ನಮ್ಮ ರಕ್ಷಣೆಯ ಬಗ್ಗೆ ಮೊದಲು ನಾವೇ ಜಾಗೃತರಾಗಿರಬೇಕು: ಡಿವೈಎಸ್‌ಪಿ ಗಾನ ಪಿ.ಕುಮಾರ್
ಪುತ್ತೂರು: ಕುಂಬ್ರದಲ್ಲಿ ಸೆ.4 ರ ತಡರಾತ್ರಿ ನಡೆದ ಸರಣಿ ಕಳ್ಳತನ ಹಾಗೂ ನೆರೆಯ ಗ್ರಾಮ ಬಡಗನ್ನೂರುನಲ್ಲಿ ನಡೆದ ಮನೆ ದರೋಡೆ ಸೇರಿದಂತೆ ಕಳ್ಳತನದ ಬಗ್ಗೆ ಜನಜಾಗೃತಿ ಸಭೆಯು ಸೆ.13 ರಂದು ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಸಭಾಂಗಣದಲ್ಲಿ ನಡೆಯಿತು.
ಗ್ರಾಮಸ್ಥರ ಸಲಹೆ ಸೂಚನೆಗಳನ್ನು ಆಲಿಸಿದ ಪುತ್ತೂರು ಡಿವೈಎಸ್‌ಪಿ ಗಾನ ಪಿ.ಕುಮಾರ್‌ರವರು ಮಾತನಾಡಿ, ಕುಂಬ್ರದಲ್ಲಿ ನಡೆದ ಸರಣಿ ಕಳ್ಳತನದ ಬಗ್ಗೆ ಇಲಾಖೆಯಿಂದ ಸೂಕ್ತವಾದ ತನಿಖೆ ನಡೆಯುತ್ತಿದೆ. ಕುಂಬ್ರದ ಕಳ್ಳತನವನ್ನು ಗಮನಿಸಿದಾಗ ಸಿಸಿಟಿವಿ ಡಿವಿಆರ್‌ಗಳನ್ನೇ ಕಳ್ಳರು ಎಗರಿಸಿದ್ದಾರೆ. ಆದ್ದರಿಂದ ನಾವು ಸಿಸಿಟಿವಿ ಕ್ಯಾಮರ ಅಳವಡಿಸುತ್ತೇವೆ ಆದರೆ ಡಿವಿಆರ್ ಅನ್ನು ಎಲ್ಲರಿಗೆ ಕಾಣುವ ಹಾಗೆ ಇಡುತ್ತೇವೆ ಇದು ಸರಿಯಲ್ಲ, ಸಿಸಿಟಿವಿ ಡಿವಿಆರ್ ಎಲ್ಲಿ ಇಟ್ಟಿದ್ದೇವೆ ಎಂಬುದು ನಮಗೆ ಮಾತ್ರ ಗೊತ್ತಿರಬೇಕು ಅದು ಎಲ್ಲರಿಗೆ ಕಾಣುವ ಹಾಗೆ ಇಡಬಾರದು ಎಂದು ತಿಳಿಸಿದರು. ಇನ್ನು ಸಿಸಿಟಿವಿ ಕ್ಯಾಮರ ಲಿಂಕ್ ಅನ್ನು ನಮ್ಮ ಮೊಬೈಲ್‌ಗಳಿಗೆ ಅಳವಡಿಸಿಕೊಳ್ಳಬೇಕು ಒಂದು ವೇಳೆ ಡಿವಿಆರ್ ಕಳ್ಳತನವಾದರೂ ನಮ್ಮ ಮೊಬೈಲ್‌ನಲ್ಲಿ ಕಳ್ಳರ ಚಲನವಲನ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ ಎಂದರು.
ಗ್ರಾಮದ ಒಳರಸ್ತೆ, ಮುಖ್ಯರಸ್ತೆಗಳ ಬಗ್ಗೆ ಮಾಹಿತಿ ಕೊಡಿ
ಕಳ್ಳರು ಯಾವಾಗಲೂ ಮುಖ್ಯರಸ್ತೆಯಲ್ಲಿ ಬರುವುದಿಲ್ಲ ಬದಲಾಗಿ ಒಳರಸ್ತೆಗಳಲ್ಲಿ ಬರುತ್ತಾರೆ ಆದ್ದರಿಂದ ಗ್ರಾಮದಲ್ಲಿರುವ ಒಳರಸ್ತೆಗಳ ಬಗ್ಗೆ ಮತ್ತು ಆ ರಸ್ತೆಗಳು ಎಲ್ಲಿಗೆ ಸಂಪರ್ಕವನ್ನು ಪಡೆದುಕೊಳ್ಳುತ್ತವೆ ಎಂಬ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಕೇಳಿಕೊಂಡರು. ಇದರಿಂದ ಪೊಲೀಸರಿಗೆ ಕಳ್ಳ ಯಾವ ರಸ್ತೆಯಲ್ಲಿ ಪರಾರಿಯಾಗಿದ್ದಾನೆ ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ ಅಲ್ಲದೆ ಕೆಲವು ನಿಗದಿತ ಪ್ರದೇಶಗಳಲ್ಲಿ ಇಲಾಖೆ ವತಿಯಿಂದ ಸಿಸಿ ಕ್ಯಾಮರ ಅಳವಡಿಸಲು ಕೂಡ ಸಹಕಾರಿಯಾಗುತ್ತದೆ ಎಂದರು.
