ಕಡಬ ರಸ್ತೆಯಲ್ಲಿಯೇ ಆಡಿನ ಹಿಂಡು.. ಪಂಚಾಯತ್ ವಿರುದ್ದ ಸಮರ ಸಾರುತ್ತಿರುವ ಸಾರ್ವಜನಿಕರ ದಂಡು!

0

‘ಪೇಟೆಗೆ ಬರುವ ಸಾಕು ಪ್ರಾಣಿಗಳನ್ನು ಕಂಟ್ರೋಲ್ ಮಾಡಲಾಗವರು ನಾಡಿಗೆ ಬರುವ ಕಾಡಾನೆಯನ್ನು ಓಡಿಸಲು ಸಾಧ್ಯವೇ”

ಹೀಗೊಂದು ಬರಹ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಕಡಬ: ಇಲ್ಲಿನ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಳಾರ, ಕಡಬ ಕೋಡಿಂಬಾಳ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ರಸ್ತೆಯಲ್ಲಿಯೇ ಸಾಕು ಪ್ರಾಣಿಗಳಾದ ಆಡು, ಜಾನುವಾರುಗಳ ದಂಡು ಕಂಡು ಬರುತ್ತಿದೆ, ಅದರಲ್ಲಿ ಆಡಿನ ಹಿಂಡುಗಳ ಸಂಖ್ಯೆಯೇ ಜಾಸ್ತಿಯಾಗಿದೆ. ಇದರಿಂದ ವಾಹನ ಸಂಚಾರರಿಗೆ ತೊಂದರೆಯಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳದ ಪಟ್ಟಣ ಪಂಚಾಯತ್ ಆಡಳಿತದ ವಿರುದ್ದ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಸಖತ್ ಚಾಟಿಯನ್ನು ಬೀಸುತ್ತಿದ್ದಾರೆ. ಇದರಲ್ಲಿ ಉಮೇಶ್ ಬಂಗೇರ ಎಂಬವರು ಹಾಸ್ಯಭರಿತವಾಗಿ ಬರೆದ ಸಂದೇಶ ವೈರಲ್ ಆಗಿದೆ. “ಪೇಟೆಗೆ ಬರುವ ಸಾಕು ಪ್ರಾಣಿಗಳನ್ನು ಕಂಟ್ರೋಲ್ ಮಾಡಲಾಗವರು, ನಾಡಿಗೆ ಬರುವ ಕಾಡಾನೆಯನ್ನು ಓಡಿಸಲು ಸಾಧ್ಯವೇ” ಎಂಬ ಸಂದೇಶ ಇದಕ್ಕೆ ಹಲವಾರು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.

ಹೌದು ಕಡಬ ಪೇಟೆಯಲ್ಲಿ ಸಾಕು ಪ್ರಾಣಿಗಳ ಉಪಟಳ ಇಂದು ನಿನ್ನೆಯದಲ್ಲ, ಒಂದೆಡೆ ಸಾಕು ಪ್ರಾಣಿಗಳು, ಮತ್ತೊಂದೆಡೆ ಬೀದಿ ನಾಯಿಗಳ ಉಪಟಲ, ಸಾಕು ಪ್ರಾಣಿಗಳನ್ನು ತಡೆಯಬಹುದಾದರೂ ಬೀದಿ ನಾಯಿಗಳ ನಿಯಂತ್ರಣ ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲದ ಮಾತು. ಪೇಟೆಗೆ ಬಿಡುವ ಸಾಕು ಪ್ರಾಣಿಗಳ ಮಾಲಕರಿಗೆ ಪಂಚಾಯತ್ ನವರು ಎಷ್ಟು ಹೇಳಿದರೂ ಪೇಟೆಗೆ ಸಾಕು ಪ್ರಾಣಿಗಳನ್ನು ಬಿಡುವವರು ಮಾತ್ರ ಕೇಳುತ್ತಿಲ್ಲ, ಹಿಂದೆ ಪಂಚಾಯತ್ ಅಧ್ಯಕ್ಷರಾಗಿದ್ದ ಹನೀಫ್ ಕೆ.ಎಂ. ರವರು ಈ ಬಗ್ಗೆ ದಿಟ್ಟ ನಿರ್ಧಾರ ತೆಗೆದುಕೊಂಡು ಸಮರವೇ ಸಾರಿದ್ದರು, ಏನು ಮಾಡಿದರೂ ಆರೋಪ ಪ್ರತ್ಯಾರೋಪ, ಪರ ವಿರೋಧಗಳು ಇದ್ದೇ ಇರುತ್ತದೆ. ಇದೀಗ ಹಲವಾರು ಸಮಯದಿಂದ ಕಡಬ ಪೇಟೆಯಲ್ಲಿ ಬೆಳಗ್ಗೆಯಿಂದ ರಾತ್ರಿಯವರೆಗೆ ರಸ್ತೆಯಲ್ಲಿಯೇ ಬೀಡು ಬಿಡುತ್ತಿರುವ ಆಡಿನ ಹಿಂಡುಗಳ ಬಗ್ಗೆ ಕಡಬ ಪಟ್ಟಣ ಪಂಚಾಯತ್ ಗೆ ದೂರು ನೀಡಿದರೂ, ಅವರು ಇದರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ವ್ಯಕ್ತವಾಗುತ್ತಿದೆ.
ಇನ್ನು ಮುಂದೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಈ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here