ಪುತ್ತೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ನಡೆಸಲ್ಪಡುವ ಪುತ್ತೂರು ಗ್ರಾಮಾಂತರ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳ ತ್ರೋಬಾಲ್ ಪಂದ್ಯಾಟವು ಸೆ.13 ರಂದು ಪೆರ್ಲಂಪಾಡಿ ಷಣ್ಮುಖದೇವ ಪ್ರೌಢಶಾಲಾ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಬೆಳ್ಳಾರೆ ಉಪವಲಯ ಅರಣ್ಯಾಧಿಕಾರಿ ಕೆ.ಜೆ ಪ್ರಸಾದ್ರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಕ್ರೀಡೆಯು ವಿದ್ಯಾರ್ಥಿಗಳ ಭವಿಷ್ಯದ ನಿರ್ಮಾಣಕ್ಕೆ ಸಹಾಯಕ ಎಂದು ಹೇಳಿ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳನ್ನು ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಕೊಳ್ತಿಗೆ ಗ್ರಾಪಂ ಉಪಾಧ್ಯಕ್ಷ ಪ್ರಮೋದ್ ಕೆ.ಎಸ್.ರವರು ಮಾತನಾಡಿ, ಸಮಾಜದಲ್ಲಿ ಯಾವುದೇ ರೀತಿಯಲ್ಲಿ ಸಹ ಬದುಕಬಹುದು ಆದರೆ ಉತ್ತಮ ಪ್ರಜೆಯಾಗಿ ಬದುಕುವುದು ಅತೀ ಮುಖ್ಯ, ಕ್ರೀಡೆಯ ಜೊತೆಗೆ ಪಾಠವು ಮುಖ್ಯವೆಂದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಮಾತುಗಳನ್ನಾಡಿದರು. ಸಭಾಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ತೀರ್ಥಾನಂದ ದುಗ್ಗಳ ಮಾತನಾಡಿ, ಆಟದಲ್ಲಿ ಸೋತರು ಗೆದ್ದರೂ ಎರಡನ್ನು ಸಮಾನವಾಗಿ ಸ್ವೀಕರಿಸಬೇಕು ಎಂದರು. ವೇದಿಕೆಯಲ್ಲಿ ಶಾಲಾ ಸಂಚಾಲಕ ಶಿವರಾಮ ಭಟ್ ಬೀರ್ಣಕಜೆ, ಶಾಲಾ ಕೋಶಾಧಿಕಾರಿ ದಿವಾಕರ ರೈ ಕೆರೆಮೂಲೆ, ಕ್ರೀಡಾ ಸಂಯೋಜಕರಾದ ಸಜಿಲಾ ಎ ಉಪಸ್ಥಿತರಿದ್ದರು. ಸೀತಾರಾಮ ಅಮಳ ಸ್ವಾಗತಿಸಿದರು. ಶಾಲಾ ಮುಖ್ಯಗುರು ಕೃಷ್ಣವೇಣಿ ಎಸ್.ವಂದಿಸಿದರು. ಅಸ್ಮಿತಾ ಕಾರ್ಯಕ್ರಮ ನಿರೂಪಿಸಿದರು.