ಪೆರುವಾಯಿ ಗ್ರಾ.ಪಂ ಮಾಜಿ ಅಧ್ಯಕ್ಷ ಸಹಿತ ಸಹೋದರ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆ
ಪ್ರಧಾನಿಯಷ್ಟೆ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು ಫವರ್ ಫುಲ್ – ನಳಿನ್ ಕುಮಾರ್ ಕಟೀಲ್
ಪುತ್ತೂರು: ಕೇಂದ್ರದಿಂದ ಬರುವ ಯೋಜನೆಗಳನ್ನು ಮನೆ ಮನೆಗಳಿಗೆ, ನೇರ ಜನರಿಗೆ ತಲುಪಿಸುವ ಏಕೈಕ ಸಾಧನ ಅದು ಗ್ರಾ.ಪಂ. ಹಾಗಾಗಿ ಪ್ರಧಾನಿಯಷ್ಟೆ ಗ್ರಾ.ಪಂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳು ಫವರ್ ಫುಲ್ ಆಗಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಹೇಳಿದ್ದಾರೆ.
ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದಿಂದ ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿನ ಚುಂಚಶ್ರೀ ಸಭಾಂಗಣದಲ್ಲಿ ಸೆ.11 ರಂದು ಗ್ರಾ.ಪಂ ಬಿಜೆಪಿ ಬೆಂಬಲಿತ ಅಧ್ಯಕ್ಷರುಗಳು ಮತ್ತು ಉಪಾಧ್ಯಕ್ಷರುಗಳಿಗೆ ನಡೆದ ಪ್ರಶಿಕ್ಷಣ ವರ್ಗವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾ.ಪಂ ಆಡಳಿತದಲ್ಲಿ ಪ್ರತಿಪಕ್ಷ ಉತ್ತಮ ಕೆಲಸಕ್ಕೆ ಸಹಕಾರ ಕೊಡಬೇಕು. ಮುಂದಿನ ಚುನಾವಣೆಯನ್ನು ಗುರಿಯಾಗಿಸಿ ಕೆಲಸ ಮಾಡಬೇಕು. ಗ್ರಾಮದ ಅಭಿವೃದ್ಧಿಯಲ್ಲಿ ಪಂಚಾಯತ್ ಪಿಡಿಒ ಅಧ್ಯಕ್ಷರು ಹೇಳಿದಂತೆ ಕೇಳಬೇಕು. ಯಾಕೆಂದರೆ ಕೇಂದ್ರದಿಂದ ಕೋಟಿ ಕೋಟಿ ಅನುದಾನ ನೇರವಾಗಿ ಬರುವುದು ಗ್ರಾ.ಪಂಗಳಿಗೆ. ಇವತ್ತು ಪಂಚಾಯತ್ ಸದಸ್ಯರಿಗೆ ಅತಿ ಹೆಚ್ಚು ಗೌರವವಿದೆ. ಇದಕ್ಕೆ ಕಾರಣಕರ್ತರಾದ ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸಬೇಕು ಎಂದ ಅವರು ನರೇಗಾದ ಮೂಲಕ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದು. ಈ ನಿಟ್ಟಿನಲ್ಲಿ ಪಂಚಾಯತ್ ಕಾಯ್ದೆ ಏನು ಹೇಳುತ್ತದೆ. ಕೇಂದ್ರ ಸರಕಾರದ ಯೋಜನೆಗಳೇನು, ಜನ ಸಾಮಾನ್ಯರಿಗೆ ಮಾಡಬಹುದಾದ ಕಾರ್ಯಗಳೇನು ಎಂಬ ಮೂರು ವಿಚಾರಗಳನ್ನು ಅಧ್ಯಯನ ಮಾಡಿ ಕೆಲಸ ಮಾಡಿ. ಆಗ ನೀವು ಕೂಡಾ ಒಬ್ಬ ಅತ್ಯುತ್ತಮ ಪಂಚಾಯತ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಮೂಡಿ ಬರಲಿದ್ದೀರಿ ಎಂದರು.
