ವಿಟ್ಲ: ವಿಟ್ಲ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ 2022-22ನೇ ಸಾಲಿನಲ್ಲಿ 186.78 ಕೋಟಿ ರೂ.ಗೂ ಮಿಕ್ಕಿ ವ್ಯವಹಾರ ನಡೆಸಿದ್ದು, ಸುಮಾರು 83.96 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಸೆ.23ರಂದು ಬೆಳಗ್ಗೆ 11ಕ್ಕೆ ಪೊನ್ನೊಟ್ಟು ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ವಾರ್ಷಿಕ ಮಹಾ ಸಭೆ ನಡೆಯಲಿದೆ ಎಂದು ಸಂಘದ ಅದ್ಯಕ್ಷ ನರಸಪ್ಪ ಪೂಜಾರಿ ಎನ್. ಹೇಳಿದರು.ಅವರು ಸಹಕಾರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
2022-23ನೇ ಸಾಲಿನಲ್ಲಿ 134 ಮಂದಿ ಸದಸ್ಯರಾಗಿ ಸೇರ್ಪಡೆಯಾಗಿದ್ದು, 25.39ಲಕ್ಷ ರೂ. ಪಾಲು ಬಂಡವಾಳ ಜಮೆಯಾಗಿದೆ. ಸದ್ರಿ ವರ್ಷದಲ್ಲಿ 5218 ಎ ತರಗತಿ ಸದಸ್ಯರಿದ್ದು, 3.21ಕೋಟಿ ರೂ. ಪಾಲು ಬಂಡವಾಳ ಹೊಂದಿದೆ. 29.11 ಕೋಟಿ ಠೇವಣಾತಿಯನ್ನು ಹೊಂದಿ ಶೇ.11.07 ಹೆಚ್ಚಳವಾಗಿದೆ. ಸಂಘದ ಸದಸ್ಯರ ಅವಶ್ಯಕತೆಗೆ ಅನುಗುಣವಾಗಿ 28.71 ಕೋಟಿ ಸಾಲ ನೀಡಿದ್ದು, ಇದರಲ್ಲಿ ಮಂಗಳಾ ಕಿಸಾನ್ ಕಾರ್ಡ್ ಹೊಂದಿದ ರೈತ ಸದಸ್ಯರಿಗೆ 13.11ಕೋಟಿ ಬೆಳೆ ಸಾಲ ವಿತರಿಸಲಾಗಿದೆ. ಶೇ.95.31 ರಷ್ಟು ವಸೂಲಾತಿ ಮಾಡಲಾಗಿದೆ. ಸರ್ಕಾರದಿಂದ 58ಲಕ್ಷ ಎಸ್. ಟಿ. ಯಂ.ಟಿ. ಸಾಲಗಳ ಬಡ್ಡಿ ಮತ್ತು 1.48ಲಕ್ಷ ಯಸ್ ಯಚ್ ಜಿ ಸಾಲದ ಬಡ್ಡಿ ಬರಲು ಬಾಕಿ ಇದೆ. ಆಹಾರ ಧಾನ್ಯ, ಸೀಮೆ ಎಣ್ಣೆ, ಕೊಂಕಣ ಗ್ಯಾಸ್, ರಾಸಾಯನಿಕ ಗೊಬ್ಬರ, ಕೀಟನಾಶಕಗಳು 52.18 ಲಕ್ಷ ರೂ ಮೌಲ್ಯದ್ದು ಮಾರಾಟವಾಗಿದ್ದು, 5.43ಲಕ್ಷ ರೂ. ಲಾಭ ಬಂದಿದೆ ಎಂದರು.
ಮಹಾಸಭೆಯ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಯಲ್ಲಿ ಶೇ.80ಕ್ಕಿಂತ ಅಧಿಕ ಅಂಕಗಳಿಸಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಂಘ ವ್ಯವಹಾರದ ಪ್ರಗತಿಯನ್ನು ಗುರುತಿಸಿ ವಿಶೇಷ ಪ್ರೋತ್ಸಾಹಕ ಪ್ರಶಸ್ತಿಯನ್ನು ನೀಡಿದೆ. ಸುಸಜ್ಜಿತ ಗೋದಾಮು ನಿರ್ಮಾಣದ ಕೆಲಸವನ್ನು ಸಂಘದ ಪ್ರಧಾನ ಕಛೇರಿಯ ಮುಂಭಾಗದಲ್ಲಿ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ಉಪಾಧ್ಯಕ್ಷ ಮಹಾಬಲೇಶ್ವರ ಭಟ್ ಎ., ನಿರ್ದೇಶಕರಾದ ಉದಯ ಕುಮಾರ್ ಎನ್., ದಯಾನಂದ ಶೆಟ್ಟಿ ಉಜಿರೆಮಾರ್, ಸದಾನಂದ ಗೌಡ ಸೇರಾಜೆ, ರಾಘವೇಂದ್ರ ಪೈ ಎ., ದಿನೇಶ ಕೆ., ವಾಸು ಸಿ. ಎಚ್., ಶಿವಪ್ಪ ನಾಯ್ಕ, ಗೌರಿ ಎಸ್. ಎನ್. ಭಟ್, ಸಂಗೀತಾ ಎನ್., ಕವಿತಾ ಕೆ. ಎಲ್., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ್ವರ ಬಿ. ಉಪಸ್ಥಿತರಿದ್ದರು.