ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘದ ವತಿಯಿಂದ ಬನ್ನೂರಿನ ಸಾರಿಗೆ ಅಧಿಕಾರಿ ಎಚ್.ವಿಶ್ವನಾಥ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು. ಬಪ್ಪಳಿಗೆ ಸರ್ಕಲ್ ಬಳಿ ಸುಳ್ಯದಿಂದ ಮಂಗಳೂರು ಕಡೆಗೆ, ಮಂಗಳೂರಿನಿಂದ ಸುಳ್ಯದ ಕಡೆಗೆ ವಾಹನಗಳು ವೇಗವಾಗಿ ಸಂಚರಿಸುತ್ತಿವೆ. ಅಂತೆಯೇ ಜೈನ ಭವನ ಬಳಿಯಿಂದ ಹಾಗೂ ಬಲ್ನಾಡು ಬಳಿಯಿಂದಲೂ ವಾಹನಗಳು ಬರುತ್ತಿರುತ್ತವೆ. ಇದರಿಂದಾಗಿ ಬಪ್ಪಳಿಗೆಯಲ್ಲಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಿಗೆ ತೆರಳುವ ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದು ರಸ್ತೆ ದಾಟುವಂತಾಗಿದೆ. ಈ ನೆಲೆಯಲ್ಲಿ ರಸ್ತೆ ಹಂಪ್ ಹಾಗೂ ಝೀಬ್ರಾ ಕ್ರಾಸಿಂಗ್ ವ್ಯವಸ್ಥೆಯನ್ನು ಕಲ್ಪಿಸಿಕೊಡುವಂತೆ ಮನವಿ ಮಾಡಲಾಯಿತು.
ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ನವನೀತ್, ಕಾರ್ಯದರ್ಶಿ ಪ್ರಿಯಾಲ್ ಆಳ್ವಾ, ತರಗತಿ ಪ್ರತಿನಿಧಿಗಳಾದ ಅಂಕಿತಾ, ಗುರುಪ್ರಸಾದ್, ಮಾನ್ಯ, ಶರಣ್ಯಾ ರೈ ಹಾಗೂ ಶ್ರೀಲಕ್ಷ್ಮಿಯನ್ನೊಳಗೊಂಡ ನಿಯೋಗ ಈ ಮನವಿಯನ್ನು ಸಲ್ಲಿಸಿತು. ಪತ್ರಿಕೋದ್ಯಮ ಉಪನ್ಯಾಸಕ ಹರ್ಷಿತ್ ಪಿಂಡಿವನ ಹಾಗೂ ಕಾಲೇಜಿನ ಮಾಧ್ಯಮ ಕೇಂದ್ರದ ನಿರ್ವಾಹಕ ಪ್ರಮೋದ್ ಈ ಸಂದರ್ಭದಲ್ಲಿ ಹಾಜರಿದ್ದರು. ಮನವಿಯನ್ನು ಸ್ವೀಕರಿಸಿದ ಸಾರಿಗೆ ಅಧಿಕಾರಿ ಎಚ್.ವಿಶ್ವನಾಥ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಲ್ಲದೆ ಆ ಬಗೆಗೆ ಕಾರ್ಯತತ್ಪರವಾಗುವ ನೆಲೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.