, ಹೇಮಾವತಿ ವಂದಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕೆಸರು ಗದ್ದೆಯಲ್ಲಿ ಜಾನಪದ ಶೈಲಿಯ ನೃತ್ಯ, ಹಗ್ಗ ಜಗ್ಗಾಟ, ೫೦ಮೀಟರ್ ಓಟ, ಎತ್ತುಬಂಡಿ ಓಟ, ಹಾಳೆ ಓಟ, ಭತ್ತದ ಪೈರು ನೆಡುವ ಕಾರ್ಯವನ್ನು ವಿದ್ಯಾರ್ಥಿಗಳಿಂದ ಮಾಡಿಸಲಾಯಿತು. ಸುಮಾರು 520 ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ನೆರೆದ ಜನರಿಗೆ ಉಪಹಾರ, ಮಧ್ಯಾಹ್ನ ಭೋಜನ, ಪಾಯಸ, ಸಿಹಿತಿಂಡಿ ಮುಂತಾದ ವ್ಯವಸ್ಥೆಯನ್ನು ದುಗ್ಗಪ್ಪ ಗೌಡ ಅಗರ್ತಿಮಾರು, ಭದ್ರಪ್ಪ ಗೌಡ ಅಗರ್ತಿಮಾರು, ಮನೋಜ್ ಕುಮಾರ್ ಅಗರ್ತಿಮಾರು, ರಮೇಶ್ ಅಗರ್ತಿಮಾರು ಹಾಗೂ ವಿಕ್ರಂ ಯುವಕ ಮಂಡಲದ ಸದಸ್ಯರು ಕೊಡುಗೆಯಾಗಿ ನೀಡಿ ಸಹಕರಿಸಿದರು.
ಸನ್ಮಾನ:
ಕೃಷಿಯಲ್ಲಿ ಪರಿಣತರೂ, ಹಿರಿಯ ನಾಗರೀಕರೂ ಆದ ರುಕ್ಮಿಣಿಯವರನ್ನು ದುಗ್ಗಪ್ಪ ಗೌಡ ಹಾಗೂ ಮನೆಯವರ ಪರವಾಗಿ ಸನ್ಮಾನಿಸಲಾಯಿತು. ಸನ್ಮಾನಿತರ ಪರಿಚಯವನ್ನು ಕಂಪ್ಯೂಟರ್ ಶಿಕ್ಷಕಿ ಸೌಮ್ಯ ವಾಚಿಸಿದರು. ದುಗ್ಗಪ್ಪ ಗೌಡ ಅಗರ್ತಿಮಾರು ಮತ್ತು ಸರೋಜ ದಂಪತಿಯನ್ನು ಶಾಲಾ ವತಿಯಿಂದ ಹೂ, ಹಾರ, ಶಾಲು ಹಾಗೂ ಫಲಪುಷ್ಪ ನೀಡಿ ಗೌರವಿಸಲಾಯಿತು.