ಮನೆಯ ಹಿಂಬದಿ ಬಾಗಿಲು ಕೂಡ ಗಟ್ಟಿಯಾಗಿರಲಿ
ಹೆಚ್ಚಿನವರ ಮನೆಯ ಹಿಂಬದಿ ಬಾಗಿಲು ಅಷ್ಟಕಷ್ಟೇ ಇರುತ್ತದೆ. ಮನೆ ಕಟ್ಟುವಾಗ ಎದುರು ಬಾಗಿಲಿನ ಬಗ್ಗೆ ಮಾತ್ರ ನಾವು ಗಮನ ಹರಿಸುತ್ತೇವೆ ಅದನ್ನು ಭದ್ರವಾಗಿ ಮಾಡುತ್ತೇವೆ ಆದರೆ ಹಿಂಬದಿ ಬಾಗಿಲನ್ನು ಅಷ್ಟಾಗಿ ಭದ್ರ ಮಾಡುವುದಿಲ್ಲ. ಹಿಂಬದಿ ಬಾಗಿಲಿಗೆ ಒಂದು ಚಿಲಕ ಇಟ್ಟಿರುತ್ತೇವೆ ಇದು ಸರಿಯಲ್ಲ ಕಳ್ಳರು ಹೆಚ್ಚಾಗಿ ಹಿಂಬದಿ ಬಾಗಿಲನ್ನೇ ಮುರಿದು ಒಳನುಗ್ಗುತ್ತಾರೆ. ಆದ್ದರಿಂದ ಹಿಂಬದಿ ಬಾಗಿಲನ್ನು ಭದ್ರವಾಗಿ ಮಾಡುವುದು ಮುಖ್ಯ ಎಂದರು.
ಡೋರ್ ಲಾಕ್ ಅಳವಡಿಸಿಕೊಳ್ಳಿ
ನಮ್ಮ ಮನೆಯ ಬಾಗಿಲಿಗೆ ಬೀಗದ ಕೀ ಬದಲು ಡೋರ್ ಲಾಕ್ ಸಿಸ್ಟಮ್ ಅನ್ನು ಅಳವಡಿಸಿಕೊಳ್ಳುವುದು ಒಳಿತು. ಏಕೆಂದರೆ ಮನೆಯ ಬಾಗಿಲಿಗೆ ದೊಡ್ಡದಾದ ಬೀಗ ಹಾಕಿ ಹೋದರೆ ಕಳ್ಳರಿಗೆ ಮನೆಯಲ್ಲಿ ಯಾರೂ ಇಲ್ಲ ಎಂಬುದು ಬಹಳ ಬೇಗ ಗೊತ್ತಾಗುತ್ತದೆ ಅದರ ಬದಲು ಡೋರ್ ಲಾಕ್ ಹಾಕಿದರೆ ಮನೆಯ ಒಳಗೆ ಇದ್ದಾರೋ ಇಲ್ವೋ ಅನ್ನೋದು ಅಷ್ಟು ಬೇಗ ತಿಳಿಯುವುದಿಲ್ಲ ಎಂದರು.
