ಪುತ್ತೂರಿನಲ್ಲಿ ರಾಜ್ಯಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟ ಸಮಾಲೋಚನಾ ಸಭೆ

0

ನ.15-18ರ ತನಕ ಕ್ರೀಡಾಕೂಟ-ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಕ್ರೀಡಾಕೂಟ

ಪುತ್ತೂರು:ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಹಾಗೂ ರಾಮಕೃಷ್ಣ ಪ್ರೌಢಶಾಲೆ ಇವುಗಳ ಜಂಟಿ ಆಶ್ರಯದಲ್ಲಿ ನ.15ರಿಂದ18ರ ತನಕ ನಡೆಯಲಿರುವ ರಾಜ್ಯ ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕ-ಬಾಲಕಿಯರ ಕ್ರೀಡಾಕೂಟದ ಸಮಾಲೋಚನಾ ಸಭೆಯು ಸೆ.11ರಂದು ಕೊಂಬೆಟ್ಟು ಬಂಟರ ಭವನದಲ್ಲಿ ನಡೆಯಿತು.


ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ರಾಜ್ಯಮಟ್ಟದ ಕ್ರೀಡಾಕೂಟ ನಡೆಸುವ ಅವಕಾಶ ದೊರೆತಿರುವುದು ಪುತ್ತೂರಿನ ಯೋಗ, ಇದಕ್ಕಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ರಾಜ್ಯಮಟ್ಟದ ಕ್ರೀಡಾಪಟುಗಳಿಗೆ ಸೂಕ್ತ ವ್ಯವಸ್ಥೆ ಮಾಡಬೇಕಿದೆ. ರಾಜ್ಯಮಟ್ಟದ ಕ್ರೀಡಾಕೂಟವಾಗಿದ್ದು ನಮಗೆಲ್ಲಾ ಜವಾಬ್ದಾರಿ ಹೆಚ್ಚು ಇದೆ. ಗ್ರಾಮೀಣ ಮಟ್ಟದ ಅಧಿಕಾರಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳನ್ನು ಬಳಸಿಕೊಂಡು ಪೂರಕ ವ್ಯವಸ್ಥೆ ಕಲ್ಪಿಸಬೇಕು. ಈ ಕ್ರೀಡಾಕೂಟವು ರಾಜ್ಯಕ್ಕೆ ರಾಜ್ಯಕ್ಕೆ ಮಾದರಿಯಾಗಬೇಕು. ಇದಕ್ಕಾಗಿ ಕ್ರೀಡಾ ಇಲಾಖೆಯ ಸಹಕಾರವೂ ಬಹುಮುಖ್ಯವಾಗಿದ್ದು ಕ್ರೀಡಾ ಸಚಿವರ ಜೊತೆ ಮಾತುಕತೆ ನಡೆಸುವುದಾಗಿ ಅವರು ತಿಳಿಸಿದರು.


ರಾಜ್ಯ ಮಟ್ಟದ ಕ್ರೀಡಾ ಕೂಟದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದ ರಾಷ್ಟ್ರೀಯ ತರಬೇತುದಾರು, ಜಿಲ್ಲಾ ದೈಹಿಕ ಶಿಕ್ಷಣ ನಿರ್ದೇಶಕ ಪ್ರೇಮನಾಥ ಶೆಟ್ಟಿ ಮಾತನಾಡಿ, ಮೂರು ಶೈಕ್ಷಣಿಕ ಜಿಲ್ಲೆಗಳು ಸೇರಿದಂತೆ ಒಟ್ಟು ೩೫ ಜಿಲ್ಲೆಗಳ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಕ್ರೀಡಾಪಟುಗಳಿಗೆ ವಸತಿ, ಶೌಚಾಲಯ, ಆಹಾರ, ಸಾರಿಗೆ ಸೌಲಭ್ಯಗಳ ಆಗಬೇಕಿದೆ. ಕ್ರೀಡಾಪಟುಗಳು, ಶಿಕ್ಷಕರು ಸೇರಿದಂತೆ ಒಟ್ಟು ಸುಮಾರು 3000 ಮಂದಿಗೆ ವಸತಿ ವ್ಯವಸ್ಥೆಯಾಗಬೇಕು. ವಿಜೇತ ಕ್ರೀಡಾಪಟುಗಳಿಗೆ ನಗದು ಪುರಸ್ಕಾರ, ಗ್ರಾಮೀಣ ಪ್ರತಿಭೆಗಳ ಬೆಳವಣಿಗೆಗೆ ಕಾರಣೀಕರ್ತರಾದ ದೈಹಿಕ ಶಿಕ್ಷಣ ಶಿಕ್ಷಕರಿಗೆ ಸನ್ಮಾನಿಸುವ ಯೋಜನೆಗಳಿವೆ. ನ.೧೫ರಂದು ಮಹಾಲಿಂಗೇಶ್ವರ ದೇವಸ್ಥಾನದಿಂದ ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ತಾಲೂಕಿನಾದ್ಯಂತೆ ಕ್ರೀಡಾ ಸಂದೇಶ ಸಾರುತ್ತಾ ಸ್ವಾಗತ ನಡೆದು ನ.೧೬ರಂದು ಸಂಜೆ ಕ್ರೀಡಾ ಕೂಟದ ಉದ್ಘಾಟನೆ ನಡೆದು ಎರಡು ದಿನಗಳ ಕಾಲ ಕ್ರೀಡಾಕೂಟ ನಡೆಯಲಿದೆ ಎಂದು ಅವರು ಹೇಳಿದರು.


