ಪುತ್ತೂರು: ದರ್ಬೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ನ್ಯಾಯಾಧೀಶರ ವಸತಿ ಗೃಹಗಳ ಕಾಮಗಾರಿಗಳು ಅರ್ಧದಲ್ಲಿ ನಿಂತು ಹೋಗಿದ್ದು, ಈಗಾಗಲೇ ನಿರ್ಮಾಣ ಹಂತದಲ್ಲಿರುವ ತಳಪಾಯ ರಚನೆ ಕಟ್ಟಡ ಸಾಮಾಗ್ರಿಗಳು ತುಕ್ಕು ಹಿಡಿದು ಹಾಳಾಗುತ್ತಿದ್ದು ಈ ಕುರಿತು ಸೂಕ್ತ ಕ್ರಮಕ್ಕಾಗಿ ಚಿಕ್ಕಮುಡ್ನೂರು ಕಲಿಯುಗ ಸೇವಾ ಸಮಿತಿ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಶಾಸಕರಿಗೆ, ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಗಿದೆ.
ಕಳೆದ ಹಲವು ವರ್ಷಗಳಿಂದ ಇಲ್ಲಿನ ಹಳೇಯ ವಸತಿ ಗೃಹಗಳು ಕುಸಿದು ದುರಸ್ತಿಗೊಳ್ಳದೆ ನೆನೆಗುದಿಯಲ್ಲಿ ಇದ್ದವು. ಈ ಬಗ್ಗೆ ಸಮಿತಿ ವತಿಯಿಂದ ನಿರಂತರ ಒತ್ತಡಗಳನ್ನು ತರುತ್ತಾ ಬರಲಾಗಿತ್ತು. ಇದೀಗ ಹಳೇ ಕಟ್ಟಡಗಳನ್ನು ತೆರವುಗೊಳಿಸಿ ಹೊಸ ಪ್ಲಾಟ್ ಮಾದರಿಯ ಬಹುಮಹಡಿ ಕಟ್ಟಡಕ್ಕೆ 560 ಲಕ್ಷ ರೂಗಳು ಮಂಜೂರುಗೊಂಡು ಕಟ್ಟಡದ ತಳಪಾಯ ರಚನೆ ಕಾಮಗಾರಿ ನಡೆಯುತ್ತಿರುವಾಗಲೇ ಮತ್ತೆ ಕಾಮಗಾರಿ ನಿಂತು ಹೋಗಿರುತ್ತದೆ. ಈ ಬಗ್ಗೆ ಪುತ್ತೂರು ಲೋಕೋಪಯೋಗಿ ಇಲಾಖೆಯಲ್ಲಿ ವಿಚಾರಿಸಿದಾಗ ಸಮರ್ಪಕ ಉತ್ತರ ಸಿಗುತ್ತಿಲ್ಲ.
ಕಟ್ಟಡ ತಳಪಾಯ ಕಾಮಗಾರಿ ಪಿಲ್ಲರ್, ಭೀಮುಗಳಿಗೆ ಕಬ್ಬಿಣದ ರಾಡ್ಗಳನ್ನು ಅಳವಡಿಸಿದೆಯಾದರು ಕೆಲಸಗಳು ನಿಂತು ಹೋಗಿರುವುದರಿಂದ ಇವುಗಳು ತುಕ್ಕು ಹಿಡಿದು ಕಟ್ಟಡದ ಧಾರಣಾ ಸಾಮರ್ಥ್ಯ ನಷ್ಟವಾಗುವ ಲಕ್ಷಣಗಳು ಕಂಡು ಬರುತ್ತಿದ್ದು ಸೂಕ್ತ ಕ್ರಮಕ್ಕಾಗಿ ಮನವಿಯಲ್ಲಿ ಒತ್ತಾಯಿಸಲಾಗದೆ.