ನೆರೆ ಮನೆಯವರೊಂದಿಗೆ ಮೊಬೈಲ್ ಸಂಪರ್ಕದಲ್ಲಿರಿ
ನಾವು ಮನೆಯಲ್ಲಿ ಎಲ್ಲಾದರೂ ಹೋಗುವುದಾದರೆ ನೆರೆ ಮನೆಯವರಿಗೆ ತಿಳಿಸಿಯೇ ಹೋಗುವುದು ಒಳ್ಳೆಯದು ಇನ್ನು ನೆರೆಹೊರೆಯವರ ಮೊಬೈಲ್ ನಂಬರ್ ಪಡೆದುಕೊಂಡು ಅವರಲ್ಲಿ ಸಂಪರ್ಕದಲ್ಲಿರಿ ಇದರಿಂದ ಮಾಹಿತಿಯನ್ನು ಪಡೆದುಕೊಳ್ಳಲು ಸುಲಭವಾಗುತ್ತದೆ. ಅಪರಿಚಿತರನ್ನು ಕೆಲಸಕ್ಕೆ ಇಟ್ಟುಕೊಳ್ಳುವ ಮುನ್ನ ಅವರ ಆಧಾರ್ ಕಾರ್ಡ್ ಹಾಗೂ ಭಾವಚಿತ್ರವನ್ನು ಪಡೆದುಕೊಂಡು ಸ್ಥಳೀಯ ಪೊಲೀಸ್ ಠಾಣೆಗೆ ಕೊಡಿ, ಮನೆಯಲ್ಲಿ ಹಣ, ಚಿನ್ನಾಭರಣವನ್ನು ಇಟ್ಟು ಹೊರಗಡೆ ಹೋಗಬೇಡಿ, ರಾತ್ರಿ ವೇಳೆ ನೀವು ಇಲ್ಲದಿದ್ದರೂ ನೆರೆಮನೆಯವರಲ್ಲಿ ರಾತ್ರಿ ವೇಳೆ ವಿದ್ಯುತ್ ಲೈಟ್ ಹಾಕಲು ಹೇಳಿ ಹೋಗಿ ಇದರಿಂದ ನೀವು ಮನೆಯಲ್ಲಿಯೇ ಇದ್ದೀರಿ ಎಂಬ ಭಾವನೆ ಕಳ್ಳರಿಗೆ ಬರುತ್ತದೆ ಎಂಬಿತ್ಯಾದಿ ಸಲಹೆಗಳನ್ನು ಡಿವೈಎಸ್‌ಪಿ ಗಾನ ಪಿ.ಕುಮಾರ್‌ರವರು ಸಭೆಗೆ ನೀಡಿದರು.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಯಾವುದೇ ವಿಷಯದಲ್ಲೂ ಹಿಂದೆ ಬಿದ್ದಿಲ್ಲ : ಎಸ್.ಐ ಧನಂಜಯ್
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಸಬ್ ಇನ್ಸ್‌ಪೆಕ್ಟರ್ ಧನಂಜಯ್‌ರವರು ಮಾತನಾಡಿ, ಕುಂಬ್ರದಲ್ಲಿ ನಡೆದ ಸರಣಿ ಕಳ್ಳತನದ ವಿಷಯ ಸೇರಿದಂತೆ ಯಾವುದೇ ವಿಷಯದಲ್ಲೂ ಗ್ರಾಮಾಂತರ ಠಾಣಾ ಪೊಲೀಸ್ ಸಿಬ್ಬಂದಿಗಳು ಹಿಂದೆ ಬಿದ್ದಿಲ್ಲ ಒಳ್ಳೆಯ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ದಿನ ಬೀಟ್ ಸಿಸ್ಟಮ್ ನಡೆಯುತ್ತಿದೆ. ಗ್ರಾಮದಲ್ಲಿ ಹಲವು ಬೀಟ್ ಪಾಯಿಂಟ್‌ಗಳನ್ನು ಮಾಡಿದ್ದೇವೆ. ಪ್ರತಿದಿನ ರಾತ್ರಿ 10.30 ರಿಂದ ಬೆಳಗ್ಗೆ 5 ಗಂಟೆಯ ತನಕ ಬೀಟ್ ಪೊಲೀಸರು ಆಯಾ ಬೀಟ್ ಪಾಯಿಂಟ್‌ಗಳಿಗೆ ಭೇಟಿ ಕೊಡುತ್ತಿದ್ದಾರೆ. ಹಿಂದಿನ ಹಾಗೆ ಪುಸ್ತಕದಲ್ಲಿ ಸಹಿ ಹಾಕುವ ಕ್ರಮ ಈಗ ಇಲ್ಲ ಇದೀಗ ಹೊಸ ಆಪ್ ಬಂದಿದ್ದು ಅದರಲ್ಲಿ ಬೀಟ್ ಪಾಯಿಂಟ್‌ಗಳನ್ನು ಗುರುತಿಸಿದ್ದೇವೆ ಅಲ್ಲಿಗೆ ಹೋಗುವ ಬೀಟ್ ಪೊಲೀಸರು ಅಲ್ಲಿಂದ ಲೋಕೇಶನ್ ಶೇರ್ ಮಾಡಬೇಕಾಗುತ್ತದೆ. ಬೀಟ್ 1 ನಲ್ಲಿ ಕುಂಬ್ರ, ತಿಂಗಳಾಡಿ, ಕೆಯ್ಯೂರು ಬರುತ್ತದೆ. ಬೀಟ್‌ನಲ್ಲಿ ನಾವು ಯಾವತ್ತೂ ಹಿಂದೆ ಬಿದ್ದಿಲ್ಲ ಎಂದು ಹೇಳಿದರು. ನಾನು ಕೂಡ ಪ್ರತಿದಿನ ರಾತ್ರಿ 12 ಗಂಟೆ ಸುಮಾರಿಗೆ ರೌಂಡಪ್ ಬರುತ್ತಿದ್ದೇನೆ. ಕುಟ್ಟಿನೋಪಿನಡ್ಕ, ದರ್ಬೆತ್ತಡ್ಕ ಇತ್ಯಾದಿ ಕುಗ್ರಾಮಗಳಿಗೂ ಭೇಟಿ ಕೊಡುತ್ತಿದ್ದೇನೆ. ಕೆಲವು ಕಡೆಗಳಲ್ಲಿ ನಡೆದುಕೊಂಡೇ ಹೋಗಿದ್ದೇನೆ. ಕುಂಬ್ರದಲ್ಲಿ ನಡೆದ ಸರಣಿ ಕಳ್ಳತನದ ವಿಚಾರದಲ್ಲಿ ಈಗಾಗಲೇ ತನಿಖೆ ಚುರುಕುಗೊಳಿಸಿದ್ದೇವೆ. ಸಿಸಿಟಿವಿ ಫುಟೇಜ್‌ಗಳನ್ನು ಸಂಗ್ರಹಿಸಿದ್ದೇವೆ ಎಂದು ಎಸ್.ಐ ಧನಂಜಯ್ ತಿಳಿಸಿದರು. ವರ್ತಕರು ಹಾಗೂ ಮನೆಯವರು ಕೂಡ ಸಾಧ್ಯವಾದಷ್ಟು ಒಳ್ಳೆಯ ಕ್ಲಾರಿಟಿ ಇರುವ ಸಿಸಿಟಿವಿ ಕ್ಯಾಮರಗಳನ್ನೇ ಅಳವಡಿಸಿಕೊಳ್ಳಿ ಹಾಗೂ ಸಿಸಿಟಿವಿ ಕ್ಯಾಮರಗಳ ಡಿವಿಆರ್ ಅನ್ನು ಬಚ್ಚಿಡುವ ಕೆಲಸ ಆಗಬೇಕು ಅದು ಎಲ್ಲರಿಗೆ ಕಾಣುವ ಹಾಗೆ ಇರಬಾರದು ಈ ಬಗ್ಗೆ ವರ್ತಕರು ಗಮನಹರಿಸಬೇಕು ಎಂದು ಅವರು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈಯವರು, ಬೀಟ್ ಪೊಲೀಸರು ಪ್ರತಿದಿನ ರಾತ್ರಿ ವೇಳೆ ಅದರಲ್ಲೂ 12ರಿಂದ5 ರ ಸಮಯದಲ್ಲಿ ಗ್ರಾಮದಲ್ಲಿ ಓಡಾಡಬೇಕು, ಗ್ರಾಮ ಪಂಚಾಯತ್ ಬೀದಿ ದೀಪಗಳನ್ನು ಸರಿಪಡಿಸಬೇಕು, ಕುಂಬ್ರ ಪೇಟೆಗೆ ಒಬ್ಬ ಕಾವಲುಗಾರ (ಗೂರ್ಕ)ನನ್ನು ನೇಮಕ ಮಾಡಿದರೆ ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಮಾತನಾಡಿ, ಮಧ್ಯರಾತ್ರಿ 12 ರಿಂದ 5 ರ ತನಕ ಬೀಟ್ ಪೊಲೀಸರು ಗ್ರಾಮಕ್ಕೆ ಸುತ್ತುಹೊಡೆಯುವುದು ಅವಶ್ಯಕ. ಪೇಟೆಗೆ ಕಾವಲಗಾರ ಬೇಕು, ವಸ್ತುಗಳ ಮಾರಾಟ ಅಥವಾ ಇತರ ವಿಚಾರದಲ್ಲಿ ಅಪರಿಚಿತರು ಯಾರೇ ಬಂದರೂ ಅವರ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ಸೂಕ್ತ ಈ ಬಗ್ಗೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದರು.