ಲಾಂಛನ ಬಿಡುಗಡೆ ಮಾಡಿದ ಸವಣೂರು ವಿದ್ಯಾರಶ್ಮೀ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸೀತಾರಾಮ ರೈ ಸವಣೂರು ಮಾತನಾಡಿ, ಕ್ರೀಡಾಕೂಟದ ಯಶಸ್ವಿಗೆ ತನ್ನ ವೈಯಕ್ತಿಕ ಹಾಗೂ ವಿದ್ಯಾರಶ್ಮೀ ಶಿಕ್ಷಣ ಸಂಸ್ಥೆಗಳಿಂದ ಸಹಕಾರ ನೀಡುವುದಾಗಿ ತಿಳಿಸಿದರು.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರು, ಪುತ್ತೂರು ಬಂಟರ ಸಂಘದ ಅಧ್ಯಕ್ಷರಾಗಿರುವ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಪುತ್ತೂರಿನಲ್ಲಿ ನಡೆದ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿದ್ದು ರಾಜ್ಯಮಟ್ಟದ ಕ್ರೀಡಾ ಕೂಟವೂ ಯಶಸ್ವಿಯಾಗಿ ನಡೆಯಲಿದೆ ಎಂದರು.
ತಾ.ಪಂ ಮಾಜಿ ಸದಸ್ಯ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ, ದೈಹಿಕ ಶಿಕ್ಷಣ ಶಿಕ್ಷಕರ ಬಲಾಢ್ಯ ತಂಡವೇ ಪುತ್ತೂರಿನಲ್ಲಿದ್ದು ರಾಜ್ಯ ಮಟ್ಟದ ಕ್ರೀಡಾಕೂಟವು ಯಶಸ್ವಿಯಾಗಿ ನಡೆಯಲಿದೆ ಎಂದರು.


ಕ್ರೀಡಾಪಟುಗಳಿಗೆ ವಸತಿ ವ್ಯವಸ್ಥೆಗಾಗಿ ಖಾಸಗಿ ಶಾಲೆಗಳಲ್ಲಿ ಈಗಾಗಲೇ ಮನವಿ ಮಾಡಲಾಗಿದೆ. ಊಟ, ಉಪಾಹಾರವೂ ವ್ಯವಸ್ಥಿತವಾಗಿ ನಡೆಯಬೇಕು. ಎಲ್ಲರನ್ನೂ ಸೇರಿಸಿಕೊಂಡು ಉತ್ತಮ ಕ್ರೀಡಾಕೂಟವನ್ನಾಗಿ ಮಾಡಲಾಗುವುದು ಎಂದರು.


ಅಧ್ಯಕ್ಷತೆ ವಹಿಸಿದ್ದ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ರಾಜ್ಯಮಟ್ಟದ ಕ್ರೀಡಾಕೂಟದ ಆಯೋಜನೆಯ ರೂಪು ರೇಷೆಗಳ ಮಾಹಿತಿ ನೀಡಿ ಕ್ರೀಡಾಕೂಟವು ಯಶಸ್ವಿಯಾಗುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಹಕರಿಸುವಂತೆ ಅವರು ವಿನಂತಿಸಿದರು.
ಜಿ.ಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಸಂತ ಫಿಲೋಮಿನಾ ಪ್ರೌಢ ಶಾಲಾ ಮುಖ್ಯ ಗುರು ಮ್ಯಾಕ್ಸಿನ್ ಡಿ ಸೋಜ, ರಾಮಕೃಷ್ಣ ಪ್ರೌಢ ಶಾಲಾ ಮುಖ್ಯ ಗುರು ಜಯಶ್ರೀ, ಬಂಟರ ಯಾನೆ ನಾಡವರ ಮಾತೃ ಸಂಘದ ಸಂಚಾಲಕ ದಯಾನಂದ ರೈ ಮನವಳಿಕೆ, ಭುವನೇಶ್ ಕುಮಾರ್, ತಾ.ಪಂ ಯೋಜನಾಧಿಕಾರಿ ಸುಕನ್ಯಾ, ದೈಹಿಕ ಶಿಕ್ಷಣ ಶಿಕ್ಷಕರ ಜಿಲ್ಲಾ ಸಂಘದ ಅಧ್ಯಕ್ಷ ಲಿಲ್ಲಿ, ಪ್ರಧಾನ ಕಾರ್ಯದರ್ಶಿ ಕಾರ್ಯದರ್ಶಿ ಹರೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ದೈಹಿಕ ಶಿಕ್ಷಣ ಶಿಕ್ಷಕ ಮಾಮಚ್ಚನ್ ಸ್ವಾಗತಿಸಿ, ವಂದಿಸಿದರು. ಪುತ್ತೂರು ಹಾಗೂ ಕಡಬ ತಾಲೂಕಿನ ಶಾಲೆಗಳ ಮುಖ್ಯಸ್ಥರು, ದೈಹಿಕ ಶಿಕ್ಷಣ ಶಿಕ್ಷಕರು ಸಭೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here