ಮಾಜಿ ಶಾಸಕ ಸಂಜೀವ ಸಂಜೀವ ಮಠಂದೂರು ಪ್ರಾಸ್ತಾವಿಕವಾಗಿ ಮಾತನಾಡಿ ಪಂಚಾಯತ್ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿದು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಪ್ರಜಾಪ್ರಭುತ್ವ ಮೌಲ್ಯಗಳನ್ನು ದೊರಕಿಸಿಕೊಡಲು ಏನು ಮಾಡಬಹುದು ಮತ್ತು ಕಾನೂನಿನ ಮಾಹಿತಿ ಪಡೆದು ಕೊಂಡು ಅಭಿವೃದ್ಧಿಯ ವಿಚಾರಗಳನ್ನು ತಿಳಿದು ಪಂಚಾಯತ್ ಅನ್ನು ಮಹಾತ್ಮಗಾಂಧಿ ಕಂಡಂತಹ ಗ್ರಾಮ ಸ್ವರಾಜ್ಯದ ರಾಮರಾಜ್ಯ ಹೇಗೆ ಮಾಡಬಹುದು ಎಂದು ತೋರಿಸಿ ಕೊಡಲು ಈ ಬಿಜೆಪಿ ಇಂತಹ ವಿಶಿಷ್ಟ ಕಾರ್ಯಗಾರವನ್ನು ಮಾಡುತ್ತಿದೆ. ಭ್ರಷ್ಟಾಚಾರ ರಹಿತವಾಗಿ ಅಭಿವೃದ್ಧಿ ಕಾರ್ಯಕ್ಕೆ ಗ್ರಾಮ ಪಂಚಾಯತ್‌ಗಳು ಮಾದರಿ. ಈ ನಿಟ್ಟಿನಲ್ಲಿ ಪಂಚಾಯತ್ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಕಾಯ್ದೆ. ಯೋಜನೆಗಳ ಕುರಿತು ತಿಳಿದು ಕೊಳ್ಳಿ ಎಂದರು. ಬಿಜೆಪಿ ಹಿರಿಯರ ಪ್ರಕೋಷ್ಠದ ರಾಜ್ಯವಸಂಚಾಲಕ ಪ್ರತಾಪ್ ಸಿಂಹ ನಾಯಕ್, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ.ಜೀವಂಧರ್ ಜೈನ್, ಹಿರಿಯರಾದ ಎಸ್.ಅಪ್ಪಯ್ಯ ಮಣಿಯಾಣಿ, ಜಿ.ಪಂ ಮಾಜಿ ಅಧ್ಯಕ್ಷೆ ಅಶಾ ತಿಮ್ಮಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ಎರಡು ಅವಧಿಯಲ್ಲಿ ಪ್ರಶಿಕ್ಷಣ ವರ್ಗ ಆರಂಭಗೊಂಡಿತ್ತು. ಯಶಸ್ವಿನಿ ಶಾಸ್ತ್ರಿ ಪ್ರಾರ್ಥಿಸಿದರು. ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಲಿಮನೆ ವಂದಿಸಿದರು. ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ ಕಾರ್ಯಕ್ರಮ ನಿರೂಪಿಸಿದರು.
ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆ
ಪೆರುವಾಯಿ ಗ್ರಾ.ಪಂ ಮಾಜಿ ಅಧ್ಯಕ್ಷರಾಗಿರುವ ಕಾಂಗ್ರೆಸ್ ಪಂಚಾಯತ್ ರಾಜ್ ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಪೂಜಾರಿ ಮತ್ತು ಅವರ ಸಹೋದರ ವಿಶ್ವನಾಥ ಪೂಜಾರಿ ಅವರನ್ನು ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು. ರಾಜ್ಯ ಬಿಜೆಪಿ ಅಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಪಕ್ಷದ ಧ್ವಜವನ್ನು ಬಾಲಕೃಷ್ಣ ಪೂಜಾರಿಯವರಿಗೆ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು. ಮುಂದಿನ ದಿನ ಬಾಲಕೃಷ್ಣ ಪೂಜಾರಿ ಅವರ ನಾಲ್ವರು ಸಹೋದರರು ಕೂಡಾ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಬಿಜೆಪಿ ಗ್ರಾಮಾಂತರ ಮಂಡಲದ ಕಾರ್ಯದರ್ಶಿ ಹರಿಪ್ರಸಾದ್ ಘೋಷಣೆ ಮಾಡಿದರು.