ಕುಂಬ್ರ ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮಸುಂದರ ರೈ ಕೊಪ್ಪಳ ಮಾತನಾಡಿ, ಕುಂಬ್ರದಲ್ಲಿ ಸಣ್ಣಪುಟ್ಟ ಕಳ್ಳತನ ಆದಾಗಲೇ ನಾವು ಠಾಣೆಗೆ ಮನವಿ ನೀಡಿದ್ದೇವೆ ಇದಲ್ಲದೆ ಸಿಸಿಟಿವಿ ಕ್ಯಾಮರ ಸರಿಪಡಿಸುವಂತೆಯೂ ತಿಳಿಸಿದ್ದೇವೆ. ಹಿಂದೆ ಬೀಟ್ ಪೊಲೀಸರು ಗ್ರಾಮಕ್ಕೆ ಬಂದು ಪುಸ್ತಕಕ್ಕೆ ಸಹಿ ಹಾಕುವ ವ್ಯವಸ್ಥೆ ಇತ್ತು ಈಗ ಇಲ್ಲ, ಗ್ರಾಮದಲ್ಲಿ ಶೇ.50 ಮಂದಿ ಅಪರಿಚಿತರೇ ತುಂಬಿಕೊಂಡಿದ್ದಾರೆ. ಅಪರಿಚಿತರಿಗೆ ಬಾಡಿಗೆ ಮನೆ, ರೂಮ್ ಕೊಡುವ ಮುಂಚೆ ಅವರ ಮಾಹಿತಿ ಸಂಗ್ರಹಿಸುವುದು ಸೂಕ್ತ, ವರ್ತಕರ ಸಂಘದಿಂದ ಸಂಬಳ ಕೊಟ್ಟು ಒಬ್ಬ ಕಾವಲುಗಾರರನ್ನು ನೇಮಿಸಿದ್ದೆವು ಆದರೆ ಕಾವಲುಗಾರ ಸರಿಯಾಗಿ ಕೆಲಸ ಮಾಡದೇ ಇರುವುದರಿಂದ ಬಿಟ್ಟಿದ್ದೇವೆ, ಕಾವಲುಗಾರನ ಅಗತ್ಯ ಇದೆ. ಪೊಲೀಸ್ ಇಲಾಖೆಯೊಂದಿಗೆ ವರ್ತಕರ ಸಂಘದ ಸದಾ ಇದೆ ಎಂದರು.
ನಟ, ನಿರ್ದೇಶಕ ಸುಂದರ ರೈ ಮಂದಾರ ಮಾತನಾಡಿ, ನಮ್ಮ ಜಾಗೃತೆ ನಾವೇ ಮಾಡಬೇಕು, ಪೊಲೀಸರು ಎಷ್ಟೇ ಶ್ರಮವಹಿಸಿದರೂ ಕೆಲವೊಮ್ಮೆ ನಮ್ಮ ಅಜಾಗರೂಕತೆಯಿಂದ ಕಳ್ಳತನ ನಡೆಯುತ್ತದೆ. ಊರಿನವರೇ ಊರನ್ನು ಕಾಯುವ ವ್ಯವಸ್ಥೆ ಆಗಬೇಕು. ತಡರಾತ್ರಿ ವೇಳೆ ಸಂಚರಿಸುವ ಪ್ರತಿಯೊಂದು ವಾಹನವನ್ನು ತಡೆದು ನಿಲ್ಲಿಸಿ ವಿಚಾರಿಸುವ ಕೆಲಸ ಪೊಲೀಸರು ಮಾಡಬೇಕು ಎಂದು ತಿಳಿಸಿದರು. ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮಾತನಾಡಿ, ಉರಿಯದೇ ಇರುವ ಬೀದಿದೀಪಗಳನ್ನು ದುರಸ್ತಿ ಮಾಡಿಸುತ್ತಿದ್ದೇವೆ. ಗ್ರಾಮಕ್ಕೆ ವಸ್ತುಗಳನ್ನು ಮಾರಾಟ ಮಾಡಿಕೊಂಡು ಬರುವ ಅಪರಿಚಿತರು ಪಂಚಾಯತ್‌ನಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು ಈ ಬಗ್ಗೆ ಗ್ರಾಮಸ್ಥರು ಗ್ರಾಪಂಗೆ ಮಾಹಿತಿ ಕೊಡುವಂತೆ ಅಲ್ಲಲ್ಲಿ ಬೋರ್ಡ್‌ಗಳನ್ನು ಅಳವಡಿಸಿದ್ದೇವೆ. ಕುಂಬ್ರದಲ್ಲಿ ಕಳ್ಳತನ ನಡೆಸಿದ ಕಳ್ಳರನ್ನು ಶೀಘ್ರದಲ್ಲಿ ಬಂಧಿಸಿ ಎಂಬ ಆಗ್ರಹದೊಂದಿಗೆ ಇಲಾಖೆಯೊಂದಿಗೆ ಸದಾ ಕೈಜೋಡಿಸುತ್ತೇವೆ ಎಂದು ಹೇಳಿದರು.
