ಸೆ.19-21: ಕೋಡಿಂಬಾಡಿಯಲ್ಲಿ 40ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಸಂಭ್ರಮ

0

ಪುತ್ತೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಡಿಂಬಾಡಿ ಇದರ ವತಿಯಿಂದ 40ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ.19ರಿಂದ 21ರವರೆಗೆ ಕೋಡಿಂಬಾಡಿ ಅಶ್ವತ್ಥಕಟ್ಟೆ ವಠಾರದಲ್ಲಿ ನಡೆಯಲಿದೆ.


ಸೆ.19ರಂದು ಬೆಳಿಗ್ಗೆ ಶ್ರೀ ಮಹಾಗಣಪತಿ ಪ್ರತಿಷ್ಠಾ ಪೂಜೆ ನಡೆದ ಬಳಿಕ ಮಂಗಳೂರು ಸಹಕಾರ ಇಲಾಖೆಯ ಅಧೀಕ್ಷಕ ಬಿ.ನಾಗೇಂದ್ರ ಆಚಾರ್ಯ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ಗಣಹೋಮ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ವಿನಾಯಕನಗರ ಯುವಶಕ್ತಿ ಗೆಳೆಯರ ಬಳಗದಿಂದ ಭಜನಾ ಸೇವೆ, ಕೋಡಿಂಬಾಡಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಕೋಡಿಂಬಾಡಿ ಗ್ರಾ.ಪಂ.ಅಧ್ಯಕ್ಷೆ ಮಲ್ಲಿಕಾ ಅಶೋಕ್ ಪೂಜಾರಿ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ, ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ನಂತರ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಪುತ್ತೂರು ಶ್ರೀ ಶಾರದಾ ಕಲಾ ಕೇಂದ್ರ ಟ್ರಸ್ಟ್ ಇವರಿಂದ ನೃತ್ಯ ರಸಸಂಜೆ, ವಿನಾಯಕ ಚರಿತೆ ನೃತ್ಯ ರೂಪಕ ಜರಗಲಿದೆ. ವನಿತಾ ಸಮಾಜ ಮತ್ತು ವಿನಾಯಕನಗರ ಯುವಶಕ್ತಿ ಗೆಳೆಯರ ಬಳಗದವರು ಈ ದಿನ ಸ್ವಯಂಸೇವಕರಾಗಿ ಸಹಕರಿಸಲಿದ್ದಾರೆ.


ಸೆ.20ರಂದು ಬೆಳಿಗ್ಗೆ ವೇದಮೂರ್ತಿ ಶ್ರೀವತ್ಸ ಕೆದಿಲಾಯ ನೇತೃತ್ವದಲ್ಲಿ 108 ತೆಂಗಿನಕಾಯಿ ಗಣಯಾಗ, ಗಣಯಾಗದ ಪೂರ್ಣಾಹುತಿ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಕೋಡಿಂಬಾಡಿ ಅಶ್ವತ್ಥಕಟ್ಟೆ ಧರ್ಮಶ್ರೀ ಭಜನಾ ಮಂಡಳಿಯವರಿಂದ ಭಜನಾ ಸೇವೆ, ಶ್ರೀ ಶಾರದಾ ಕಲಾಕೇಂದ್ರದ ಉಪ್ಪಿನಂಗಡಿ ಶಾಖೆಯವರಿಂದ ಭರತನಾಟ್ಯ, ಬಂಟ್ವಾಳ ಅಜ್ಜಿಬೆಟ್ಟು ಸರಕಾರಿ ಪ್ರೌಢಶಾಲೆಯ ಮುಖ್ಯಗುರು ಗೀತಾ ಎ. ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಬಳಿಕ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಡೆದ ನಂತರ ಮಂಗಳೂರು ಜೈಮಾತಾ ಕಲಾ ತಂಡದವರಿಂದ ಗುಸು ಗುಸು ಉಂಡುಗೆ ತುಳು ಹಾಸ್ಯಮಯ ನಾಟಕ ಪ್ರದರ್ಶನವಾಗಲಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೋಡಿಂಬಾಡಿ ಒಕ್ಕೂಟ ಮತ್ತು ಧರ್ಮಶ್ರೀ ಕಲಾವೃಂದ ಅಶ್ವತ್ಥಕಟ್ಟೆ ಕೋಡಿಂಬಾಡಿ ಇವರು ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಸೆ.21ರಂದು ಬೆಳಿಗ್ಗೆ ತಿರುಪತಿ ತಿರುಮಲ ಟ್ರಸ್ಟ್ ಮಹಿಳಾ ಭಜನಾ ಮಂಡಳಿ ಬೊಳುವಾರು ಇವರಿಂದ ಭಜನಾ ಸೇವೆ ನಡೆಯಲಿದೆ. ನಂತರ ಗಣಹೋಮ, ಅಶ್ವತ್ಥಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ವಿಸರ್ಜನಾ ಪೂಜೆ ನಡೆಯಲಿದೆ. ನಂತರ ಶ್ರೀ ಮಹಾಗಣಪತಿಯ ಶೋಭಾಯಾತ್ರೆ ಅಶ್ವತ್ಥಕಟ್ಟೆ ವಠಾರದಿಂದ ಹೊರಟು ಸೇಡಿಯಾಪು, ದಾರಂದಕುಕ್ಕುವರೆಗೆ ಸಾಗಿ ಮರಳಿ ಕೋಡಿಂಬಾಡಿಯಿಂದಾಗಿ ವಿನಾಯಕನಗರ, ಮಠದಬೆಟ್ಟು ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬಳಿಯಿಂದ ಹಿಂತಿರುಗಿ ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದವರೆಗೆ ಸಾಗಿ ಶಾಂತಿನಗರದ ಕೆರೆಯಲ್ಲಿ ಶ್ರೀ ಮಹಾಗಣಪತಿ ವಿಗ್ರಹದ ಜಲಸ್ಥಂಭನ ನಡೆಯಲಿದೆ. ಈ ದಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇಡಿಯಾಪು ಒಕ್ಕೂಟದವರು ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

LEAVE A REPLY

Please enter your comment!
Please enter your name here