ಕೆದಂಬಾಡಿ ಗ್ರಾಪಂ ನಿಕಟಪೂರ್ವ ಅಧ್ಯಕ್ಷ ರತನ್ ರೈ ಕುಂಬ್ರ ಮಾತನಾಡಿ, ಮನೆ, ಅಂಗಡಿಗಳಿಗೆ ಎಮರ್‌ಜೆನ್ಸಿ ಸೈರನ್‌ಗಳನ್ನು ಅಳವಡಿಸುವುದು ಸೂಕ್ತ ಇದರಿಂದ ಕಳ್ಳರು ಬಂದಿದ್ದಾರೆ ಎಂಬುದು ನೆರೆಯ ಮನೆಯವರಿಗೆ ತಿಳಿಯಲು ಸಾಧ್ಯವಿದೆ. ಒಟ್ಟಿನಲ್ಲಿ ನಮ್ಮ ಜಾಗೃತಿಯನ್ನು ನಾವೇ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು. ಕುಕ್ಕುಮುಗೇರು ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ವಿಜಯಕುಮಾರ್ ರೈ ಮಾತನಾಡಿ, ಗ್ರಾಮದಲ್ಲಿರುವ ದೈವಸ್ಥಾನಗಳಿಗೂ ಸೂಕ್ತವಾದ ಭದ್ರತೆಯನ್ನು ಇಲಾಖೆ ನೀಡಬೇಕಾಗಿದೆ. ನಮ್ಮಿಂದ ಸಾಧ್ಯವಾಗುವ ಎಲ್ಲಾ ರೀತಿಯ ಭದ್ರತೆಯನ್ನು ಮಾಡುತ್ತಿದ್ದೇವೆ, ಪೊಲೀಸ್ ಇಲಾಖೆ ಕೂಡ ನಮ್ಮ ಜೊತೆ ಕೈಜೋಡಿಸಬೇಕಾಗಿದೆ ಎಂದರು.
ಕೃಷಿಕ ಚಿಲ್ಮೆತ್ತಾರು ಸಂತೋಷ್ ಭಂಡಾರಿಯವರು ಮಾತನಾಡಿ, ಮನೆಗಳಿಗೆ ಸೈರನ್ ಇಡುವುದು ಒಳ್ಳೆಯ ಯೋಚನೆ, ಬೀದಿ ದೀಪಗಳು ಸರಿಯಾಗಿದ್ದರೆ ಒಂದಷ್ಟು ಕಳ್ಳರ ಹಾವಳಿಯನ್ನು ತಡೆಯಲು ಸಾಧ್ಯವಿದೆ ಎಂದರು. ಉದ್ಯಮಿ ನಾರಾಯಣ ಪೂಜಾರಿ ಕುರಿಕ್ಕಾರ ಮಾತನಾಡಿ, ವಿವಿಧ ವಸ್ತುಗಳನ್ನು ಮಾರಾಟ ಮಾಡಿಕೊಂಡು ಗ್ರಾಮಕ್ಕೆ ಬರುವ ಅಪರಿಚಿತರು ಜಾಸ್ತಿಯಾಗುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ, ಗ್ರಾಪಂ ಸೂಕ್ತ ಕ್ರಮ ಕೈಗೊಳ್ಳಬೇಕು ಅವರ ಆಧಾರ್ ಕಾರ್ಡ್, ಗುರುತು ಪತ್ರಗಳನ್ನು ಪಡೆದುಕೊಂಡೇ ಅವರಿಗೆ ಮಾರಾಟಕ್ಕೆ ಅನುಮತಿ ನೀಡಬೇಕು ಎಂದು ತಿಳಿಸಿದರು.
ದರ್ಬೆತ್ತಡ್ಕ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಕಲ್ಲಡ್ಕ ಮಾತನಾಡಿ, ನಮ್ಮ ದರ್ಬೆತ್ತಡ್ಕ ಭಾಗಕ್ಕೂ ಬೀಟ್ ಪೊಲೀಸರು ಬರುವ ವ್ಯವಸ್ಥೆ ಆಗಬೇಕು ಎಂದರು. ಹಿರಿಯ ಉದ್ಯಮಿ ಚಿಕ್ಕಪ್ಪ ನಾಕ್ ಮಾತನಾಡಿ,ಪೊಲೀಸ್ ಇಲಾಖೆ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಇದಕ್ಕೆ ನಾವೆಲ್ಲರೂ ಒಗ್ಗಟ್ಟಾಗಿ ಸಹಕಾರ ನೀಡಬೇಕು ಎಂದರು. ಉದ್ಯಮಿ ಬಾಬು ಪೂಜಾರಿ ಬಡಕ್ಕೋಡಿ ಮಾತನಾಡಿ, ಹಾಸಿಗೆ ಮಾರುವವರು ಹೆಚ್ಚಾಗಿದ್ದಾರೆ. ಒಂದು ವಾರ, ಎರಡೂ ವಾರಕ್ಕೆ ರೂಮ್ ಕೇಳುತ್ತಾರೆ ಈ ಬಗ್ಗೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದರು. ರಿಕ್ಷಾ ಚಾಲಕ ಬಶೀರ್ ಕಡ್ತಿಮಾರ್ ಮಾತನಾಡಿ, ಪೊಲೀಸ್ ಇಲಾಖೆಗೆ ಕುಂಬ್ರ ಸ್ನೇಹ ಸಾಗರ ರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ದೈವಸ್ಥಾನ, ಮಸೀದಿ, ಭಜನಾ ಮಂದಿರ ಇತ್ಯಾದಿ ಧಾರ್ಮಿಕ ಕೇಂದ್ರಗಳ ಅಧ್ಯಕ್ಷರು, ಪದಾಧಿಕಾರಿಗಳು, ವರ್ತಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು. ಕಾರ್ಯಕ್ರಮ ಸಂಯೋಜಿಸಿದ್ದ ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್ ಕಾರ್ಯಾಧ್ಯಕ್ಷ ರಕ್ಷಿತ್ ರೈ ಮುಗೇರು ಸ್ವಾಗತಿಸಿದರು. ಉದ್ಯಮಿ ಅಶೋಕ್ ಪೂಜಾರಿ ಬೊಳ್ಳಾಡಿ ವಂದಿಸಿದರು.
ಸಿಸಿಟಿವಿ ಕ್ಯಾಮರ ರಸ್ತೆಯನ್ನು ಕವರ್ ಮಾಡುವಂತಿರಲಿ
ಹೆಚ್ಚಾಗಿ ಅಂಗಡಿ, ವಾಣಿಜ್ಯ ಮಳಿಗೆಯವರು ತಮ್ಮ ಅಂಗಡಿ ಒಳಗೆ, ಕ್ಯಾಶ್‌ಕೌಂಟರ್‌ಗೆ ಮಾತ್ರ ಸಿಸಿಟಿವಿ ಕ್ಯಾಮರ ಕವರ್ ಆಗುವಂತೆ ಇಟ್ಟಿರುತ್ತಾರೆ. ಇದರ ಬದಲು ಒಂದು ಕ್ಯಾಮರವನ್ನು ರಸ್ತೆ ಕವರ್ ಆಗುವಂತೆ ಇಡುವುದು ಸೂಕ್ತ ಏಕೆಂದರೆ ಕಳ್ಳರು ಯಾವ ಕಡೆಯಿಂದ ಬಂದರು, ಯಾವ ವಾಹನದಲ್ಲಿ ಬಂದರು ಎಂಬುದನ್ನು ಇದರಿಂದ ತಿಳಿದುಕೊಳ್ಳಬಹುದು. ಆದ್ದರಿಂದ ಪ್ರತಿಯೊಬ್ಬ ವರ್ತಕರು ತಮ್ಮ ಒಂದು ಸಿಸಿಟಿವಿ ಕ್ಯಾಮರವನ್ನು ರಸ್ತೆಗೆ ಫೋಕಸ್ ಆಗುವಂತೆ ಅಳವಡಿಸಿಕೊಳ್ಳಿ ಎಂದು ಡಿವೈಎಸ್‌ಪಿ ಗಾನ ಪಿ.ಕುಮಾರ್ ಸಲಹೆ ನೀಡಿದರು.
ತ್ವರಿತ ಪೊಲೀಸ್ ಸೇವೆಗೆ 112 ಗೆ ಕರೆ ಮಾಡಿ
ನಿಮ್ಮೂರಿನಲ್ಲಿ ಏನೇ ಘಟನೆ ಸಂಭವಿಸಿದರೂ ನೀವು ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ಹೇಳುವುದು ಅಥವಾ ಪೊಲೀಸರ ಮೊಬೈಲ್ ನಂಬರ್ ಇಲ್ಲದೇ ಇರುವುದು ಈ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ, ಘಟನೆ ನಡೆದ ತಕ್ಷಣವೇ ನೀವು ಟೋಲ್‌ಫ್ರೀ ನಂಬರ್ 112 ಗೆ ಕರೆ ಮಾಡಿದರೆ ಕರೆ ಮಾಡಿದ 15 ರಿಂದ 30 ನಿಮಿಷದೊಳಗೆ ಪೊಲೀಸರು ನಿಮ್ಮೂರಿಗೆ ತಲುಪುತ್ತಾರೆ ಎಂದು ಡಿವೈಎಸ್‌ಪಿ ಗಾನ ಪಿ.ಕುಮಾರ್ ತಿಳಿಸಿದರು.
ಆನ್‌ಲೈನ್ ಮೋಸ ಆಗಿದ್ದರೆ 1930 ಗೆ ಕರೆ ಮಾಡಿ
ಇತ್ತೀಚಿನ ದಿನಗಳಲ್ಲಿ ಮೋಸ ಹೋಗುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಅದರಲ್ಲೂ ಆನ್‌ಲೈನ್ ಮೋಸ ಹೆಚ್ಚಾಗಿ ನಡೆಯುತ್ತಿದೆ. ಅಪರಿಚಿತರು ಕರೆ ಮಾಡಿ ಓಟಿಪಿ ಪಡೆದುಕೊಂಡು ಬ್ಯಾಂಕ್ ಖಾತೆ ಲೂಟುವುದು, ವಿವಿಧ ಆಮಿಷ ಒಡ್ಡಿ ನಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಅವರ ಖಾತೆಗೆ ಟ್ರಾನ್ಸ್‌ಫರ್ ಮಾಡಿಸಿಕೊಳ್ಳುವುದು ಇತ್ಯಾದಿ ಸೈಬರ್ ಕೇಸ್‌ಗಳು ನಡೆಯುತ್ತದೆ. ಈ ತರದ ಯಾವುದೇ ಪ್ರಕರಣ ಸಂಭವಿಸಿದರೆ ತಕ್ಷಣವೇ 1930 ಗೆ ಕರೆ ಮಾಡಿದರೆ ನಿಮ್ಮ ಅಕೌಂಟ್‌ನಿಂದ ಹ್ಯಾಕರ್‌ಗಳು ಟ್ರಾನ್ಸ್‌ಫರ್ ಮಾಡಿಸಿಕೊಂಡ ಹಣವನ್ನು ಮರಳಿ ನಿಮ್ಮ ಖಾತೆಗೆ ಸೇರಿಸುವಲ್ಲಿ ಸೈಬರ್ ಪೊಲೀಸರು ನಿಮಗೆ ಸಹಾಯ ಮಾಡಲಿದ್ದಾರೆ ಎಂದು ಡಿವೈಎಸ್‌ಪಿ ತಿಳಿಸಿದರು.
ವರ್ತಕರ ಮನವಿಗೆ ಸ್ಪಂದಿಸಿದ್ದೇವೆ
ಕುಂಬ್ರದ ಪರ್ಪುಂಜ,ಕುಟ್ಟಿನೋಪಿನಡ್ಕ ಪರಿಸರದಲ್ಲಿ ಸಣ್ಣಪುಟ್ಟ ಕಳ್ಳತನ ನಡೆದಿದೆ ಎಂಬ ಬಗ್ಗೆ ಕುಂಬ್ರ ವರ್ತಕರ ಸಂಘದವರು ಠಾಣೆಗೆ ಮನವಿ ನೀಡಿದ್ದರು ಇದಕ್ಕೆ ತಕ್ಷಣವೇ ಸ್ಪಂದಿಸಿದ ನಾವು ಆ ಭಾಗದಲ್ಲಿ ರಾತ್ರಿ ವೇಳೆ ನಡೆದುಕೊಂಡೇ ಓಡಾಡಿದ್ದೇವೆ. ಪ್ರತಿದಿನ ರಾತ್ರಿ ವೇಳೆ ಈ ಭಾಗಗಳಿಗೆ ಭೇಟಿ ಕೊಡುತ್ತಿದ್ದೇವೆ ಎಂದು ಎಸ್.ಐ ಧನಂಜಯ್ ತಿಳಿಸಿದರು.
‘ ಕುಂಬ್ರದಲ್ಲಿ ನಡೆದ ಸರಣಿ ಕಳ್ಳತನ ಹಾಗೇ ನೆರೆಯ ಗ್ರಾಮದಲ್ಲಿ ನಡೆದ ಮನೆ ದರೋಡೆ ಇತ್ಯಾದಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಪೊಲೀಸ್ ಇಲಾಖೆಯಿಂದ ಜನರಿಗೆ ಮಾಹಿತಿ ನೀಡುವ ಸಲುವಾಗಿ ಈ ಜನಜಾಗೃತಿ ಸಭೆಯನ್ನು ಹಮ್ಮಿಕೊಂಡಿದ್ದೇವೆ. ಕಳ್ಳತನ ಮುಕ್ತ ಗ್ರಾಮ ನಮ್ಮದಾಗಲಿ ಎಂಬುದೇ ನಮ್ಮೆಲ್ಲರ ಆಶಯ.’
ರಕ್ಷಿತ್ ರೈ ಮುಗೇರು, ಕಾರ್ಯಾಧ್ಯಕ್ಷರು ಕರ್ನಾಟಕ ಪಬ್ಲಿಕ್ ಸ್ಕೂಲ್ ಕುಂಬ್ರ